ಯಾದಗಿರಿ: ಜಗಳ ಬಿಡಿಸಲು ಹೋಗಿ ಕೊಲೆಯಾದ ಬಡಪಾಯಿ
ಜಗಳ ಬಿಡಿಸಲು ಹೋದ ವ್ಯಕ್ತಿಯನ್ನೇ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿ: ಆ ವ್ಯಕ್ತಿ ತಳ್ಳೋ ಗಾಡಿಯಲ್ಲಿ ಸಣ್ಣ ಹೋಟೆಲ್ ನಡೆಸುತ್ತಿದ್ದ. ತಾನಾಯ್ತು ತನ್ನ ಮನೆ ಆಯ್ತು ಅಂತ ಇದ್ದು ಯಾರ ತಂಟೆಗೆ ಹೋಗ್ತಾಯಿರಲಿಲ್ಲ. ಆದರೆ ಪತ್ನಿ ತವರು ಮನೆಗೆ ಹೋಗಿದ್ದಾಳೆ ಅಂತ ಕೆಲಸ ಮುಗಿಸಿಕೊಂಡು ರಾತ್ರಿ ಊಟಕ್ಕೆ ಹೋಟೆಲ್ಗೆ ಹೋಗಿದ್ದ. ಆದರೆ ಬೇರೆಯವರ ಜಗಳ ಬಿಡಿಸಲು ಹೋಗಿ ಕೊಲೆಯಾಗಿದ್ದಾನೆ (Murder). ಇಲ್ಲಿ ಆಗಿದ್ದು ಕೊಲೆಯಾಗಬೇಕಿದ್ದವನು ಬದುಕಿದ್ದರೆ ಜಗಳ ಬಿಡಿಸಲು ಹೋದವನು ಕೊಲೆಯಾಗಿದ್ದಾನೆ. ಹಾಗಾದರೆ ನಡೆದಿದಾದ್ದರೂ ಏನು ಅಂತೀರಾ? ಈ ಸ್ಟೋರಿ ನೋಡಿ.
ಈ ಭೀಕರ ಕೊಲೆ ಯಾದಗಿರಿ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಯಾದಗಿರಿ ನಗರದ ನಿವಾಸಿ 44 ವರ್ಷದ ಶ್ರೀನಿವಾಸ್ ಕೊಲೆಯಾದ ವ್ಯಕ್ತಿ. ಗಂಡ ಹೆಂಡ್ತಿ ಜಗಳದಲ್ಲಿ ಕುಸು ಬಡವಾಯ್ತು ಎನ್ನುವ ಹಾಗೆ ಇಬ್ಬರ ಮದ್ಯೆ ನಡೆದ ಜಗಳ ಬಿಡಿಸಲು ಹೋಗಿ ಶ್ರೀನಿವಾಸ್ ಕೊಲೆಯಾಗಿದ್ದಾನೆ.
ಯಾದಗಿರಿ ನಿವಾಸಿ ಚಂದ್ರಶೇಖರ್ ಮದ್ಯದಂಗಡಿ ನಡೆಸುತ್ತಿದ್ದಾನೆ. ಎಂದಿನಂತೆ ಬಾರ್ ಪಕ್ಕದ ಗ್ಯಾರೇಜ್ ಬಳಿ ತನ್ನ ಕಾರು ಪಾರ್ಕ್ ಮಾಡುತ್ತಿದ್ದ. ನಿನ್ನೆಯೂ ಸಹ ಕಾರು ಪಾರ್ಕ್ ಮಾಡಿದ್ದ. ರಾತ್ರಿ ವೇಳೆ ಬಾರು ಮುಚ್ಚಿಕೊಂಡು ಮನೆಗೆ ಹೊರಟಿದ್ದ. ಪಾರ್ಕ್ ಮಾಡಿದ್ದ ಕಾರು ಹೊರ ತೆಗೆಯಲು ಹೋಗಿದ್ದಾನೆ. ಆದರೆ ಪಕ್ಕದಲ್ಲೇ ಇದ್ದ ಹೋಟೆಲ್ಗೆ ಊಟ ಮಾಡಲು ಬಂದಿದ್ದ ಗ್ರಾಹಕರು ಕಾರಿನ ಹಿಂದೆ ಬೈಕ್ಗಳನ್ನ ನಿಲ್ಲಿಸಿದ್ದು ಕಾರು ತೆಗೆಯಲು ಬಾರದಂತಾಗಿತ್ತು. ಇದೆ ಕಾರಣಕ್ಕೆ ಚಂದ್ರಶೇಖರ್ ಹೋಟೆಲ್ ಮಾಲೀಕರಿಗೆ ಹೋಗಿ ಹೇಳಿದ್ದಾನೆ.
ಕಾರು ತೆಗೆಯಬೇಕು ನಿಮ್ಮ ಹೋಟೆಲ್ಗೆ ಬಂದ ಗ್ರಾಹಕರು ಕಾರಿನ ಹಿಂದೆ ಬೈಕ್ ನಿಲ್ಲಿಸಿದ್ದಾರೆ, ತೆಗೆಯಲು ಹೇಳಿ ಅಂತ ಇಷ್ಟೇ ಕೇಳಿದ್ದಾನೆ. ಆದರೆ ಈ ಸಣ್ಣ ವಿಚಾರಕ್ಕೆ ಹೋಟೆಲ್ ಮಾಲೀಕರ ಹಾಗೂ ಕಾರು ಮಾಲೀಕರ ಮಧ್ಯೆ ಜಗಳವಾಗಿದೆ. ಈ ವೇಳೆ ಇದೇ ಹೊಟೇಲ್ಗೆ ಊಟ ಮಾಡಲೆಂದು ಬಂದ ಶ್ರೀನಿವಾಸ್ ಜಗಳ ಮಾಡುತ್ತಿರುವುದನ್ನು ನೋಡಿ ಬಿಡಿಸಲು ಹೋಗಿದ್ದಾರೆ.
ಇದನ್ನೂ ಓದಿ: ಗದಗ ಹೆದ್ದಾರಿಯಲ್ಲಿ ಸಿಕ್ತು ಯುವಕನ ಶವ, ಯುವ ಜೋಡಿಯೊಂದು ಅವನನ್ನು ಹತ್ಯೆ ಮಾಡಿತ್ತು? ಕಾರಣ ಏನು ಗೊತ್ತಾ?
ಆದರೆ ರೊಚ್ಚಿಗೆದ್ದ ಹೋಟೆಲ್ ವೇಟರ್ ಮಹ್ಮದ್ ಅನಾಸ್ ಹೋಟೆಲ್ನಿಂದ ಕೈಯಲ್ಲಿ ಚಾಕು ಹಿಡಿದುಕೊಂಡು ಏಕಾಏಕಿ ಹೊರಗೆ ಬಂದು ಕಾರು ಮಾಲೀಕ ಚಂದ್ರಶೇಖರ ಮೇಲೆ ದಾಳಿ ಮಾಡಲು ಮುಂದಾಗಿದ್ದ. ಆದರೆ ಅದೃಷ್ಟವಶಾತ್ ಚಂದ್ರಶೇಖರ್ ಸ್ವಲ್ಪದರಲ್ಲೇ ಬಚಾವ್ ಆಗಿದ್ದ. ಚಾಕು ಅಮಾಯಕ ಶ್ರೀನಿವಾಸ್ ಹೊಟ್ಟೆಗೆ ಬಿದಿದ್ದೆ. ಚಾಕುವಿನಿಂದ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಶ್ರೀನಿವಾಸ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಇನ್ನು ಕೊಲೆಯಾದ ಶ್ರೀನಿವಾಸ್ ನಗರದಲ್ಲೇ ತಳ್ಳೋ ಗಾಡಿಯಲ್ಲಿ ಸಣ್ಣ ಹೋಟೆಲ್ ನಡೆಸುತ್ತಿದ್ದ. ನಿತ್ಯ ಬಜ್ಜಿ, ಮಂಡಕ್ಕಿ ಸೇರಿದಂತೆ ನಾನಾ ರೀತಿಯ ತಿಂಡಿಗಳನ್ನು ಮನೆಯಲ್ಲಿ ತಯಾರಿಸಿಕೊಂಡು ಬಂದು ಮಾರಾಟ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಕೊವಿಡ್ನಲ್ಲಿ ಅಣ್ಣನನ್ನ ಕಳೆದುಕೊಂಡಿದ್ದ ಶ್ರೀನಿವಾಸ್ ಇಡೀ ಕುಟುಂಬವನ್ನ ತಾನೆ ನೋಡಿಕೊಳ್ಳುತ್ತಿದ್ದ. ಆದರೆ ಇವತ್ತು ಯಾರದ್ದೋ ಜಗಳ ಬಿಡಿಸಲು ಹೋಗಿ ಅನ್ಯಾಯವಾಗಿ ಕೊಲೆಯಾಗಿದ್ದಾರೆ.
ಇತ್ತ ಕಾರು ಮಾಲೀಕ ಚಂದ್ರಶೇಖರ್ ಕೈಗೂ ಸಹ ಚಾಕು ತಾಗಿದ್ದು ಸ್ವಲ್ಪ ಗಾಯ ಕೂಡ ಆಗಿದೆ. ಇನ್ನು ಘಟನೆ ಬಳಿಕ ಸ್ಥಳಕ್ಕೆ ಬಂದ ಯಾದಗಿರಿ ನಗರ ಠಾಣೆಯ ಪೊಲೀಸರು ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಚಂದ್ರಶೇಖರ್ ಕೊಲೆಗೆ ಯತ್ನ ನಡೆದಿದ್ದರಿಂದ ಚಂದ್ರಶೇಖರ್ ಯಾದಗಿರಿ ನಗರ ಠಾಣೆಯಲ್ಲಿ ದೂರು ನೀಡಿದ್ದಾನೆ. ಹೀಗಾಗಿ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿದ್ದ ಹಾಗೆ ಆರೋಪಿಗಳ ಪತ್ತೆ ಜಾಲ ಬಿಸಿದ್ದಾರೆ.
ಇನ್ನು ಹೋಟೆಲ್ ಮಾಲೀಕ ಅಬ್ದುಲ್ ಸತ್ತಾರ್, ಕೊಲೆ ಮಾಡಿದ ಮಹ್ಮದ್ ಅನಾಸ್ ಸೇರಿದಂತೆ ನಾಲ್ಕೈದು ಜನರ ವಿರುದ್ಧ ಕೇಸ್ ದಾಖಲಾಗಿದೆ. ಆದರೆ ಕೊಲೆ ಮಾಡಿದ ಅನಾಸ್ ಮದ್ಯದ ನಶೆ ಅಥವಾ ಬೇರೆಯ ಯಾವೋದೋ ನಶೆಯಲ್ಲಿದ್ದ ಅಂತ ಶಂಕಿಸಲಾಗುತ್ತಿದೆ. ಯಾಕೆಂದರೆ ಕೊಲೆ ಮಾಡುವಂತ ಸೀನ್ ಇಲ್ಲಿ ಇರಲಿಲ್ಲ. ಆದರೆ ಏಕಾಏಕಿ ಹೋಟೆಲ್ ಒಳಗಿಂದ ಚಾಕು ತೆಗೆದುಕೊಂಡು ಬಂದು ಕೊಲೆ ಮಾಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಅಂತ ಯಾದಗಿರಿ ಎಸ್ಪಿ ಮಾಹಿತಿ ನೀಡಿದ್ದಾರೆ.
ಒಟ್ಟಾರೆ, ಮನೆಯಲ್ಲಿ ಯಾರು ಇಲ್ಲ ಅಂತ ಹೊರಗಡೆ ಊಟ ಮಾಡಲು ಬಂದಿದ್ದ ಶ್ರೀನಿವಾಸ್ ಯಾರದ್ದೋ ಜಗಳ ಬಿಡಿಸಲು ಹೋಗಿ ಕೊಲೆಯಾಗಿದ್ದಾನೆ. ಗಂಡ ಹೆಂಡ್ತಿ ಮದ್ಯದ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಹಾಗೆ ಶ್ರೀನಿವಾಸ್ ಕೊಲೆಯಾಗಿದ್ದಾನೆ. ಹೀಗಾಗಿ ಪೊಲೀಸರು ಆರೋಪಿಗಳನ್ನ ಪತ್ತೆ ಶಿಕ್ಷೆ ಕೊಡಿಸುವ ಮೂಲಕ ಆಮಾಯಕನ ಸಾವಿಗೆ ನ್ಯಾಯ ಕೊಡಿಸಬೇಕಾಗಿದೆ.
ವರದಿ: ಅಮೀನ್ ಹೊಸುರ್, ಟಿವಿ9 ಯಾದಗಿರಿ
ಕ್ರೈಂ ನ್ಯೂಸ್ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 pm, Mon, 15 May 23