ಮಡಿಕೇರಿ: ರಾಜ್ಯಾದ್ಯಂತ ಮಳೆರಾಯನ ಆರ್ಭಟ ಮುಂದುವರಿದಿದೆ. ಮಡಿಕೇರಿ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಪರಿಣಾಮ ಬೀರಿದ್ದು, ನಿನ್ನೆ ಭಾರೀ ಶಬ್ದವೊಂದು ಕೇಳಿಸಿದ ನಂತರ ಭೂಕುಸಿತ ಉಂಟಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಭೂಕುಸಿತ ಉಂಟಾಗಿದ್ದು, ಸುಮಾರು ಐದು ಎಕರೆಯಷ್ಟು ಭೂಮಿ ಕೊಚ್ಚಿ ಬಂದಿದೆ. ನಿಶಾನಿ ಬೆಟ್ಟದ ಮೇಲ್ಭಾಗದಿಂದ ಕಲ್ಲುಗಳು, ಮಣ್ಣು, ಮರಗಳು ಕೊಚ್ಚಿ ಬರುತ್ತಿವೆ. ಭೂಕುಸಿತಕ್ಕೂ ಮೊದಲು ಭಾರೀ ಶಬ್ಧವೊಂದು ಕೇಳಿಸಿದೆ. ಇದರಿಂದಾಗಿ ಜನರು ಭಯಭೀತರಾಗಿದ್ದರು. ಸದ್ಯ ಭೂ ಕುಸಿತ ವ್ಯಾಪ್ತಿಯಿಂದ ಜನರು ದೂರ ಹೋಗಿದ್ದಾರೆ.
ಕಡಿಮೆಯಾದ ಮಳೆ, ಗರಿಗೆದರಿದ ಕ್ರೀಡಾ ಚಟುವಟಿಕೆಗಳು
ಕೊಡಗು: ಜಿಲ್ಲೆಯಲ್ಲಿ ಮಳೆ ಅಬ್ಬರ ಇಳಿಮುಖವಾಗುತ್ತಿದಂತೆಯೇ ಕೆಸರುಗದ್ದೆ ಕ್ರೀಡಾ ಚಟುವಟಿಕೆಗಳು ಗರಿಗೆದರಿವೆ. ವಿರಾಜಪೇಟೆ ತಾಲೂಕಿನ ಕಡಂಗ ಗ್ರಾಮದಲ್ಲಿ ಕೆಸರುಗದ್ದೆ ಫುಟ್ಬಾಲ್ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ತಂಡಗಳು ಕೆಸರಿನಲ್ಲಿ ಆಡಿದರು, ಇದರ ಜೊತೆಗೆ ಕೆಸರಿನಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಕೆಸರಿನಲ್ಲಿ ಮುಳುಗೆದ್ದು ಸಂಭ್ರಮಿಸಿದರು. ಜಿಟಿಜಿಟಿ ಮಳೆಯ ಮಧ್ಯೆಯೇ ಯುವಕರು ಕಾಲ್ಚೆಂಡು ಒದ್ದು ಟ್ರೋಪಿ ಜಯಿಸಿ ಸಂಭ್ರಮಿಸಿದರು.
ಕೊಡಗಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಕೆಲವೆಡೆ ಮಳೆ ಉತ್ತಮ ಮಳೆಯಾಗಿದೆ. ಅದರಂತೆ ಮತ್ತೊಂದು ಮಳೆ ಅನಾಹುತ ಸಂಭವಿಸಿದೆ. ಮಡಿಕೇರಿ-ಮಂಗಳೂರು ಪರ್ಯಾಯ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಕುಸಿತಗೊಂಡಿದೆ. ಮೇಕೇರಿ-ತಾಳತ್ತ್ ಮನೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರಸ್ತೆ ಕುಸಿದಿದೆ. ಜಿಲ್ಲಾಧಿಕಾರಿ ಕಛೇರಿ ಬಳಿ ತಡೆಗೋಡೆ ಸಮಸ್ಯೆ ಇರುವ ಹಿನ್ನಲೆ ಮಡಿಕೇರಿ-ಮಂಗಳೂರಿಗೆ ತಾತ್ಕಾಲಿಕ ಸಂಪರ್ಕಕ್ಕಾಗಿ ರಸ್ತೆಯನ್ನು ಕಲ್ಪಿಸಲಾಗಿತ್ತು. ಸದ್ಯ ರಸ್ತೆ ಕುಸಿದ ಸ್ಥಳದಲ್ಲಿ ಬ್ಯಾರಿಕೇಡ್ಗಳನ್ನು ಇಡಲಾಗಿದ್ದು, ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಪರಿಣಾಮವಾಗಿ ಸಂಪಾಜೆ ಗೇಟ್ ಬಳಿ ಇತರ ವಾಹನಗಳು ಸಾಲುಗಟ್ಟಿನಿಂತಿವೆ.
ಭಾರೀ ಮಳೆಗೆ ಹದಗೆಟ್ಟ ರಸ್ತೆ
ಉಡುಪಿ: ಜಿಲ್ಲೆಯಲ್ಲಿ ಸುರಿದ ಧಾರಕಾರ ಮಳೆಯಿಂದಾಗಿ ಕಾಪು ತಾಲೂಕಿನ ಕಟಪಾಡಿ ಶಿರ್ವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕಟಪಾಡಿ ರೈಲ್ವೆ ಸೇತುವೆ ಬಳಿ ರಾಜ್ಯ ಹೆದ್ದಾರಿಯಲ್ಲಿ ಹೊಂಡ ಬಿದ್ದು ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಗಾಯದ ಮೇಲೆ ಬರೆ ಎಳೆದಂತೆ ಕೆಲವು ಸ್ಥಳೀಯರು ತ್ಯಾಜ್ಯ ಗಳನ್ನು ತಂದು ಹೊಂಡಕ್ಕೆ ಸುರಿಯುತ್ತಿದ್ದಾರೆ. ಇದು ಮತ್ತಷ್ಟು ಅಪಾಯಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಹೀಗಾಗಿ ತುರ್ತಾಗಿ ರಸ್ತೆ ದುರಸ್ತಿಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಿರಂತರ ಮಳೆಗೆ ಶಾಲಾ ಕಟ್ಟಡದ ಗೋಡೆ ಕುಸಿತ
ಹಾಸನ: ನಿರಂತರ ಮಳೆಯಿಂದಾಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದ ಗೋಡೆ ಕುಸಿದಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಚಿನ್ನಹಳ್ಳಿಯಲ್ಲಿ ನಡೆದಿದೆ. ಶಾಲೆ ಆರಂಭಕ್ಕೂ ಮುನ್ನ ಗೋಡೆ ಕುಸಿದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಶೀಘ್ರವಾಗಿ ಶಾಲೆಯ ಕಟ್ಟಡ ದುರಸ್ತಿ ಮಾಡಿಸುವಂತೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.
Published On - 7:01 am, Tue, 19 July 22