Karnataka, Mangalore, Uttara Kannada Rains Weather Live News Updates |ಇಂದು ಕರಾವಳಿಯ ಎರಡು ಕಡೆ ಭಾರಿ ಮಳೆಯಾಗಿದ್ದು, ಉತ್ತರ ಒಳನಾಡಿನಲ್ಲಿ ನಾಲ್ಕು ಕಡೆ ಸಾಮಾನ್ಯ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 5 ಕಡೆ ವರುಣ ಅಬ್ಬರಿಸಿದ್ದು, 8 ಕಡೆ ಭಾರಿ ಮಳೆ ದಾಖಲಾಗಿದೆ. ನಿನ್ನೆ (ಆಗಸ್ಟ 1) ಶಿರಾದಲ್ಲಿ 29 ಸೆ.ಮೀ . ಸುಬ್ರಹ್ಮಣ್ಯದಲ್ಲಿ 28 ಸೆ.ಮೀ ಮಳೆಯಾಗಿದೆ. ಬಸ್ರೂರು 15 ಸೆ.ಮೀ , ಮಂಡ್ಯ 14 ಸೆ.ಮೀ , ಲಿಂಗನಮಕ್ಕಿ 13 ಸೆಸೆ.ಮೀ , ಭಾಗಮಂಡಲ 12. ಸೆ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.
ನೈರುತ್ಯ ಮುಂಗಾರು ಕರಾವಳಿಯಲ್ಲಿ ಸಾಮನ್ಯ ಮಳೆಯಾಗಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರವಾಳಿ ಭಾಗದಲ್ಲಿ ಮುಂದಿನ ಐದು ದಿನ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಗೆ ಮುಂದಿನ 4 ದಿನ ರೆಡ್ ಅಲರ್ಟ್ ಘೋಷಣೆಯಾಗಿದೆ. 5 ನೇ ದಿನ ಆರೆಂಜ್ ಅಲರ್ಟ್ ಇರಲಿದೆ.
ಕೆಲವೊಮ್ಮೆ 60 ಕಿ.ಮೀ ವೇಗದಲ್ಲಿ ಕರಾವಳಿ ಭಾಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಉತ್ತರ ಒಳನಾಡಿಗೆ ಇಂದು ನಾಳೆ ಯಲ್ಲೋ ಅಲರ್ಟ್ ನೀಡಿದ್ದು, 4ಮತ್ತು 5 ದಿನದವರೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ದಕ್ಷಿಣ ಒಳನಾಡಿಗೆ ಇಂದು ಆರೆಂಜ್ ಅಲರ್ಟ್ ನೀಡಿದ್ದು, ಮುಂದಿನ ಮೂರು ದಿನ ರೆಡ್ ಅಲರ್ಟ್, ಕೊನೆಯ ದಿನ ಆರೆಂಜ್ ಅಲರ್ಟ್ ಇರಲಿದೆ. ಬೆಂಗಳೂರಿಗೆ ಇಂದು ಮತ್ತು ನಾಳೆ ಹಗುರದಿಂದ ಸಾಧಾರಣ ಮಳೆ ಸಾಧ್ಯತೆ ಇದ್ದು, 4ನೇ ತಾರೀಖು ಯಲ್ಲೋ ಅಲರ್ಟ್ ಇರಲಿದೆ.
5ನೇ ತಾರೀಖು ಆರೆಂಜ್ ಅಲರ್ಟ್ ಇರಲಿದ್ದು, ಇಂದು ಗುಡುಗು ಮಿಂಚಿನ ಮಳೆ ಸಾಧ್ಯತೆಯಾಗುವ ಸಾಧ್ಯಾತೆ ಇದೆ ಹವಾಮಾನ ಇಲಾಖೆ ತಜ್ಞ ಎ ಪ್ರಸಾದ್ ಹೇಳಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ಮುಂದಿನ 3 ಗಂಟೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜೋರಾದ ಗಾಳಿಯ ವೇಗವು 30 – 40 ಕಿಮೀ ತಲುಪುವ ಸಾಧ್ಯಾತೆ ಇದೆ. ಹೀಗಾಗಿ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಮಂಡ್ಯ ರಾಮನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಹವಮಾನ ಇಲಾಖೆ ಮುನ್ಸುಚನೆ ನೀಡಿದೆ.
ದಕ್ಷಿಣಕನ್ನಡ: ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಪರ್ವತಮುಖಿ ಎಂಬಲ್ಲಿ ಮನೆಯ ಮೇಲೆ ಗುಡ್ಡ ಕುಸಿದಿದೆ. ಪರಿಣಾಮ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ. ಮಣ್ಣಿನಡಿಯಲ್ಲಿ ಸಿಲುಕಿ ಇಬ್ಬರು ಮಕ್ಕಳು ಮೃತ ಪಟ್ಟಿದ್ದಾರೆ. ಶೃತಿ (11), ಗಾನ (6) ಮಣ್ಣಿನಡಿ ಸಿಲುಕಿ ಮೃತ ಪಟ್ಟ ಮಕ್ಕಳ್ಳು. ಘಟನೆ ನಡೆಯೋವಾಗ ಶೃತಿ ಮನೆ ಎದುರ ಜಗುಲಿಯಲ್ಲಿ ತರಗತಿಯ ಪಾಠ ಓದುತ್ತಿದ್ದಳು.
ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಭಾರಿ ಮಳೆಯಿಂದಾಗಿ ರಾಜನಕೊಳ್ಳೂರು-ಪರತುನಾಯಕ ಸೇತುವೆ ಜಲಾವೃತಗೊಂಡಿದೆ.
ರಾಯಚೂರು: ರಾಯಚೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆ ಮಳೆಯಿಂದ ದೇವದುರ್ಗ ತಾಲೂಕಿನ ಗಬ್ಬೂರು-ಸಿರವಾರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪ್ರಯಾಣಿಕರು ಗಬ್ಬೂರು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ. ನಿರಂತರ ಮಳೆಯಿಂದ ಹಳ್ಳ ತುಂಬಿ ಹರಿಯುತ್ತಿದೆ.
ತುಮಕೂರು: ಮಳೆಯಿಂದ ಯುವಕ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಹುತ್ರಿದುರ್ಗ ಬಳಿಯ ಶಿವಪುರ ಗ್ರಾಮದಲ್ಲಿ ನಡೆದಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಮಾದಾಪುರ ತಾಂಡ್ಯ ಮೂಲದ ನಾಗರಾಜು (28) ಮೃತ ಯುವಕ. ನಾಗರಾಜು, ಶಿವಪುರ ಗ್ರಾಮದ ಬಳಿ ಚೆಕ್ ಡ್ಯಾಮ್ ನಿರ್ಮಾಣಕ್ಕಾಗಿ ಕೂಲಿ ಕೆಲಸಕ್ಕೆಂದು ಬಂದಿದ್ದನು.
ಚೆಕ್ ಡ್ಯಾಮ್ ಬಳಿಯಲ್ಲೇ ಶೆಡ್ನಲ್ಲಿ ನಾಗರಾಜು ಇದ್ದನು. ಮಳೆ ಹೆಚ್ಚಾದ ಪರಿಣಾಮ ಶಿವಪುರ, ದೀಪಾಂಬುದಿ ಕೆರೆ ಸಂಪರ್ಕಿಸುವ ನಾಲೆ ತುಂಬಿ ಹರಿಯುತ್ತಿತ್ತು. ಈ ವೇಳೆ ನಾಗರಾಜು ಮೂತ್ರ ವಿಸರ್ಜನೆಗೆ ತೆರಳಿದ್ದನು. ಯುವಕ ಕಾಲು ಜಾರಿ ನಾಲೆಯೊಳಗೆ ಬಿದ್ದು ನೀರಿನ ರಭಸಕ್ಕೆ ಕೊಚ್ವಿ ಹೋಗಿದ್ದಾನೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ ವೇದಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಬಳಿಯ ಸೇತುವೆ ಮುಳುಗಡೆಯಾಗಿದೆ. ಆಂಧ್ರಪ್ರದೇಶ ಮತ್ತು ಕರ್ನಾಟಕ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮುಳಗಡೆಯಾದರು ವಾಹನ ಸವಾರರು ದುಸ್ಸಾಹಸ ಮಾಡುತ್ತಿದ್ದಾರೆ. ಸೇತುವೆ ಮೇಲ್ಬಾಗದಲ್ಲಿ ನೀರು ಹರಿಯುತ್ತಿದ್ದರೂ ಲೆಕ್ಕಸಿದೇ ವಾಹನ ಸವಾರರು ಓಡಾಟ ನಡೆಸುತ್ತಿದ್ದಾರೆ.
ಬಳ್ಳಾರಿ: ಹಳ್ಳದ ಪ್ರವಾಹದಲ್ಲಿ ಖಾಸಗಿ ಕಂಪನಿ ಉದ್ಯೋಗಿ ಕೊಚ್ಚಿಹೊಗಿರುವ ಘಟನೆ ಸಂಡೂರು ತಾಲೂಕಿನ ಅಂಕಮನಾಳ ಗ್ರಾಮದಲ್ಲಿ ನಡೆದಿದೆ. ಸಂಡೂರು ತಾಲೂಕಿನ ಬೊಮ್ಮಘಟ್ಟ ಗ್ರಾಮದ ಕೃಷ್ಣಕುಮಾರ್ ಮೃತ ದರ್ದೈವಿ. ಪ್ರವಾಹವನ್ನು ಲೆಕ್ಕಿಸದೇ ಬೈಕ್ ಮೂಲಕ ಅಂಕಮನಾಳ ಗ್ರಾಮದ ಸೇತುವೆ ದಾಟುವ ವೇಳೆ ದಾಟುವ ವೇಳೆ ಕಾರ್ಮಿಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಅಂಕಮನಾಳ ಅರಣ್ಯ ಪ್ರದೇಶದಲ್ಲಿ ಕೃಷ್ಣಕುಮಾರ್ ಮೃತ ದೇಹ ಪತ್ತೆಯಾಗಿದೆ. ಸ್ಥಳಕ್ಕೆ ಸಂಡೂರು ತಹಶಿಲ್ದಾರ ಹಾಗೂ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೈಸೂರು: ಮಳೆಯಿಂದ ಮನೆ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕೆಂಚನಕೆರೆ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. ಶಾಂತಮ್ಮ(65) ಮೃತ ವೃದ್ಧೆ. ಬಿರುಗಾಳಿ, ಗುಡುಗು ಸಹಿತ ಮಳೆಯಿಂದ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿದ್ದಾಳೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಮುಂದಿನ 3 ಗಂಟೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜೋರಾದ ಗಾಳಿಯ ವೇಗವು 30 – 40 ಕಿಮೀ ತಲುಪುವ ಸಾಧ್ಯಾತೆ ಇದೆ. ಹೀಗಾಗಿ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಮಂಡ್ಯ ರಾಮನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಹವಮಾನ ಇಲಾಖೆ ಮುನ್ಸುಚನೆ ನೀಡಿದೆ.
ಹಾಸನ: ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮಳೆಯಿಂದಾಗಿ ಗೀಜಿಹಳ್ಳಿ ಬಳಿಯ ಮುರುಂಡಿ ಕೆರೆಯ ಕೋಡಿಯಲ್ಲಿ ನೀರು ಹರಿದು ಅಪಾರ ಹಾನಿಯಾಗಿದೆ. ಕೆರೆ ಕೋಡಿಯ ನೀರಿನ ರಭಸಕ್ಕೆ ಡಾಬಾ ಕೊಚ್ಚಿಹೋಗಿದೆ. ವೆಂಕಟ್ ಎಂಬುವರಿಗೆ ಸೇರಿದ ಡಾಬಾ ಸಂಪೂರ್ಣ ನಾಶವಾಗಿದೆ. 4 ತಿಂಗಳ ಹಿಂದೆ 8 ಲಕ್ಷ ಖರ್ಚು ಮಾಡಿ ಡಾಬಾ ನಿರ್ಮಾಣ ಮಾಡಲಾಗಿದ್ದು, ಡಾಬಾ ನಾಶದಿಂದ ಮಾಲೀಕ ವೆಂಕಟ್ ಕಂಗಾಲಾಗಿದ್ದಾರೆ.
ಸಾಲ ಮಾಡಿ ಡಾಬಾ ಮಾಡಿದ್ದೆ, ಒಂದೇ ಮಳೆಗೆ ನಾಶವಾಗಿದೆ. ಸೂಕ್ತ ಪರಿಹಾರ ನೀಡವಂತೆ ಸರ್ಕಾರಕ್ಕೆ ವೆಂಕಟ್ ಮನವಿ ಮಾಡಿದ್ದಾರೆ.
ಬಳ್ಳಾರಿ: ಬಳ್ಳಾರಿ ತಾಲೂಕಿನ ಯಾಳ್ಪಿ ಕಗ್ಗಲು ಗ್ರಾಮದ ಬಳಿ ವೇದಾವತಿ ನದಿಯಲ್ಲಿ ಸಿಲುಕಿದ್ದ 34 ಕೂಲಿ ಕಾರ್ಮಿಕರ ರಕ್ಷಣೆ ಮಾಡಲಾಗಿದೆ. ಕಾರ್ಮಿಕರು ಮಲ್ಲಿಗೆ ಹೂವು ಬಿಡಿಸಲು ಜಮೀನಿಗೆ ತೆರಳಿದ್ದರು. ಈ ವೇಳೆ ಏಕಾಏಕಿ ನದಿಯಲ್ಲಿ ಹರಿವು ಹೆಚ್ಚಳವಾಗಿ ಜಮೀನಿನಲ್ಲಿ ಮುಂಜಾನೆಯಿಂದ ಸಿಲುಕಿದ್ದರು. 34 ಕೂಲಿ ಕಾರ್ಮಿಕರನ್ನು ಅಗ್ನಿಶಾಮಕ ದಳ ಬೋಟ್ ಮೂಲಕ ರಕ್ಷಿಸಿದೆ.
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿದೆ. ಮನೆಯಲ್ಲಿದ್ದ ಧವಸ ಧಾನ್ಯ ಹಾಗೂ ಇತರೆ ವಸ್ತುಗಳು ನೀರು ಪಾಲಾಗಿವೆ. ಮಳೆಯಿಂದ ಸಾತಿಹಾಳ ಗ್ರಾಮದ ದಲಿತ ಕಾಲೋಮಿಯ ಜನರ ಪರದಾಡುತ್ತಿದ್ದಾರೆ. ಮನೆಯೊಳಗಿನ ನೀರು ಹೊರ ಹಾಕಲು ಜನರು ಹರ ಸಾಹಸ ಪಡುತ್ತಿದ್ದಾರೆ. ನಮ್ಮ ಕಾಲೋನಿ ಸ್ಥಳಾಂತರ ಮಾಡಬೇಕೆಂದು ಕಾಲೋನಿ ನಿವಾಸಿಗಳು ಒತ್ತಾಯ ಮಾಡುತ್ತಿದ್ದಾರೆ. ಈ ಹಿಂದೆ ಸ್ಥಳಾಂತರದ ಭರವಸೆ ನೀಡಿದ್ದ ಜನಪ್ರತಿನಿಧಿಗಳು ಭರವಸೆ ಈಡೇರಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯನಗರ: ಭಾರಿ ಮಳೆಗೆ ಹಳ್ಳದ ಪ್ರವಾಹದಲ್ಲಿ ರೈತ ಕೊಚ್ಚಿಹೋಗಿರುವ ಘಟನೆ ಹೊಸಪೇಟೆ ತಾಲೂಕಿನ ಗರಗ-ನಾಗಲಾಪುರದಲ್ಲಿ ನಡೆದಿದೆ. ಉಂಚೋಟಿ ಬೊಮ್ಮಪ್ಪ(55) ಹಳ್ಳದಲ್ಲಿ ಕೊಚ್ಚಿಹೋದ ರೈತ. ರೈತ ಜಮೀನು ನೋಡಲು ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
Published On - 2:35 pm, Tue, 2 August 22