Karnataka Rains: ಕರ್ನಾಟಕದಲ್ಲಿ ಮಳೆ ಅಬ್ಬರ, ರಾಜ್ಯದ 10 ಜಿಲ್ಲೆಗಳಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ

| Updated By: ರಮೇಶ್ ಬಿ. ಜವಳಗೇರಾ

Updated on: Jul 27, 2023 | 8:01 AM

ಭಾರತೀಯ ಹವಾಮಾನ ಇಲಾಖೆ ಪ್ರಕಾರ ಕರ್ನಾಟಕದಲ್ಲಿ ಇಂದು ಹಲವೆಡೆ ಭಾರೀ ಮಳೆ ಮುಂದುವರೆಯಲಿದ್ದು, ಹಾಗಾಗಿ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ, ಯಾವೆಲ್ಲ ಜಿಲ್ಲೆಗಳಲ್ಲಿ ರಜೆ ಎನ್ನುವ ವಿವರ ಇಲ್ಲಿದೆ ನೋಡಿ.

Karnataka Rains: ಕರ್ನಾಟಕದಲ್ಲಿ ಮಳೆ ಅಬ್ಬರ, ರಾಜ್ಯದ 10 ಜಿಲ್ಲೆಗಳಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಜುಲೈ 26: ಕರ್ನಾಟಕದಲ್ಲಿ ಮಳೆರಾಯ (rains) ನಿರಂತರವಾಗಿ ಅಬ್ಬರಿಸುತ್ತಿದ್ದಾನೆ. ಇದರಿಂದ ಜೀವನದಿಗಳಿಗೆ ಜೀವ ಕಳೆ ಬಂದಿದ್ದು, ಉಕ್ಕಿ ಹರಿಯುತ್ತಿವೆ. ಜೊತೆಗೆ ಕೆಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಸೇತುವೆಗಳು ಸಹ ಮುಳುಗಡೆಯಾಗಿದ್ದು, ಸಂಚಾರ ಬಂದ್​​ ಆಗಿವೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮಳೆ ಮುಂದುವರೆಯಲಿದ್ದು, ಹಾಗಾಗಿ ಇಂದು (ಜುಲೈ 27) ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ವಿವಿಧ ಜಿಲ್ಲೆಯ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ. ಹಾಗಾದ್ರೆ, ಯಾವೆಲ್ಲ ಜಿಲ್ಲೆಗಳಲ್ಲಿಂದು ರಜೆ ನೀಡಲಾಗಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: Monsoon 2023: ಆತಂಕ ದೂರವಾಗಿ ಖುಷಿಯ ವಿಚಾರ! ಒಂದು ವಾರ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಕೆಆರ್​​ಎಸ್ ಡ್ಯಾಂ ಭರ್ತಿಯಾಗಲಿದೆ! ಈಗ ಹೇಗಿದೆ?

ವಿಜಯನಗರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ

ವಿಜಯನಗರ ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ, ಹರಪನಹಳ್ಳಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಆದೇಶ ಹೊರಡಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲೂ ರಜೆ

ಬಳ್ಳಾರಿ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ ನಾಳೆ ಜಿಲ್ಲೆಯ ಎಲ್ಲ ಅಂಗನವಾಡಿ, ಸರ್ಕಾರಿ- ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಆದೇಶ ಹೊರಡಿಸಿದ್ದಾರೆ. ರಜೆ ದಿನದ ತರಗತಿಗಳನ್ನ ಮುಂದಿನ ಶನಿವಾರ ಇಲ್ಲವೇ ಭಾನುವಾರ ನಡೆಸುವಂತೆ ಸೂಚನೆ ನೀಡಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾತ್ರ ರಜೆ

ರಾಯಚೂರು ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಹಾಗಾಗಿ ಜಿಲ್ಲೆಯ ಶಾಲೆಗಳಿಗೆ ನಾಳೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಗ್ರಾಮಾಂತರ ಪ್ರದೇಶ ವಿದ್ಯಾರ್ಥಿಗಳಿಗೆ ತೊಂದರೆ ಹಿನ್ನೆಲೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾತ್ರ ರಜೆ ಘೋಷಿಸಿ ಡಿಸಿ ಚಂದ್ರಶೇಖರ ನಾಯಕ್​ ಆದೇಶ ಹೊರಡಿಸಿದ್ದಾರೆ.

ಹಾಸನದಲ್ಲೂ ಸಹ ರಜೆ

ಹಾಸನ ಜಿಲ್ಲೆಯ 8 ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ಇಂದು ಮತ್ತು ನಾಳೆ ರಜೆ ಘೋಷಿಸಿ ಡಿಸಿ ಸತ್ಯಭಾಮಾ ಆದೇಶಿಸಿದ್ದಾರೆ.

ರಜೆ ಘೋಷಿಸಿ ಕೊಪ್ಪಳ ಜಿಲ್ಲಾಧಿಕಾರಿ ಆದೇಶ

ಕೊಪ್ಪಳ ಜಿಲ್ಲೆಯಾದ್ಯಂತ ಮಳೆ ಹಿನ್ನೆಲೆ ಇಂದು ಶಾಲಾ ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಆದೇಶ ಹೊರಡಿಸಿದ್ದಾರೆ. ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆಯಲ್ಲಿ ಅಂಗನವಾಡಿ, ಶಾಲೆಗಳು, ಪದವಿ ಪೂರ್ವ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ ಎಂದು ಡಿಸಿ ಸುಂದರೇಶ್ ಬಾಬು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಜೆ ಮುಂದುವರಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಾರದಿಂದ ಭಾರೀ ಮಳೆಯಾಗುತ್ತಿರುವುದರಿಂದ ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿದೆ. ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಇಂದು ರೆಡ್​ ಅಲರ್ಟ್​ ಘೋಷಿಸಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಅಂಗನವಾಡಿ, ಶಾಲೆಗಳು, ಅನುದಾನಿತ & ಖಾಸಗಿ ಶಾಲೆಗಳಿಗೆ ರಜೆ ನೀಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶಿಸಿದ್ದಾರೆ. ಆದ್ರೆ, ಪದವಿಪೂರ್ವ, ಪದವಿ, ಐಟಿಐ, ಇಂಜಿನಿಯರಿಂಗ್​ ಕಾಲೇಜಿಗೆ ರಜೆ ಇಲ್ಲ.

ಭಾರತೀಯ ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್‌ನಲ್ಲಿ ಬುಧವಾರ 21 ಸೆಂ.ಮೀ, ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯದಲ್ಲಿ 17 ಸೆಂ.ಮೀ, ಗೇರುಸೊಪ್ಪ ಮತ್ತು ಉಡುಪಿಯಲ್ಲಿ ತಲಾ 13 ಸೆಂ.ಮೀ ಮಳೆಯಾಗಿದೆ ಎಂದು ತಿಳಿಸಿದೆ.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್​ ಘೋಷಣೆ

ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಹಿನ್ನೆಲೆ ಶೃಂಗೇರಿ, ಕೊಪ್ಪ, ಮೂಡಿಗೆರೆ, ಕಳಸ, ಎನ್.ಆರ್.ಪುರ ಚಿಕ್ಕಮಗಳೂರು ತಾಲೂಕಿನ 5 ಹೋಬಳಿಯ ಅಂಗನವಾಡಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಡಿಸಿ ಮೀನಾ ನಾಗರಾಜ್​ ರಜೆ ನೀಡಿದ್ದು, ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್​ ಘೋಷಿಸಿಲಾಗಿದೆ.

ಇದನ್ನೂ ಓದಿ: Bengaluru News; ಮಳೆಪೀಡಿತ ಜಿಲ್ಲೆಗಳಿಗೆ ಸೋಮವಾರ ಭೇಟಿ ನೀಡಿ ಜನರ ಸಮಸ್ಯೆ ಆಲಿಸುವೆ: ಸಿದ್ದರಾಮಯ್ಯ, ಮುಖ್ಯಮಂತ್ರಿ

ಉಡುಪಿಯಲ್ಲೂ ಶಾಲಾ-ಕಾಲೇಜುಗಳಿಗೆ ರಜೆ

ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಹಿನ್ನೆಲೆ ಉಡುಪಿ ಜಿಲ್ಲೆಯ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ನಾಳೆಯೂ ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶಿಸಿದ್ದಾರೆ. ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್​ ಘೋಷಣೆ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯಾದ್ಯಂತ ರಜೆ

ಪಶ್ಚಿಮಘಟ್ಟ ಪ್ರದೇಶ, ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿರುವುದರಿಂದ ಇಂದು ಶಾಲೆ, ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ ನೀಡಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಧಾರವಾಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

ಧಾರವಾಡ ಜಿಲ್ಲೆಯಾದ್ಯಂತ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಇಂದು ಧಾರವಾಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿ, ಶಾಲೆ, ಪಿಯುಸಿ, ಪದವಿ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಸಹ ರಜೆ ಘೋಷಣೆ

ದಾವಣಗೆರೆ ಜಿಲ್ಲೆಯಲ್ಲಿ ಮುಂದುವರಿದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಡಿಸಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ರಜೆ ನೀಡಲಾಗಿದೆ.

 

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:52 pm, Wed, 26 July 23