
ಬೆಂಗಳೂರು, ಅಕ್ಟೋಬರ್ 6: ಕಾಂತಾರ ಸಿನಿಮಾ ಎಲ್ಲೆಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಲ್ಲರೂ ನಾ ಮುಂದು ತಾ ಮುಂದು ಎಂದು ಸಿನಿಮಾ ವೀಕ್ಷಣೆಗೆ ಲಗ್ಗೆ ಇಡುತ್ತಿದ್ದಾರೆ. ರಾಯಚೂರಿನಲ್ಲಿ (Raichur) ಕಾಂತಾರ ಚಾಪ್ಟರ್ 1 ಚಿತ್ರ ನೋಡಲು ಹೋಗಿದ್ದ ಯುವಕರು ದಾರುಣ ಅಂತ್ಯ ಕಂಡಿದ್ದಾರೆ. ರಾಯಚೂರು ಜಿಲ್ಲೆ ಮುದಗಲ್ ಪಟ್ಟಣದ ವೆಂಕಟೇಶ, ಯಲ್ಲಾಲಿಂಗ ಭಾನುವಾರ ಕಾಂತಾರ ಚಿತ್ರ ನೋಡಲು ಹೋಗಿದ್ದರು. ಮಧ್ಯಾಹ್ನದ ಶೋಗೆ ಚಿತ್ರದ ಟಿಕೆಟ್ ಸಿಗದಿದ್ದರಿಂದ ನಾಲೆಯಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ, ನಾಲೆಯಲ್ಲಿ ಯಲ್ಲಾಲಿಂಗ ಕೊಚ್ಚಿಹೋಗಿದ್ದಾನೆ. ಆತ ಕೊಚ್ಚಿಕೊಂಡು ಹೋಗುವುದನ್ನು ಕಂಡು ಆತನನ್ನು ರಕ್ಷಿಸಲು ಹೋಗಿ ವೆಂಕಟೇಶ ಕೂಡ ನೀರುಪಾಲಾಗಿದ್ದಾನೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹರ್ಷಪುರ ನಿವಾಸಿ ಗಂಗಮ್ಮ ಎಂಬವರು ಸಹೋದರಿ ಶಕುಂತಲಾ ಜೊತೆ ದನ ಮೇಯಿಸಲು ಹೋಗಿದ್ದರು. ಭಾನುವಾರ ಸಂಜೆಯಾದರೂ ಇಬ್ಬರೂ ಮನೆಗೆ ಮರಳಿರಲಿಲ್ಲ. ಬಳಿಕ ಸಂಬಂಧಿಕರು ಎಲ್ಲೆಡೆ ಹುಡುಕಾಡಿದ್ದಾರೆ. ಕೃಷಿ ಹೊಂಡದ ಬಳಿ ಅಕ್ಕತಂಗಿಯರ ಚಪ್ಪಲಿ ಪತ್ತೆ ಆಗಿದ್ದು, ಶೋಧ ನಡೆಸಿದಾಗ ಕೃಷಿಹೊಂಡದಲ್ಲಿ ಇಬ್ಬರ ಶವ ಪತ್ತೆ ಆಗಿದೆ. ಸಾವಿನ ಸುತ್ತ ಹಲವು ಅನುಮಾನಗಳು ಸಹ ಮೂಡಿವೆ.
ಬಾಗಲಕೋಟೆ ಜಿಲ್ಲೆ ತಿಮ್ಮಾಪುರದ ಚಿಚಖಂಡಿ ಬಿ.ಕೆ ಗ್ರಾಮದ ಬಳಿ ದಸರಾ ಹಬ್ಬದಂದು ಘಟಪ್ರಭಾ ನದಿಗೆ ಸ್ನಾನಕ್ಕೆ ಹೋಗಿದ್ದ ಸಚಿನ್ ಮಾದರ ಮೃತದೇಹ ಮೂರು ದಿನಗಳ ಬಳಿಕ ಪತ್ತೆಯಾಗಿದೆ. ಬನ್ನಮ್ಮ ದೇವಿ ಸ್ನಾನಕ್ಕೆಂದು ಸಚಿನ್ ಮಾದರ ಘಟಪ್ರಭಾ ನದಿಗೆ ಇಳಿದಿದ್ದ. ಬಳಿಕ ನೀರುಪಾಲಾಗಿದ್ದ. ಅಗ್ನಿಶಾಮಕ ದಳದ ಸಿಬ್ಬಂದಿ ಸಚಿನ್ ಮಾದರನಿಗಾಗಿ ಶೋಧ ನಡೆಸುತ್ತಿದ್ದರು. ಇದೀಗ ಮೂರು ದಿನಗಳ ಬಳಿಕ ಸೇತುವೆ ಬಳಿ ಸಚಿನ್ ಶವ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇನ್ನು, ಕೊಡಗು ಜಿಲ್ಲೆಯ ಹುದುಗೂರು ಗ್ರಾಮದ ಯುವಕ ಸಂತೋಷ್ ಹಾರಂಗಿ ನಾಲೆಯಲ್ಲಿ ಈಜಲು ತೆರಳಿದ್ದ. ನೀರಿನ ಸುಳಿ ಹೆಚ್ಚಾಗಿ ಮುಳುಗಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕದ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಅ.11ರವರೆಗೂ ಮಳೆ
ಒಟ್ಟಾರೆಯಾಗಿ ರಾಜ್ಯದಾದ್ಯಂತ ಪ್ರತ್ಯೇಕ ಅವಘಢಗಳಲ್ಲಿ 6 ಮಂದಿ ನೀರುಪಾಲಾಗಿದ್ದಾರೆ. ಮತ್ತೊಂದೆಡೆ, ಮನೆಗೆ ಆಧಾರವಾಗಬೇಕಿದ್ದ ಮಕ್ಕಳನ್ನು ಕಳೆದುಕೊಂಡು ಪೋಷಕರು ಕಣ್ಣೀರ ಕಡಲಲ್ಲಿ ಮುಳುಗಿ ಹೋಗಿದ್ದಾರೆ.