Karnataka Rains: ಕರಾವಳಿ ಕರ್ನಾಟಕ, ಮಲೆನಾಡು ಭಾಗದಲ್ಲಿ ಭಾರಿ ಮಳೆ; ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ವಿವರ

ಕರ್ನಾಟಕ ಮಳೆ: ಕಾಫಿನಾಡು ‌ಚಿಕ್ಕಮಗಳೂರು, ಕರವಾಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಕೆಲವು ಭಾಗಗಳಲ್ಲಿ ಮಳೆ ಆರ್ಭಟ ಜೋರಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರು ಕಾರುಗಳು ಹೇಮಾವತಿ ನದಿಗೆ ಬಿದ್ದು ಪ್ರಯಾಣಿಕರ ಜೀವ ಉಳಿದಿದ್ದೇ ಪವಾಡವಾಗಿದೆ. ಕರಾವಳಿಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಡಲು ಪ್ರಕ್ಷುಬ್ಧಗೊಂಡಿದೆ. ಹಲವೆಡೆ ಸಾಕಷ್ಟು ಅವಾಂತಗಳಾಗಿವೆ. ಅತ್ತ ಮಡಿಕೇರಿಯಲ್ಲಿ ಕಾಲೇಜುಗಳಿಗೆ 2 ದಿನ ರಜೆ ಘೋಷಿಸಲಾಗಿದೆ.

Karnataka Rains: ಕರಾವಳಿ ಕರ್ನಾಟಕ, ಮಲೆನಾಡು ಭಾಗದಲ್ಲಿ ಭಾರಿ ಮಳೆ; ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ವಿವರ
ಬೆಂಗಳೂರು ಮಂಗಳೂರು ಹೆದ್ದಾರಿಯ ಶಿರಾಡಿ ಘಾಟ್ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು, ನಿಧಾನಗತಿಯ ಸಂಚಾರವಿದೆ.

Updated on: May 26, 2025 | 8:08 AM

ಬೆಂಗಳೂರು, ಮೇ 26: ಅವಧಿಗೂ ಮುನ್ನವೇ ಕರ್ನಾಟಕಕ್ಕೆ ಕಾಲಿಟ್ಟಿರುವ ಮುಂಗಾರು ಮಳೆ (Monsoon Rain) ಆರಂಭದಲ್ಲೇ ಅವಾಂತರಗಳನ್ನು ಸೃಷ್ಟಿಸಿದೆ. ಕರಾವಳಿ ಕರ್ನಾಟಕ (Coastal Karnaaka) ಭಾಗದಲ್ಲಿ ವರ್ಷಧಾರೆ ಸುರಿಯುತ್ತಿದ್ದು, ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಭಾರೀ ಬಿರುಗಾಳಿ ಸಹಿತ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬದಲ್ಲಿ ಬೃಹತ್ ಮರ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ನೂಜಿಬಾಳ್ತಿಲ ಎಂಬಲ್ಲಿ ಘಟನೆ ನಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟಕ್ಕೆ ಇಬ್ಬರು ಮಕ್ಕಳು ಸೇರಿ ಕಾರಿನಲ್ಲಿದ್ದ 6 ಮಂದಿ ಬಚಾವಾಗಿದ್ದಾರೆ. ಗಾಯಾಳುಗಳು ಶಿವಮೊಗ್ಗ ಮೂಲದವರಾಗಿದ್ದು, ಕುಕ್ಕೆಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಅನಾಹುತ ಸಂಭವಿಸಿದೆ.

ಪುತ್ತೂರು ನಗರಸಭೆ ಕಾಂಪೌಂಡ್ ಕುಸಿದು 3 ಆಟೋಗಳು ಜಖಂಗೊಂಡಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಮಹಾಲಿಂಗೇಶ್ವರ ದೇಗುಲ ಬಳಿ ಗೋಡೆ ಕುಸಿದು ಓರ್ವ ಮಹಿಳೆ ಗಾಯಗೊಂಡಿದ್ದಾರೆ.

ಒಂದೇ ಮಳೆಗೆ ನದಿಯಂತಾಯ್ತು ಪಂಪ್​ವೆಲ್ ಸರ್ಕಲ್

ಜೋರು ಮಳೆಗೆ ಮಂಗಳೂರಿನ ಪ್ರಮುಖ ಏರಿಯಾಗಳೇ ಜಲಾವೃತವಾಗಿವೆ. ಪಂಪ್‌ವೆಲ್ ಸರ್ಕಲ್ ಜಲಾವೃತಗೊಂಡು ನದಿಯಂತೆ ಕಾಣಿಸಿದೆ. ಕೆಲವೆಡೆ ಹೋಟೆಲ್ ಹಾಗೂ ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ.

ಇದನ್ನೂ ಓದಿ
ಕೊಡಗು ಜಿಲ್ಲೆಯಲ್ಲಿ ವರುಣಾರ್ಭಟ: ಕಾಲೇಜುಗಳಿಗೆ ರಜೆ ಘೋಷಣೆ
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಮುಂಗಾರು ಮಳೆ: ಕರವಾಳಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಅವಾಂತರ

ಮಂಗಳೂರಿನ ಅಡ್ಯಾರ್‌ನಲ್ಲಿ ವರುಣಾರ್ಭಟಕ್ಕೆ ಚರಂಡಿ ನೀರು ಬಾವಿ, ಗದ್ದೆಗಳಿಗೆ ಸೇರುತ್ತಿದೆ. ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ. ಜೀವನದಿ ನೇತ್ರಾವತಿ ಬೋರ್ಗರೆಯುತ್ತಿದೆ. ಬೆಳ್ತಂಗಡಿಯಲ್ಲಿ ಅಡಕೆ ತೋಟವನ್ನ ನದಿ‌ ನೀರು ಆವರಿಸಿದೆ.

ಇನ್ನು ಮಳೆ ನಡುವೆಯೂ ಮಂಗಳೂರಿನ ಕುಲಶೇಖರ ಕಲ್ಪನೆ ಬಳಿ‌ ಕಾರೊಂದು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಪ್ರಕ್ಷುಬ್ಧಗೊಂಡ ಕಡಲು: ಜೀವದ ಜೊತೆ ಜನರ ಚೆಲ್ಲಾಟ

ಉಡುಪಿಯ ಮಲ್ಪೆ ಬೀಚ್​​ನಲ್ಲಿ ರಕ್ಕಸ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಆದರೆ ಪ್ರವಾಸಿಗರು ಜೀವದ ಜೊತೆ ಚೆಲ್ಲಾಟವಾಡುತ್ತಿದ್ದು, ಮಲ್ಪೆ ಸೀ ವಾಕ್ ಎಂಡ್ ಪಾಯಿಂಟ್​​ನಲ್ಲಿ ರಿಸ್ಕಿ ಫೋಟೋಶೂಟ್ ಮಾಡುತ್ತಿರುವುದಿ ಕಂಡುಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸುಂಕೇರಿಯಲ್ಲಿ ಯುವಕನೊಬ್ಬ ಕಾಲು ಜಾರಿ ಕಾಳಿ ನದಿಗೆ ಬಿದ್ದಿದ್ದಾನೆ. ಶನಿವಾರ ರಾತ್ರಿ ಘಟನೆ ನಡೆದಿದ್ದು, ಭಾನುವಾರ ಸಂತೋಷ್ ಮೃತದೇಹ ಪತ್ತೆ ಆಗಿದೆ.

ಕುಮಟಾ ಮುಸುಗುಪ್ಪ ಬಳಿ ಮೂರೂರು-ಹರಕಡೆ ಸಂಪರ್ಕ ರಸ್ತೆಯಲ್ಲಿ ಗುಡ್ಡಕುಸಿತವಾಗಿದೆ. ನಿರಂತರ ಮಳೆಗೆ ಬಂಡೆಗಲ್ಲು ರಸ್ತೆಗೆ ಜಾರಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿದೆ.

ಕೊಡಗಿನಲ್ಲಿ ಇಂದು ಅಂಗನಾಡಿ, ಕಾಲೇಜ್‌ಗಳಿಗೆ ರಜೆ

ಕೊಡಗಿನ ವಿರಾಜಪೇಟೆಯಲ್ಲಿ ಮಳೆ ನೀರು ರಸ್ತೆ ಮೇಲೆ ನದಿಯಂತೆ ಹರಿದಿದೆ. ವಿರಾಜಪೇಟೆ-ಗೋಣಿಕೊಪ್ಪಲು ರಸ್ತೆಯಲ್ಲಿ ವಾಹನ ಸವಾರರ ಪರದಾಟವಂತಾಗಿದೆ. ಭಾರಿ ಮಳೆ ಹಿನ್ನೆಲೆ ಕೊಡಗು ವಿವಿ ಅಧೀನ‌ ಕಾಲೇಜುಗಳಿಗೆ ಇಂದಿನಿಂದ 2 ದಿನ ರಜೆ ಘೋಷಿಸಲಾಗಿದ್ದು, ಜಿಲ್ಲಾಡಳಿತ ಅಂಗನವಾಡಿಗಳಿಗೂ ರಜೆ ಘೋಷಿಸಿದೆ.

ಚಿಕ್ಕಮಗಳೂರಿನಲ್ಲಿ 2 ದಿನ ರೆಡ್ ಅಲರ್ಟ್ ಘೋಷಣೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್, ಬಾಳೂರು, ಕೊಟ್ಟಿಗೆಹಾರ, ಎನ್​ಆರ್ ಪುರ ತಾಲೂಕಿನ ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ, ಕಳಸ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಅಬ್ಬರಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇನ್ನೆರಡು ದಿನ ರೆಡ್ ಅಲರ್ಟ್ ಘೋಷಣೆ ಆಗಿದೆ.

ಆಟೋ‌‌ ಮೇಲೆ ಮರಬಿದ್ದು ಚಾಲಕ‌ ಸಾವು

ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ, ಗಾಳಿ ಭಾರೀ ಗಂಡಾಂತರವನ್ನೇ ತಂದೊಡ್ಡಿದೆ. ಕೊಪ್ಪ ತಾಲೂಕಿನ ಜಯಪುರದಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು, ಚಾಲಕ ಆಟೋದಲ್ಲೇ ಮೃತಪಟ್ಟಿದ್ದಾರೆ. ಚಾಲಕ ರತ್ನಾಕರ್, ಪ್ರಯಾಣಿಕರನ್ನು ಡ್ರಾಪ್ ಮಾಡಿ ವಾಪಸ್ ಬರುವಾಗ ದುರಂತ ನಡೆದಿದೆ. ಇತ್ತ ಎನ್​ಆರ್ ಪುರ ತಾಲೂಕಿನಲ್ಲಿ ಭದ್ರಾ ಹಿನ್ನೀರಿನಲ್ಲಿ ತಾಯಿಯ ಕಣ್ಣೆರುರೇ ಕಾಲು ಜಾರಿಬಿದ್ದು ಯುವಕ ಗೌತಮ್ ಎಂಬಾತ ಮೃತಪಟ್ಟಿದ್ದಾರೆ. ಭದ್ರಾ ಹಿನ್ನೀರು ವೀಕ್ಷಣೆಗೆ ಬಂದಿದ್ದ ವೇಳೆ ಘೋರ ದುರಂತ ಸಂಭವಿಸಿದೆ.

ಇದನ್ನೂ ಓದಿ: ಶಿರಾಡಿ ಘಾಟ್​ನಲ್ಲಿ ಭೂಕುಸಿತದಿಂದ ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ

ಮಳೆ ವಾಹನ ಸವಾರರ ಜೀವಕ್ಕೆ ಸಂಚಕಾರ ತಂದೊಡ್ಡುತ್ತಿದೆ. ಮೂಡಿಗೆರೆ ತಾಲೂಕಿನ ರಾಮಣ್ಣನಗಂಡಿ ಬಳಿ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ 3 ಕಾರುಗಳು ನದಿಗೆ ಉರುಳಿ ಬಿದ್ದಿದ್ದು, ಸ್ಥಳೀಯರು ಹರಸಾಹಸಪಟ್ಟು ಕಾರುಗಳನ್ನು ಮೇಲೆತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ‌73 ರ ಚಕಮಕ್ಕಿ‌ ಗ್ರಾಮದಲ್ಲೂ ಇಂತದ್ದೇ ಘಟನೆ ನಡೆದಿದೆ. ಚಾಲಕನ ಕಂಟ್ರೋಲ್ ತಪ್ಪಿ ಕಾರೊಂದು ಹೇಮಾವತಿ ‌ನದಿಗೆ ಪಲ್ಟಿಯಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಟ್ರಾಕ್ಟರ್​​ಗೆ ಹಗ್ಗ ಕಟ್ಟಿ‌ ಗ್ರಾಮಸ್ಥರು ಕಾರನ್ನು ಮೇಲಕ್ಕೆತ್ತಿದ್ದಾರೆ.

ಮೂಡಿಗೆರೆ ತಾಲೂಕಿನ ಚೇಗ್ ಗ್ರಾಮದಲ್ಲಿ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದಿದೆ. ವಿದ್ಯುತ್ ಕಂಬ ಪುಡಿ ಪುಡಿಯಾಗಿದೆ. ಇತ್ತ ಸಬ್ಲಿ‌ ಗ್ರಾಮದಲ್ಲಿ ಮಳೆ, ಗಾಳಿಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡಿದೆ. ರಾತ್ರಿಯಿಡೀ ಸಬ್ಲಿ‌ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಗ್ರಾಮಸ್ಥರು ಪರದಾಡಿದರು. ಸೋಮವಾರ ಹಾಗೂ ಮಂಗಳವಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:56 am, Mon, 26 May 25