ರಾಜ್ಯಕ್ಕೆ ಪ್ರವೇಶಿಸಿದ ಮುಂಗಾರು: ಮಳೆಗೆ ಕರವಾಳಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಅವಾಂತರ, 3 ಕಾರು ಪಲ್ಟಿ
ಈ ವರ್ಷ ಮುಂಗಾರು ಮಳೆ 15 ದಿನಗಳ ಮುಂಚೆಯೇ ಆಗಮಿಸಿದೆ. ಕರಾವಳಿ, ಮಲೆನಾಡು ಮತ್ತು ಒಳನಾಡಿನಲ್ಲಿ ಭಾರೀ ಮಳೆಯಾಗಿದ್ದು, ಪ್ರವಾಹ ಮತ್ತು ಭೂಕುಸಿತಗಳಿಗೆ ಕಾರಣವಾಗಿದೆ. ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳು ತೀವ್ರವಾಗಿ ಪರಿಣಾಮ ಬೀರಿವೆ. ಹಲವು ಕಾರುಗಳು ನದಿಗೆ ಬಿದ್ದಿವೆ ಮತ್ತು ರಸ್ತೆಗಳು ಹಾನಿಗೊಳಗಾಗಿವೆ. ರೆಡ್ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು, ಮೇ 25: ಈ ವರ್ಷ ವಾಡಿಕೆಗಿಂತ ಬರೋಬ್ಬರಿ 15 ದಿನ ಮೊದಲೇ ರಾಜ್ಯಕ್ಕೆ ಮುಂಗಾರು (Monsoon) ಆಗಮಿಸಿದೆ. ಕರಾವಳಿ, ಮಲೆನಾಡು, ಒಳನಾಡಿನ ಕೆಲವಡೆ ಶನಿವಾರದಿಂದಲೇ ಮುಂಗಾರು ಮಳೆ (Monsoon Rain) ಅಬ್ಬರ ಜೋರಾಗಿದೆ. ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳ ಕರಾವಳಿಗೆ ಅಪ್ಪಳಿಸುವ ಮುಂಗಾರು ಮಳೆ, ತದ ನಂತರ ಒಂದು ವಾರದಲ್ಲಿ ಕರ್ನಾಟಕಕ್ಕೆ ಕಾಲಿಡುತ್ತಿತ್ತು. ಆದರೆ, ಈ ಸಲ ಒಂದು ವಾರ ಮೊದಲು ಕೇರಳಕ್ಕೆ, ರಾಜ್ಯಕ್ಕೆ ಎರಡು ವಾರ ಮೊದಲೇ ಆಗಮಿಸಿದೆ. ನಿರಂತರ ಬಿರುಗಾಳಿ ಮಳೆಯಿಂದ ಚಿಕ್ಕಮಗಳೂರು (Chikkamagaluru), ಹಾಸನ (Hassan) ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿವೆ.
ಹೇಮಾವತಿ ನದಿಗೆ ಬಿದ್ದ 3 ಕಾರು, ಮೇಲೆತ್ತಲು ಹರಸಾಹಸ
ಚಿಕ್ಕಮಗಳೂರಿನಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಚಿಕ್ಕಮಗಳೂರಿನ ಬಣಕಲ್ನ ರಾಮಣ್ಣನಂಗಡಿ ಬಳಿ, ಧಾರಾಕಾರ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಮೂರು ಕಾರುಗಳು ಪಲ್ಟಿಯಾಗಿವೆ. ಚಕಮಕ್ಕಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಘಟನೆ ನಡೆದಿದೆ. ಹೇಮಾವತಿ ನದಿ ತೀರಕ್ಕೆ ಕಾರು ಉರುಳಿ ಬಿದ್ದಿದ್ದು, ಚಾಲಕನಿಗೆ ಗಂಭೀರ ಗಾಯವಾಗಿದೆ. ಅದೃಷ್ಟವಶಾತ್ ನಾಲ್ವರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಹಗ್ಗ ಕಟ್ಟಿ ನದಿಗೆ ಇಳಿದು ಕಾರಿನಲ್ಲಿದ್ದ ಇಬ್ಬರನ್ನು ರಕ್ಷಿಸಿದ್ದಾರೆ. ಚಾಲಕನನ್ನ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮೂಡಿಗೆರೆ ತಾಲೂಕಿನ ಬಣಕಲ್, ಬಾಳೂರು, ಕೊಟ್ಟಿಗೆಹಾರ, ಎನ್ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ವೇಗವಾಗಿ ಬಿಸುತ್ತಿರುವ ಗಾಳಿಯಿಂದ ಆತಂಕ ಸೃಷ್ಟಿಯಾಗಿದೆ.
ಇದನ್ನೂ ಓದಿ: ಕರ್ನಾಟಕದ ಕರಾವಳಿ ಸೇರಿ 6 ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್, ಮುಂಗಾರು ಅಬ್ಬರ ಶುರುವಾಯ್ತಾ?
ಕೊಡಗು ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟ ಏರಿಕೆ
ಕೊಡಗು ಜಿಲ್ಲೆಯಾದ್ಯಂತ ವರುಣಾರ್ಭಟ ಮುಂದುವರೆದಿದೆ. ರವಿವಾರ (ಮೇ.25) ಬೆಳಗ್ಗೆಯಿಂದಲೇ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಭಾರಿ ಮಳೆಗೆ ಕೊಡಗಿನ ಹಲವೆಡೆ ಜನ ಜೀವನ ಅಸ್ತವ್ಯಸ್ತವಾಗಿದ್ದು, ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ನದಿ ತೀರದ ನಿವಾಸಿಗಳಿಗೆ ಪ್ರವಾಹದ ಆತಂಕ ಎದುರಾಗಿದೆ.
ಹಾಸನದಲ್ಲಿ ಮಳೆ ಹೊಡೆತಕ್ಕೆ ಮೀನು ಸಾಗಿಸುತ್ತಿದ್ದ ಲಾರಿ ಪಲ್ಟಿ
ಹಾಸನ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಮಳೆ ಹೊಡೆತಕ್ಕೆ ಚಾಲಕನ ನಿಯಂತ್ರಣ ತಪ್ಪಿ ಮೀನು ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದೆ. ಸಕಲೇಶಪುರ ತಾಲೂಕಿನ ರಾಟೆ ಮನೆ ಬಳಿ ಅವಘಡ ಸಂಭವಿಸಿದೆ. ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೇಲೂರು ತಾಲೂಕಿನ, ಕುಪ್ಪಗೋಡು ಗ್ರಾಮದಲ್ಲಿ ಮಳೆ ಅಬ್ಬರಕ್ಕೆ ಕೆರೆ ಕೋಡಿ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಅಂದಾಜು 60 ಎಕರೆ ಜಮೀನಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿ ಭಾರೀ ಮಳೆಗೆ ಶಿರಾಡಿಘಾಟ್ ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ. ಚತುಷ್ಪಥ ರಸ್ತೆ ನಿರ್ಮಾಣದಿಂದ ಮಣ್ಣು ಸಡಿಲಗೊಂಡಿದ್ದು, ತಡೆಗೋಡೆ ನಿರ್ಮಿಸಿದ್ದರೂ ಮಣ್ಣು ಕುಸಿಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಮಂಗಳೂರಿನ ಅಡ್ಯಾರ್ ಗ್ರಾಮದ ಜನರು ಪರದಾಡುತ್ತಿದ್ದಾರೆ. ಮಳೆಯಿಂದ ಚರಂಡಿಯಲ್ಲಿ ಹರಿಯುವ ನೀರು ಬಾವಿ ಸೇರುತ್ತಿದೆ. ಇದರಿಂದ ಗ್ರಾಮದ ಜನ ಉಪಯೋಗಿಸುವ ಬಾವಿಯ ನೀರೂ ಕಲುಷಿತವಾಗಿದೆ.
ನಿರಂತರವಾಗಿ ಸುರಿಯುತ್ತಿರವ ಮಳೆಯಿಂದ ಹಳೆ ಕಟ್ಟಡದ ಗೋಡೆ ಕುಸಿದು ಹೂ ಮಾರಾಟ ಮಾಡುತ್ತಿದ್ದ ಮಹಿಳೆಯ ಮೇಲೆ ಬಿದ್ದಿದೆ. ಮಹಿಳೆಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿ ಘಟನೆ ನಡೆದಿದೆ. ಇತ್ತೀಚೆಗೆ ಕಟ್ಟಡವನ್ನು ನೆಲಸಮಗೊಳಿಸಲಾಗಿತ್ತು. ಆದರೆ ಗೋಡೆಯ ಒಂದು ಪಾರ್ಶ್ವವನ್ನು ಹಾಗೇ ಬಿಡಲಾಗಿತ್ತು. ಭಾರೀ ಮಳೆಯ ಹಿನ್ನಲೆಯಲ್ಲಿ ಗೋಡೆ ಕುಸಿದು ಬಿದ್ದಿದೆ.
ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಮಳೆಯಾಗುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ತುಂಬಿ ಹರಿಯುತ್ತಿದೆ. ಬೆಳ್ತಂಗಡಿಯಲ್ಲಿ ಅಡಕೆ ತೋಟಕ್ಕೆ ನದಿ ನೀರು ನುಗ್ಗಿದೆ. ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕಾಯರ್ತೋಡಿ ಎಂಬಲ್ಲಿ ಘಟನೆ ನಡೆದಿದೆ.
ಅವಳಿ ನಗರದಲ್ಲಿ ಜೋರು ಮಳೆ
ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಳೆಗೆ ಜನ ಹೈರಾಣಾಗಿದ್ದಾರೆ. ರೋಣ, ಗಜೇಂದ್ರಗಡ, ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ ತಾಲೂಕಿನಲ್ಲೂ ನಿರಂತರ ಮಳೆಯಾಗಿದೆ. ಮುಂಗಾರು ಮಳೆಯ ಅಬ್ಬರಕ್ಕೆ ರೈತರು ಫುಲ್ ಖುಷ್ ಆಗಿದ್ದು, ಬಿತ್ತನೆಗೆ ತಯಾರಿ ನಡೆಸಿದ್ದಾರೆ. ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು, ಮುಂದಿನ ಒಂದು ವಾರದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:47 pm, Sun, 25 May 25








