ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ವಿಷಕಾರಿ ನೊರೆ ಹಾವಳಿ: ಅಕ್ಕಪಕ್ಕದ ನಿವಾಸಿಗಳಲ್ಲಿ ಆತಂಕ!
ಬೆಳ್ಳಂದೂರು ಕೆರೆಯಲ್ಲಿ ಮತ್ತೆ ವಿಷಕಾರಿ ನೊರೆ ಕಾಣಿಸಿಕೊಂಡಿದೆ. ಮಳೆಯಿಂದಾಗಿ ಕೆರೆಗೆ ಹರಿದು ಬಂದ ಮಾಲಿನ್ಯಯುಕ್ತ ನೀರು ಮತ್ತು ಕೆಸರು, ನೊರೆ ಉತ್ಪಾದನೆಗೆ ಕಾರಣವಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಭೀತಿಯಲ್ಲಿದ್ದಾರೆ. ನೊರೆಯಿಂದ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.

ಬೆಂಗಳೂರು, ಮೇ 25: ಕೆಲ ವರ್ಷಗಳ ಹಿಂದಷ್ಟೇ ಬೆಳ್ಳಂದೂರು ಕೆರೆಯಲ್ಲಿ (Bellandur Lake) ವಿಷಕಾರಿ ನೊರೆ ಕಾಣಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ನಂತರ ಕೆರೆ ಸ್ವಚ್ಚ ಮಾಡುವುದಾಗಿ ಹೇಳಲಾಗಿತ್ತು. ಆದರೆ ಇಲ್ಲಿಯವರೆಗೆ ಕೆರೆಯಲ್ಲಿ ಅಭಿವೃದ್ಧಿ ಆಗಲೇ ಇಲ್ಲ. ಇದೀಗ ಮತ್ತೆ ಕೆರೆಯಲ್ಲಿ ನೊರೆ (foam) ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯ ಬಳಿಕ, ಬೆಳ್ಳಂದೂರು ಕೆರೆಯಲ್ಲಿ ಭಾರಿ ಪ್ರಮಾಣದಲ್ಲಿ ನೊರೆ ಕಾಣಿಸಿಕೊಳ್ಳುತ್ತಿದೆ. ಕೆರೆಗೆ ನೀರಿನ ಹರಿವು ಹೆಚ್ಚಾಗಿದ್ದರಿಂದ ನೊರೆ ಪ್ರಮಾಣವು ಏರಿಕೆಯಾಗಿದೆಯಂತೆ. ಬೆಳ್ಳಂದೂರು ಕೆರೆ ಕಲುಷಿತವಾಗಿದೆಂದು ಸ್ಥಳೀಯರು ಆತಂಕಗೊಂಡಿದ್ದು, ಕಲುಷಿತ ನೀರು ಕೆರೆಗೆ ಸೇರ್ಪಡೆಯಾದ ಕಾರಣ, ಮಲಿನವಾಗಿ ಕೆರೆ ಕೋಡಿಯಲ್ಲಿ ನೊರೆ ಎದ್ದು, ಗಾಳಿ ಮೂಲಕ ಜನವಸತಿ ಪ್ರದೇಶದ ಕಡೆಗೆ ಹೋಗುತ್ತಿದೆ.
ಇದನ್ನೂ ಓದಿ: UPSC Exam: ಮೇ 25 ರಂದು ನಮ್ಮ ಮೆಟ್ರೋ ಸಂಚಾರ 1 ಗಂಟೆ ಮುಂಚಿವಾಗಿ ಆರಂಭ
ಬೆಳ್ಳಂದೂರು, ಕರಿಯಮ್ಮ ಅಗ್ರಹಾರ, ಯಮಲೂರು, ಕೆಂಪಾಪುರ, ಚಲಘಟ್ಟ, ನಾಗಸಂದ್ರ ಇಬ್ಬಲೂರು, ದೇವರ ಬೀಸನಹಳ್ಳಿ ಕಾಡುಬೀಸನಹಳ್ಳಿ ಪ್ರದೇಶದ ಜನರಿಗೆ ಮತ್ತೆ ತೊಂದರೆ ಉಂಟಾಗಿದ್ದು, ಪದೇ ಪದೇ ಬೆಳ್ಳಂದೂರು ಕೆರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೊರೆ ಕಾಣಿಸಿಕೊಳ್ಳುತ್ತಿದೆ.
ಕೆರೆಯಲ್ಲಿ ನೊರೆ ಕಾಣಿಸಿಕೊಳ್ಳಲು ಕಾರಣವೇನು?
ಇನ್ನು ಕೆರೆಯಲ್ಲಿ ನೊರೆ ಕಾಣಿಸಿಕೊಳ್ಳಲು ಕಾರಣ ಏನೆಂದರೆ ಸಂಸ್ಕರಿಸದ ಮಾಲಿನ್ಯಯುಕ್ತ ನೀರನ್ನು ಕೆರೆಗೆ ಬೀಡಲಾಗುತ್ತಿದೆಯಂತೆ. ಈ ಮಾಲಿನ್ಯಯುಕ್ತ ನೀರು ಕೆರೆಯಿಂದ ಹೊರ ಹೋಗಲು ಕನಿಷ್ಠ 10-15 ದಿನಗಳು ಬೇಕಾಗುತ್ತಂತೆ. ಈ ಅವಧಿಯಲ್ಲಿ ಸಾವಯವ ವಸ್ತುಗಳು ಕೆರೆಯ ನೀರಿನಲ್ಲಿ ಆಮ್ಲಜನಕವಿಲ್ಲದೇ ತಳ ಸೇರುತ್ತದೆ. ನಂತರ ಅದು ಕೆಸರಿನ ರೂಪವನ್ನ ಪಡೆಯುತ್ತದೆ. ಭಾರಿ ಮಳೆ ಆದ ಸಂದರ್ಭದಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ರಾತ್ರಿ ಇಡೀ ಒಳ ಹರಿವಿನ ಪ್ರಮಾಣ ಹೆಚ್ಚಿದಂತೆ ಕೆರೆಯ ಅಡಿಯಲ್ಲಿ ಕೆಸರು ಮತ್ತು ಮಾಲಿನ್ಯದ ನೀರಿನ ಮಂಥನ ಆರಂಭವಾಗುತ್ತದೆ. ಇದು ನೊರೆ ಸೃಷ್ಟಿಯಾಗಲು ವೇದಿಕೆಯನ್ನು ಸೃಷ್ಟಿ ಮಾಡುತ್ತದೆ.
ಕೆರೆಯ ಆಳದಲ್ಲಿ ಅಲ್ಪ ಪ್ರಮಾಣದ ನೊರೆ ಇರುತ್ತದೆ. ಮಳೆಯಿಂದಾಗಿ ಕೆರೆಯಲ್ಲಿ ಯಾವಾಗ ನೀರಿನ ಪ್ರಮಾಣ ಹೆಚ್ಚುತ್ತಾ ಹೋಗುತ್ತೋ ಆಗ 25 ಅಡಿ ಎತ್ತರದಷ್ಟು ಗಾಳಿ ಗುಳ್ಳೆಗಳು ಹಾರುತ್ತವೆ. ಈ ಗಾಳಿಗುಳ್ಳೆಗಳು ನೊರೆಯನ್ನು ಸೃಷ್ಟಿಸುತ್ತದೆ. ಕೆಲವು ವಿಸರ್ಜಿತ ಘನವಸ್ತುಗಳಲ್ಲಿ ಬ್ಯಾಕ್ಟಿರಿಯಾಗಳೂ ಇರುತ್ತವೆ. ಇವು ಕೂಡ ನೊರೆ ಸೃಷ್ಟಿಯಾಗಲು ಕಾರಣವಾಗುತ್ತದೆ. ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ರಾಮಣ್ಣ, ಈ ನೊರೆಯಿಂದ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್: ವಾಹನ ಸವಾರರಿಗೆ ಎಚ್ಚರಿಕೆ ಕೊಟ್ಟ ಡಿಕೆಶಿ
ಒಟ್ನಲ್ಲಿ ಮತ್ತೆ ಬೆಳ್ಳಂದೂರು ಕೆರೆಯಲ್ಲಿ ನೊರೆ ಕಾಣಿಸಿಕೊಳ್ತಿದ್ದು, ಇದರಿಂದ ಆ ಭಾಗದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಅನಾರೋಗ್ಯದ ಸಮಸ್ಯೆ ಎದುರಾಗಲಿದೆ ಅನ್ನೋ ಭಯ ಕೂಡ ಆರಂಭವಾಗಿರುವುದಂತು ಸುಳ್ಳಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







