AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ಹೋಂ ಗಾರ್ಡ್​ ಕೃಪೆ: 2 ಲಕ್ಷ ರೂ. ಚಿನ್ನಾಭರಣ, ಹಣವಿದ್ದ ಬ್ಯಾಗ್ ಅರ್ಧ ಗಂಟೆಯಲ್ಲೇ ಮಹಿಳೆ ಕೈಗೆ

ಬೆಂಗಳೂರು ಮೆಟ್ರೋದ ಮಹಾಕವಿ ಕುವೆಂಪು ರಸ್ತೆ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಬೆಲೆಬಾಳುವ ವಸ್ತುಗಳಿದ್ದ ಬ್ಯಾಗನ್ನು ಬಿಟ್ಟುಹೋಗಿದ್ದು, ಭದ್ರತಾ ಸಿಬ್ಬಂದಿ ಮಂಜುಳಮ್ಮ ಎಂಬವರು ಕೇವಲ ಅರ್ಧ ಗಂಟೆಯಲ್ಲಿ ಅದನ್ನು ವಾರಸುದಾರರಿಗೆ ಹಿಂದಿರುಗಿಸುವಲ್ಲಿ ನೆರವಾಗಿದ್ದಾರೆ. ಮಂಜುಳಮ್ಮ ಅವರ ಪ್ರಾಮಾಣಿಕತೆಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಹಾಗೂ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೆಟ್ರೋ ಹೋಂ ಗಾರ್ಡ್​ ಕೃಪೆ: 2 ಲಕ್ಷ ರೂ. ಚಿನ್ನಾಭರಣ, ಹಣವಿದ್ದ ಬ್ಯಾಗ್ ಅರ್ಧ ಗಂಟೆಯಲ್ಲೇ ಮಹಿಳೆ ಕೈಗೆ
ಸಾಂದರ್ಭಿಕ ಚಿತ್ರ
Ganapathi Sharma
|

Updated on: May 24, 2025 | 3:30 PM

Share

ಬೆಂಗಳೂರು, ಮೇ 24: ಮೆಟ್ರೋ ನಿಲ್ದಾಣದಲ್ಲಿ (Namma Metro) ಪ್ರಯಾಣಿಕರೂಬ್ಬರು ಬಿಟ್ಟು ಹೋಗಿದ್ದ ಚಿನ್ನ, ನಗದು ಹಾಗೂ ಇತರ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗನ್ನು ಕೇವಲ 30 ನಿಮಿಷಗಳಲ್ಲಿ ಅವರಿಗೆ ವಾಪಸ್ ದೊರೆಯುವಂತೆ ಮಾಡುವ ಮೂಲಕ ಭದ್ರತಾ ಸಿಬ್ಬಂದಿಯೊಬ್ಬರು (Metro Security Staff) ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೆಟ್ರೋ ಹಸಿರು ಮಾರ್ಗದ (Metro Greenline) ಮಹಾಕವಿ ಕುವೆಂಪು ರಸ್ತೆ ನಿಲ್ದಾಣದಲ್ಲಿ ಈ ವಿದ್ಯಮಾನ ನಡೆದಿದೆ. ವೃತ್ತಿಪರತೆ ಮೆರೆದ ಹೋಂ ಗಾರ್ಡ್ ಬಗ್ಗೆ ಬಿಎಂಆರ್‌ಸಿಎಲ್ (BMRCL) ಮತ್ತು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿಗಳ ಪ್ರಕಾರ, ನಿವೇದಿತಾ ಭಟ್ ಎಂಬುವರು ಶುಕ್ರವಾರ ಮಧ್ಯಾಹ್ನ ಮಹಾಕವಿ ಕುವೆಂಪು ರಸ್ತೆ ಮೆಟ್ರೋ ನಿಲ್ದಾಣದ ಮೂಲಕ ಸಿಲ್ಕ್ ಇನ್ಸ್​​ಟಿಟ್ಯೂಟ್ ಗೆ ಪ್ರಯಾಣ ಬೆಳೆಸಿದ್ದರು. ಆ ಸಂದರ್ಭದಲ್ಲಿ ತಮ್ಮ ಬ್ಯಾಗನ್ನು ಮೆಟ್ರೋ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು.

ಆ ಬ್ಯಾಗಿನಲ್ಲಿ 2 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಸರ, 2000 ರೂಪಾಯಿ ನಗದು, ಗುರುತಿನ ಚೀಟಿಗಳು ಮತ್ತು ಇತರ ಅಗತ್ಯ ದಾಖಲೆಗಳು ಇದ್ದವು. ವಾರಸುದಾರರಿಲ್ಲದ ಬ್ಯಾಗ್ ಹೋಂ ಗಾರ್ಡ್ ಮಂಜುಳಮ್ಮ ಅವರಿಗೆ ಕಾಣಿಸಿತ್ತು.

ಇದನ್ನೂ ಓದಿ
Image
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
Image
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!
Image
ಮೇ 29 ರಿಂದ ಮದ್ಯದಂಗಡಿ ಬಂದ್: ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ಲಾನ್
Image
ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ವಿವರ

ತಕ್ಷಣವೇ ಮಂಜುಳಮ್ಮ ವಾರಸುದಾರರಿಲ್ಲದ ಬ್ಯಾಗ್ ಬಗ್ಗೆ ಸಹಾಯಕ ಭದ್ರತಾ ಅಧಿಕಾರಿಗೆ ಮಾಹಿತಿ ನೀಡಿದರು. ಅವರು ಸ್ಟೇಷನ್ ಕಂಟ್ರೋಲರ್ ಗವಾಸ್ಕರ್ ನಾಯಕ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದರು. ಬ್ಯಾಗ್ ತಪಾಸಣೆ ನಡೆಸಿದ ವೇಳೆ, ಅದರಲ್ಲೊಂದು ಬೇಸಿಕ್ ಮೊಬೈಲ್ ಫೋನ್ ಇರುವುದು ಕೂಡ ಗೊತ್ತಾಯ್ತು. ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಫೋನ್ ಅದಾಗಿದ್ದರೂ ಅದರಲ್ಲಿ ನಿವೇದಿತಾ ಭಟ್ ಅವರ ಸ್ನೇಹಿತರ ಸಂಪರ್ಕ ಸಂಖ್ಯೆಗಳು ಇರುವುದು ಗಮನಕ್ಕೆ ಬಂತು. ಈ ಮೂಲಕ ಅವರ ಸ್ನೇಹಿತರನ್ನು ಸಂಪರ್ಕಿಸಿ ಬಿಎಮ್ಆರ್ಸಿಎಲ್ ಅಧಿಕಾರಿಗಳು ಬ್ಯಾಗ್ ಬಗ್ಗೆ ಮಾಹಿತಿ ನೀಡಿದರು.

ನಂತರ ಮಹಾಕವಿ ಕುವೆಂಪು ರಸ್ತೆ ಮೆಟ್ರೋ ನಿಲ್ದಾಣಕ್ಕೆ ಬಂದ ನಿವೇದಿತಾ ಭಟ್ ಗುರುತು ಹೇಳಿ ಬ್ಯಾಗ್ ಪಡೆದುಕೊಂಡರು.

ಇದನ್ನೂ ಓದಿ: ಮೆಟ್ರೋ ನಿಲ್ದಾಣಗಳ‌ಲ್ಲಿ ಶೌಚಾಲಯ ಬಳಕೆಗೆ ಶುಲ್ಕ: ವಿವಾದಕ್ಕೆ ತೆರೆಳೆದ BMRCL

ಕಳೆದು ಹೋದ ಬ್ಯಾಗ್ ತಕ್ಷಣವೇ ಪ್ರಯಾಣಿಕರಿಗೆ ಮರಳಿ ಸಿಗುವಂತೆ ಮಾಡಿದ ಹೋಂ ಗಾರ್ಡ್ ಮಂಜುಳಾ ಬಗ್ಗೆ ಬಿಎಂಆರ್​​ಸಿಎಲ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಸಿಬ್ಬಂದಿ ತಕ್ಷಣವೇ ಜವಾಬ್ದಾರಿಯಿಂದ ವರ್ತಿಸಿ ಪ್ರಯಾಣಿಕರ ಬ್ಯಾಗನ್ನು ಸುರಕ್ಷಿತವಾಗಿ ಅವರಿಗೆ ಹಿಂದಿರುಗಿಸಿದ್ದಾರೆ ಎಂದು ಬಿಎಂಆರ್‌ಸಿಎಲ್ ವಕ್ತಾರರು ತಿಳಿಸಿದ್ದಾರೆ.

ಮಂಜುಳಮ್ಮ ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆಯವರಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಬಿಎಂಆರ್​​ಸಿಎಲ್ ಹೋಂ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ