ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್: ವಾಹನ ಸವಾರರಿಗೆ ಎಚ್ಚರಿಕೆ ಕೊಟ್ಟ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣ ಹಾಗೂ ಕಾವೇರಿ ಆರತಿ ನಡೆಸುವ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸೌಧದಲ್ಲಿ ಇಂದು (ಮೇ 14) ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಗ್ರೇಟರ್ ಬೆಂಗಳೂರು, ಈ-ಖಾತಾ, ಸುರಂಗ ಮಾರ್ಗ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಇದೇ ವೇಳೆ ಬೀದಿ ವ್ಯಾಪರಿಗಳಿಗೆ ಶಾಕ್ ಜೊತೆ ಸಿಹಿ ಸುದ್ದಿಯೊಂದನ್ನು ಸಹ ನೀಡಿದ್ದಾರೆ.

ಬೆಂಗಳೂರು, ಮೇ 24: ಹಲವು ವರ್ಷಗಳ ಬಳಿಕ ಬೆಂಗಳೂರಿನಲ್ಲಿ (Bengaluru) ಮತ್ತೆ ವಾಹನಗಳ ಟೋಯಿಂಗ್ ಆರಂಭವಾಗಲಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಟೋಯಿಂಗ್ ಮತ್ತೆ ಆರಂಭವಾಗಲಿದ್ದು, ಈ ಬಗ್ಗೆ ಉಪಮಖ್ಯಮಂತ್ರಿ, ಬೆಂಗಳೂರು ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ (DK Shivakumar) ಅವರು ಟೋಯಿಂಗ್ ಆರಂಭಿಸುವುದಾಗಿ ಹೇಳಿದ್ದಾರೆ. ಹೀಗಾಗಿ ರಸ್ತೆ ಮೇಲೆ ವಾಹನ ನಿಲ್ಲಿಸುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸುರಂಗ ರಸ್ತೆ ನಿರ್ಮಾಣ ಹಾಗೂ ಕಾವೇರಿ ಆರತಿ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ರಸ್ತೆಗಳ ಮೇಲೆ ನಿಲ್ಲಿಸಿದ ವಾಹನಗಳನ್ನು ಟೋಯಿಂಗ್ (Towing) ಮಾಡುತ್ತೇವೆ. 21 ದಿನಗಳಲ್ಲಿ ಆ ವಾಹನಗಳನ್ನು ಹರಾಜು ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸ್ಥಗಿತಗೊಂಡಿದ್ದ ಟೋಯಿಂಗ್
ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ 2022ರ ಫೆಬ್ರವರಿಯಲ್ಲಿ ಟೋಯಿಂಗ್ ಬಂದ್ ಆಗಿತ್ತು. ಕೆಲವು ಹೊಸ ನಿಯಮ, ಗೈಡ್ ಲೈನ್ಸ್ನೊಂದಿಗೆ ಟೋಯಿಂಗ್ ಪ್ರಾರಂಭಿಸಲಾಗುವುದು ಎಂದು ಈ ಹಿಂದಿನ ಸರ್ಕಾರ ಹೇಳಿತ್ತು. ಆದರೆ, ಮತ್ತೆ ಟೋಯಿಂಗ್ ಪ್ರಾರಂಭವಾಗಿರಲಿಲ್ಲ. ಇದೀಗ ಮತ್ತೆ ಟೋಯಿಂಗ್ ಆರಂಭಿಸುವ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಟ್ರಾಫಿಕ್ ಸಮಸ್ಯೆಗೆ ಕಡಿವಾಣ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ಮೆಟ್ರೋ ಕಾಮಗಾರಿಗಳ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡುತ್ತೇವೆ. ಇದರಿಂದ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಟನಲ್ ರೋಡ್ ನಿರ್ಮಾಣಕ್ಕೆ ಬಿಜೆಪಿ ಮತ್ತು ಜೆಡಿಎಸ್ನ ಎಲ್ಲ ಶಾಸಕರ ಬೆಂಬಲ ಇದೆ ಎಂದು ಹೇಳಿದರು.
ಫುಟ್ಪಾತ್ ಮೇಲೆ ವ್ಯಾಪಾರಕ್ಕೆ ನಿರ್ಬಂಧ
ಫುಟ್ಪಾತ್ ಮೇಲಿನ ವ್ಯಾಪಾರವನ್ನು ನಿಲ್ಲಿಸಬೇಕೆಂದು ತೀರ್ಮಾನಿಸಿದ್ದೇವೆ. ನಿರ್ದಿಷ್ಟವಾದ ಜಾಗದಲ್ಲಿ ಮಾತ್ರ ವ್ಯಾಪಾರ ಮಾಡಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ನೀಡಲು ಸಿದ್ಧರಿದ್ದೇವೆ. ನಾಲ್ಕು ರೀತಿಯ ಗಾಡಿ ಡಿಸೈನ್ ಮಾಡಿದ್ದೇವೆ. 3000ಕ್ಕೂ ಹೆಚ್ಚು ಜನರಿಗೆ ಗಾಡಿ ಕೊಡುವಂತೆ ಶಾಸಕರು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ಎಲ್ಲ ಆಸ್ತಿಗಳಿಗೆ ಇ-ಖಾತಾ
ಬೆಂಗಳೂರಿನ ಎಲ್ಲ ಆಸ್ತಿಗಳಿಗೆ ಇ-ಖಾತಾ ಮಾಡಬೇಕು. ಈಗಾಗಲೇ ಎಲ್ಲ ಆಸ್ತಿಗಳ ಡಿಜಿಟಲೀಕರಣ ಆಗುತ್ತಿದೆ. ತೆರಿಗೆ ಪಾವತಿಗೂ ಸಹ ಪಾರದರ್ಶಕತೆ ತರಲು ನಿರ್ಧಾರ ಮಾಡಿದ್ದೇವೆ. ಸ್ಕೈಡೆಕ್ ನಿರ್ಮಾಣ ಕೆಲಸ ಆರಂಭವಾಗಿದೆ. ಕೆಂಪೇಗೌಡ ಲೇಔಟ್ ಬಳಿ ಸ್ಕೈಡೆಕ್ ಶಿಫ್ಟ್ ಮಾಡುತ್ತೇವೆ.
ಇದನ್ನೂ ನೋಡಿ: ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಡಿಕೆ ಶಿವಕುಮಾರ್
ಗ್ರೇಟರ್ ಬೆಂಗಳೂರು ನೋಟಿಫೀಕೇಷನ್
ಮೇ 15 ರಂದು ಗ್ರೇಟರ್ ಬೆಂಗಳೂರು ನೋಟಿಫೀಕೇಷನ್ ಆಗಿದೆ. 120 ದಿನಗಳಲ್ಲಿ ಪಾಲಿಕೆ ಆರಂಭವಾಗಬೇಕು. ಈ ಬಗ್ಗೆ ಬೆಂಗಳೂರಿನ ಎಲ್ಲ ಶಾಸಕರ ಸಲಹೆ ನೀಡಿದ್ದು, ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಇದೇ ವರ್ಷ ಸೆಪ್ಟೆಂಬರ್ 15 ರ ಒಳಗಾಗಿ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಪೂರ್ಣಗೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಲಿದೆ. ಈಗಾಗಲೇ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಬಜೆಟ್ ನೀಡುತ್ತೇವೆ. ಕುಡಿಯುವ ನೀರಿನ ಟ್ಯಾಂಕರ್ ಕುರಿತು ದೂರು ಬಂದಿತ್ತು. ಸೀಸನ್ ತಕ್ಕಂತೆ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದರು.
ಬೆಂಗಳೂರು ಕಸದ ಕುರಿತು ಪ್ಲಾನ್ ಆಫ್ ಆ್ಯಕ್ಷನ್
ಬೆಂಗಳೂರು ಕಸದ ಕುರಿತು ಪ್ಲಾನ್ ಆಫ್ ಆ್ಯಕ್ಷನ್ ಮಾಡಿದ್ದೇವೆ. ಬೆಂಗಳೂರಿಗೆ ಹೊಸ ರೂಪ ನೀಡಬೇಕು. ಎಲ್ಲೆಲ್ಲಿ ರಸ್ತೆ ಅಗಲೀಕರಣ ಆಗಬೇಕು ಎಂದು ಶಾಸಕರಿಗೆ ತಿಳಿಸಿದ್ದೇನೆ. ರಾಜಕಾಲುವೆ ಪಕ್ಕದಲ್ಲಿ ರಸ್ತೆ ನಿರ್ಮಾಣವಾಗಬೇಕು ಎಂದು ಹೇಳಿದರು.
ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರ
ಮಳೆಯಿಂದ ಹಾನಿಯಾದವರಿಗೆ 10 ಸಾವಿರ ರೂಪಾಯಿ ಪರಿಹಾರ ನೀಡುತ್ತೇವೆ ಎಂದು ಹೇಳಿದರು. ಲೋ ಲೇವಲಿಂಗ್ ಬೇಸ್ಮೆಂಟ್ ಕಟ್ಟಲು ಬಿಡಲ್ಲ. ಇದಕ್ಕೂ ನಿಯಮ ತರುತ್ತೇವೆ. ಬಹಳ ಕಡೆ ಲೋ ಲೆವಲಿಂಗ್ ಬೇಸ್ಮೆಂಟ್ ನಿಂದ ಸಮಸ್ಯೆ ಆಗಿದೆ. ಅಪ್ಟಿಕಲ್ ಫೈಬರ್ ಕೇಬಲ್ನಿಂದಲೂ ಸಮಸ್ಯೆಯಾಗಿದೆ. ಅಕ್ರಮವಾಗಿ ಕೇಬಲ್ ಹಾಕಿದನ್ನು ಕಟ್ ಮಾಡಲು ತಿಳಿಸಿದ್ದೇನೆ ಎಂದು ಹೇಳಿದರು.
ವರದಿ: ಈರಣ್ಣ ಬಸವ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:32 pm, Sat, 24 May 25








