Karnataka Rajyotsava 2021: ಕರ್ನಾಟಕದ ವಿವಿಧೆಡೆ 66ನೇ ಕನ್ನಡ ರಾಜ್ಯೋತ್ಸವ ಸಂಭ್ರಮ
Kannada Rajyotsava 2021 Updates: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಬಿ ಸಿ ನಾಗೇಶ್ ನೇತೃತ್ವದಲ್ಲಿ ಸರಳ ರಾಜ್ಯೋತ್ಸವ ಸಮಾರಂಭ ನಡೆಯಿತು.
ಇಂದು 66ನೇ ಕನ್ನಡ ರಾಜ್ಯೋತ್ಸವ. ಈ ಹಿನ್ನೆಲೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಬಿ ಸಿ ನಾಗೇಶ್ ನೇತೃತ್ವದಲ್ಲಿ ಸರಳ ರಾಜ್ಯೋತ್ಸವ ಸಮಾರಂಭ ನಡೆಯಿತು. ಕೊವಿಡ್ ನಿಯಮದಂತೆ ಸಾಮಾಜಿಕ ಅಂತರ ಕಾಪಾಡಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.
LIVE NEWS & UPDATES
-
ಬೆಳಗಾವಿಯಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಜೋರು
ಬೆಳಗಾವಿಯಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಜೋರಾಗಿದೆ. ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕನ್ನಡ ಅಭಿಮಾನಿಗಳು ಜಮಾವಣೆ ಆಗಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸಪಟ್ಟಿದ್ದಾರೆ. ಗುಂಪುಗುಂಪಾಗಿ ನಿಂತು ಜಯಘೋಷ ಕೂಗುತ್ತಿದ್ದ ಅಭಿಮಾನಿಗಳನ್ನು ಪೊಲೀಸರು ಚದುರಿಸಿದ್ದಾರೆ. ಪೊಲೀಸರು ಲಾಠಿ ಬೀಸುತ್ತಿದ್ದಂತೆ ಯುವಕರು ದಿಕ್ಕಾಪಾಲಾಗಿ ಓಡಿದ್ದಾರೆ. ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಘಟನೆ ನಡೆದಿದೆ.
-
ಬೆಳಗಾವಿ: ಪುನೀತ್ ಹಾಡಿಗೆ ಹೆಜ್ಜೆ ಹಾಕಿ ಕನ್ನಡ ರಾಜ್ಯೋತ್ಸವ ಆಚರಣೆ
ಬೆಳಗಾವಿಯಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ. ಚೆನ್ನಮ್ಮ ವೃತ್ತದಲ್ಲಿ ಧ್ವಜ ಹಿಡಿದು, ಕನ್ನಡದ ಶಾಲು ಧರಿಸಿ ರಾಜ್ಯೋತ್ಸವ ಆಚರಿಸಲಾಗಿದೆ. ದಿವಂಗತ ನಟ ಪುನೀತ್ ರಾಜಕುಮಾರ್ ಪರ ಘೋಷಣೆ ಕೂಗಲಾಗಿದೆ. ಅಪ್ಪು ಹಾಡಿಗೆ ಯುವಕ, ಯುವತಿಯರು ಹೆಜ್ಜೆ ಹಾಕಿದ್ದಾರೆ.
-
ಬಡವರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ಸಿಗಲಿದೆ; ಸಚಿವ ಸುನೀಲ್ ಕುಮಾರ್ ಹೇಳಿಕೆ
ರಾಷ್ಟ್ರೀಯ ಶಿಕ್ಷಣ ನೀತಿ ಕನ್ನಡಕ್ಕೆ ಮಾರಕ ಅಂತ ಯಾರೋ ಅಲ್ಪ ಬುದ್ಧಿ ಇರುವವರು ಮಾತನಾಡುತ್ತಾರೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ನಮ್ಮ ಭಾಷೆಗೆ ವಿಶೇಷ ಆದ್ಯತೆ ಕೊಟ್ಟಿದೆ. ಆದರೆ ಅರ್ಧಂಬರ್ಧ ತಿಳಿದುಕೊಂಡವರು ಬೇರೆಬೇರೆ ರೀತಿ ಹೇಳಿಕೆ ನೀಡುತ್ತಾರೆ. ಬಡವರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ಸಿಗಲಿದೆ. ಪೂರ್ಣವಾದ ವಿವರ ನೋಡಿ ಮಾತನಾಡುವ ಒಳ್ಳೆಯದು ಅಂತ ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ರಂಗೋಲಿಯಲ್ಲಿ ಅರಳಿದ ಕರ್ನಾಟಕ ಮ್ಯಾಪ್
ರಂಗೋಲಿಯಲ್ಲಿ ಕರ್ನಾಟಕ ನಕ್ಷೆ ರಾರಾಜಿಸುತ್ತಿದೆ. ಅಂಬೇಡ್ಕರ್ ನಿಲ್ದಾಣದಲ್ಲಿ ಅಕ್ಷಯ ಜಾಲಿಹಾಳ ಎಂಬುವವರು ಕರ್ನಾಟಕ ಮ್ಯಾಪ್ ಚಿತ್ರವನ್ನು ಬಿಡಿಸಿದ್ದಾರೆ.
ನಾಡದೇವಿ ಭುವನೇಶ್ವರಿಗೆ ಪೂಜೆ ಸಲ್ಲಿಸಿದ ಸಚಿವ ಉಮೇಶ್ ಕತ್ತಿ
ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನಾಡದೇವಿ ಭುವನೇಶ್ವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಪೂಜೆ ಸಲ್ಲಿಸಿದರು. ನಂತರ ಆಹಾರ ಸಚಿವ ಉಮೇಶ್ ಕತ್ತಿ ಧ್ವಜಾರೋಹಣ ಮಾಡಿದರು. ಪಂಥ ಸಂಚಲನ ನಡೆಸುವ ತಂಡಗಳನ್ನು ಸಚಿವರು ವೀಕ್ಷಿಸಿದರು.
ನಾಡಿನ ಜನರಿಗೆ ಕನ್ನಡ ರಾಜ್ಯೋತ್ಸವ ಸಂದೇಶ ಸಾರಿದ ಗಣ್ಯರು
ಮೈಸೂರಿನ ಕೋಟೆ ಆಂಜನೇಯ ದೇಗುಲ ಬಳಿ ಕನ್ನಡ ರಾಜ್ಯೋತ್ಸವ ಆಚರಿಸಿದರು. ಸಚಿವ ಎಸ್ಟಿ ಸೋಮಶೇಖರ್ ಧ್ವಜಾರೋಹಣ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ 36 ಜನರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ನಾಡಿನ ಜನರಿಗೆ ಗಣ್ಯರು ರಾಜ್ಯೋತ್ಸವದ ಸಂದೇಶವನ್ನು ಸಾರಿದರು.
ಕೇವಲ ವೇದಿಕೆಗೆ ಸೀಮಿತವಾದ ಕನ್ನಡ ರಾಜ್ಯೋತ್ಸವ
ಹುಬ್ಬಳ್ಳಿಯ ಸಿದ್ದಾರೂಢ ಮಠದ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸಿದರು. ಈ ಬಾರಿ ಕನ್ನಡ ರಾಜ್ಯೋತ್ಸವ ಕೇವಲ ವೇದಿಕೆಗೆ ಸೀಮಿತವಾಗಿದ್ದು, ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿದೆ.
ನಾಡಿನ ಜನರಿಗೆ ಶುಭ ಕೋರಿದ ಸಚಿವ ಬಿಸಿ ನಾಗೇಶ್
ನಾಡಿನ ಸಮಸ್ತ ಜನರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕೊರೊನಾ ಅಂತಕ ಹಿನ್ನೆಲೆ ಸರಳವಾಗಿ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದೇವೆ. ಪ್ರಧಾನಿಗಳು, ರಾಷ್ಟ್ರಪತಿಗಳು ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿರುವುದು ತುಂಬಾ ಸಂತೋಷವಾಗಿದೆ ಅಂತ ಸಚಿವ ಬಿಸಿ ನಾಗೇಶ್ ಹೇಳಿದರು.
ಭುವನೇಶ್ವರಿ ಭಾವಚಿತ್ರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಪುಷ್ಪಾರ್ಚನೆ
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾವೇರಿ ನಿವಾಸದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದರು.
ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ. ಧ್ವಜಾರೋಹಣ ನೆರವೇರಿಸಿದ ಡಾ. ಕೆ ಸುಧಾಕರ್
ಚಿಕ್ಕಬಳ್ಳಾಪುರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಿದರು. ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಧ್ವಜಾರೋಹಣ ಮಾಡಿದರು. ಸಚಿವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಧ್ವಜರೋಹಣದಲ್ಲಿ ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗಿದೆ. ಅಶ್ವತ್ಥ್ ನಾರಾಯಣ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಬಿಜೆಪಿ ಎಸ್ ಸಿ ಮೋರ್ಛಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಉಲ್ಟ ಹಾರಿದ ಕನ್ನಡದ ಬಾವುಟ!
ಮಂಗಳೂರಿನಲ್ಲಿ ಎಡವಟ್ಟು ಆಗಿದೆ. ನೆಹರು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡದ ಬಾವುಟ ಉಲ್ಟ ಹಾರಿದೆ. ಸಚಿವ ಎಸ್ ಅಂಗಾರ ಧ್ವಜರೋಹಣ ಮಾಡಿದ್ದು, ಸಂಸದ ನಳೀನ್ ಕುಮಾರ್ ಕಟೀಲ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುನೀತ್ ಸ್ಮರಿಸಿದ ಶ್ರೀರಾಮುಲು
ಚಿತ್ರದುರ್ಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಬಿ ಶ್ರೀರಾಮುಲು ನಟ ಪುನೀತ್ನ ಸ್ಮರಿಸಿದರು. ಪ್ರತಿಭಾನ್ವಿತ ನಟ ಪುನೀತ್‌ರನ್ನು ಕಳೆದುಕೊಂಡಿದ್ದೇವೆ. ಪುನೀತ್ ರಾಜ್‍ಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತೇವೆ; ಬಿಸಿ ಪಾಟೀಲ್ ಹೇಳಿಕೆ
ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತೇವೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸುವೆ ಅಂತ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಬಿಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಾಡಿ, ಕುಣಿದು ಕುಪ್ಪಳಿಸಿದ ಮೇಲುಕೋಟೆ ಶಾಸಕ
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೇಲುಕೋಟೆ ಶಾಸಕ ಸಿಎಸ್ ಪುಟ್ಟರಾಜು ಹಾಡಿ, ಕುಣಿದು ಕುಪ್ಪಳಿಸಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಟ್ಟರಾಜು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎನ್ನುವ ಹಾಡನ್ನು ಹಾಡುತ್ತ ಮಕ್ಕಳೊಂದಿಗೆ ಶಾಸಕ ಸ್ಟೇಪ್ ಹಾಕಿದ್ದಾರೆ.
ಪುನೀತ್ ಭಾವಚಿತ್ರ ಹಿಡಿದು ಗಿಡ ನೆಟ್ಟ ಪುಟ್ಟ ಮಕ್ಕಳು: ವಿಡಿಯೋ ವೈರಲ್
ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಗಿಡ ನೆಟ್ಟು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಪುಟ್ಟ ಮಕ್ಕಳು ಶ್ರದ್ಧಾಂಜಲಿ ಅರ್ಪಿಸಿದರು. ಶ್ರದ್ಧಾಂಜಲಿ ಅರ್ಪಿಸಿದ ಮಕ್ಕಳ ವಿಡಿಯೋ ವೈರಲ್ ಆಗಿದೆ.
ಕೋಲಾರದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಸಂಭ್ರಮ
ಕೋಲಾರದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಗಾಂಧಿವನದಲ್ಲಿ ನಡೆಯಿತು. ಸಚಿವ ಮುನಿರತ್ನ ಧ್ವಜಾರೋಹಣ ಮಾಡಿದರು. ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ ಮುನಿರತ್ನಗೆ, ಸಂಸದ ಮುನಿಸ್ವಾಮಿ, ಶಾಸಕ ಶ್ರೀನಿವಾಸಗೌಡ, ಹಾಗೂ ಅಧಿಕಾರಿಗಳು ಸಾಥ್ ನೀಡಿದರು.
ಪುನೀತ್‌ಗೆ ‘ಕರ್ನಾಟಕ ರತ್ನ’ ನೀಡುವ ವಿಚಾರ; ಸಿಎಂ ಪ್ರತಿಕ್ರಿಯೆ
ನಟ ಪುನೀತ್‌ಗೆ ‘ಕರ್ನಾಟಕ ರತ್ನ’ ನೀಡುವ ವಿಚಾರದ ಬಗ್ಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಮುಖರ ಜೊತೆ ಚರ್ಚೆ ಮಾಡಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
2022ರ ಜನವರಿ 26ರಿಂದ ಮನೆಗೆ ಪಡಿತರ ನೀಡಲಾಗುತ್ತೆ; ಸಿಎಂ ಹೇಳಿಕೆ
2022ರ ಜನವರಿ 26ರಿಂದ ಮನೆಗೆ ಪಡಿತರ ನೀಡಲಾಗುತ್ತದೆ. ವಾಹನಗಳ ಮೂಲಕ ಮನೆ ಮನೆಗೆ ಪಡಿತರ ತಲುಪಿಸುತ್ತಾರೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವ ಸಂಭ್ರಮ
ದಾವಣಗೆರೆಯಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸಚಿವ ಭೈರತಿ ಬಸವರಾಜು ಧ್ವಜಾರೋಹಣ ನೆರವೇರಿಸಿದರು.
ಪೊಲೀಸ್ ಕವಯತ್ ಇನ್ನು ಮುಂದೆ ಕನ್ನಡದಲ್ಲಿ
ಪೊಲೀಸ್ ಕವಯತ್ ಇನ್ನು ಮುಂದೆ ಕನ್ನಡದಲ್ಲಿ ನಡೆಯುತ್ತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ರವಿಕಾಂತೇಗೌಡರು ಬೆಳಗಾವಿಯಲ್ಲಿ ತರಬೇತಿ ನೀಡಿದ್ದಾರೆ. ಗೃಹ ಸಚಿವರು ಈ ಬಗ್ಗೆ ಆದೇಶ ಕೊಡುತ್ತಾರೆ ಅಂತ ತಿಳಿಸಿದರು.
ಅಪ್ಪು ಭಾವಚಿತ್ರ ಹಿಡಿದು ಅಭಿಮಾನಿಗಳ ಮೆರವಣಿಗೆ
ಕನ್ನಡ ರಾಜ್ಯೋತ್ಸವ ದಿನವಾಗಿರುವ ಇಂದು ಅಪ್ಪು ಅಭಿಮಾನಿಗಳು ಭಾವಚಿತ್ರವನ್ನು ಹಿಡಿದು ಮೆರವಣಿಗೆ ಮಾಡುತ್ತಿದ್ದಾರೆ. ಕಂಠೀರವ ಸ್ಟುಡಿಯೊ ಮುಂಭಾಗ ಪುನೀತ್ ಭಾವಚಿತ್ರ ಹಿಡಿದು ಜೈಕಾರ ಹಾಕುತ್ತಿದ್ದಾರೆ. ಕನ್ನಡ ಬಾವುಟದ ಜೊತೆಗೆ ಅಪ್ಪು ಬ್ಯಾನರ್ ಹಿಡಿದು ಯುವಕರ ಗುಂಪು ಆಗಮಿಸುತ್ತಿದೆ. ಆದರೆ ಪೊಲೀಸರು ವಾಪಾಸ್ಸು ಕಳುಹಿಸುತ್ತಿದ್ದಾರೆ.
ನಟ ಪುನೀತ್ ಆಗಲಿಕೆಗೆ ಎರಡು ನಿಮಿಷ ಮೌನಾಚರಣೆ
ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಈ ವೇಳೆ ಸ್ಯಾಂಡಲ್ವುಡ್ ನಟ ಪುನೀತ್ ರಾಜ್‍ಕುಮಾರ್ ಆಗಲಿಕೆಗೆ ಎರಡು ನಿಮಿಷ ಮೌನಾಚರಣೆ ಮಾಡಿದರು.
Published On - Nov 01,2021 10:45 AM