ವಿದ್ಯುತ್ ಆಯ್ತು, ಇನ್ನು ದುಬಾರಿಯಾಗಲಿದೆ ಅಕ್ಕಿ; ಬೆಲೆ ಹೆಚ್ಚಳಕ್ಕೆ ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಷನ್ ಚಿಂತನೆ

|

Updated on: Jun 21, 2023 | 7:11 PM

ಪ್ರಸ್ತುತ ಒಂದು ಕೆಜಿ ಅಕ್ಕಿಗೆ‌ 45 ರೂ. ಇದೆ. ತೆರಿಗೆ, ಲೇಬರ್ ಖರ್ಚು, ವಿದ್ಯುತ್ ಬಿಲ್ ಏರಿಕೆ ಸಾಕಷ್ಡು ಹೊರೆಯಾಗುತ್ತಿದೆ. ಇದನ್ನ ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ರೈಸ್ ಮಿಲ್ಲರ್ಸ್ ಫೆಡರೇಷನ್ ಹೇಳಿದೆ.

ವಿದ್ಯುತ್ ಆಯ್ತು, ಇನ್ನು ದುಬಾರಿಯಾಗಲಿದೆ ಅಕ್ಕಿ; ಬೆಲೆ ಹೆಚ್ಚಳಕ್ಕೆ ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಷನ್ ಚಿಂತನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ವಿದ್ಯುತ್ ದರ ಹೆಚ್ಚಳದ ಕಾರಣ ಅಕ್ಕಿ ಬೆಲೆ (Rice Price) ಹೆಚ್ಚಿಸಲು ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಷನ್ (Karnataka Rice Millers Federation) ಚಿಂತನೆ ನಡೆಸಿದೆ. ಅಕ್ಕಿ ಬೆಲೆ ಕೆಜಿಗೆ 5 ರೂ.ನಿಂದ 10 ರೂ.ವರೆಗೆ ಏರಿಕೆ ಮಾಡಲು ಚಿಂತನೆ ನಡೆಸಲಾಗಿದೆ. ವಿದ್ಯುತ್ ಬಿಲ್ ಹೆಚ್ಚಳದಿಂದಾಗಿ ಮಿಲ್​​​ಗಳಿಗೆ ಭಾರಿ ಹೊಡೆತ ಬೀಳುತ್ತಿದೆ. ಎಪಿಎಂಸಿ ಟ್ಯಾಕ್ಸ್ ಕೂಡ ಹೊರೆಯಾಗುತ್ತಿದೆ. ಮಳೆ ಇಲ್ಲದೇ ಇರುವ ಕಾರಣ ಭತ್ತ ಸಿಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆ ಮಾಡಲು ಚಿಂತನೆ ಮಾಡಲಾಗುತ್ತಿದೆ ಎಂದು ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ತಿಳಿಸಿದೆ.

ಪ್ರಸ್ತುತ ಒಂದು ಕೆಜಿ ಅಕ್ಕಿಗೆ‌ 45 ರೂ. ಇದೆ. ತೆರಿಗೆ, ಲೇಬರ್ ಖರ್ಚು, ವಿದ್ಯುತ್ ಬಿಲ್ ಏರಿಕೆ ಸಾಕಷ್ಡು ಹೊರೆಯಾಗುತ್ತಿದೆ. ಇದನ್ನ ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ರೈಸ್ ಮಿಲ್ಲರ್ಸ್ ಫೆಡರೇಷನ್ ಹೇಳಿದೆ. ಇದರೊಂದಿಗೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಈಗಾಗಲೇ ವಿದ್ಯುತ್ ಬಿಲ್ ಹೆಚ್ಚಳದಿಂದ ಕಂಗೆಟ್ಟಿರುವ ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಮಧ್ಯೆ, ನಂದಿನ ಹಾಲಿನ ದರ ಹೆಚ್ಚಳದ ಬಗ್ಗೆಯೂ ಕೆಎಂಎಫ್ ಅಧ್ಯಕ್ಷರು ಸುಳಿವು ನೀಡಿದ್ದಾರೆ. ಒಂದು ವೇಳೆ ಅಕ್ಕಿ ದರವೂ ಹೆಚ್ಚಾದರೆ ಮಧ್ಯಮ ವರ್ಗದವರಿಗೆ ತೀವ್ರ ಹೊಡೆತ ಬೀಳಲಿದೆ. ಕರ್ನಾಟಕ ಕಾಂಗ್ರೆಸ್​ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್​​​ದಾರ ಕುಟುಂಬದವರಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ಸರ್ಕಾರ ನೀಡಬೇಕಿದೆ. ಯೋಜನೆ ಇನ್ನಷ್ಟೇ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಬೇಕಿದೆ. ಯೋಜನೆ ಜಾರಿಗೆ ಅಕ್ಕಿ ಖರೀದಿ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ಅಂತಿಮವಾಗಿ ಈ ಯೋಜನೆ ಜಾರಿಯಾದರೂ ಕೇವಲ ಬಿಪಿಎಲ್​ ಕಾರ್ಡ್​​​ದಾರರಿಗಷ್ಟೇ ಪ್ರಯೋಜನವಾಗುವುದರಿಂದ ಅಕ್ಕಿ ಬೆಲೆ ಹೆಚ್ಚಳವಾದರೆ ಅದರ ಬಿಸಿ ನೇರವಾಗಿ ಮಧ್ಯಮವರ್ಗದ ಜನರಿಗೆ ತಟ್ಟಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ