
ಬೆಂಗಳೂರು: SSLC ಅನ್ನೋದು ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನೇ ನಿರ್ಧರಿಸೋ ಘಟ್ಟ. ಆದ್ರೆ, ಕೊರೊನಾದಿಂದ ಪರೀಕ್ಷೆ ನಡೆಯದೆ ರಾಜ್ಯದ SSLC ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿತ್ತು. ಜೂನ್ 25 ಪರೀಕ್ಷೆ ನಿಗದಿಯಾಗಿದ್ರೂ, ನಡೆಯುತ್ತೋ ಇಲ್ವೋ ಅನ್ನೋ ಅನುಮಾನ ಜೀವಂತವಾಗಿತ್ತು. ಆದ್ರೆ ಸರ್ಕಾರ ಜೂನ್ 25ರಿಂದ ಪರೀಕ್ಷೆ ನಡೆದೇ ನಡೆಯುತ್ತೆ ಅಂತಾ ಸ್ಪಷ್ಟವಾಗಿ ಹೇಳಿದೆ. ಅಷ್ಟೇ ಅಲ್ಲ, ಟಿವಿ9 ಅಭಿಯಾನದಿಂದ ಅಲರ್ಟ್ ಆಗಿರೋ ಸರ್ಕಾರ, ಪರೀಕ್ಷೆ ವೇಳೆ ಕೈಗೊಳ್ಳಲಿರೋ ಮುಂಜಾಗ್ರತಾ ಕ್ರಮಗಳ ಬಗ್ಗೆ ಪೋಷಕರಿಗೆ ಭರವಸೆ ಕೊಟ್ಟಿದೆ.
SSLC ಪರೀಕ್ಷೆ.. ವಿದ್ಯಾರ್ಥಿಗಳ ಜೀವನದ ದಿಕ್ಸೂಚಿ. ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯ ಬರೆಯೋ ಘಟ್ಟ. SSLC ಪರೀಕ್ಷೆ ಮಿಸ್ ಆದ್ರೆ, SSLC ಪರೀಕ್ಷೆ ಫೇಲ್ ಆದ್ರೆ ಶೈಕ್ಷಣಿಕ ಬದುಕಿನ ಮಹತ್ವದ ಕೊಂಡಿಯೇ ಕಳಚಿದಂತೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಮುಂದೆ ತಾನೇನು ಮಾಡಬೇಕು? ತಾನೇನು ಆಗಬೇಕು? ತಾನೇನನ್ನ ಆಯ್ಕೆ ಮಾಡಬೇಕು ಅನ್ನೋದನ್ನ ನಿರ್ಧರಿಸೋದೆ SSLC ಅನ್ನೋ ಪ್ರಧಾನ ಘಟ್ಟದಲ್ಲಿ. ಹೀಗಾಗಿ ಇದೀಗ ರಾಜ್ಯ ಸರ್ಕಾರ ಕೂಡ SSLC ವಿದ್ಯಾರ್ಥಿಗಳ ಭವಿಷ್ಯ ಕಾಪಾಡೋಕೆ ಬದ್ಧವಾಗಿದೆ.
‘ನಿಗದಿಯಂತೆ SSLC ಪರೀಕ್ಷೆ ನಡೆಯುತ್ತೆ’
ಯೆಸ್.. ಈಗಾಗ್ಲೇ ನಿಗದಿಯಾಗಿರುವಂತೆ ಜೂನ್ 25ರಿಂದಲೇ SSLC ಪರೀಕ್ಷೆ ನಡೆದೇ ನಡೆಯುತ್ತೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತೊಮ್ಮೆ ಸ್ಪಷ್ಟವಾಗಿ ಹೇಳಿದ್ದಾರೆ. ಈ ಹಿಂದೆಯೇ ದಿನಾಂಕ ನಿಗದಿಯಾಗಿದ್ರೂ, ಕೊರೊನಾ ಅಟ್ಟಹಾಸ ಇನ್ನಷ್ಟು ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿ SSLC ಪರೀಕ್ಷೆ ಮೇಲೆ ಮತ್ತೆ ಕಾರ್ಮೋಡ ಆವರಿಸಿತ್ತು. ಆದ್ರಿಂದು ಈ ಕಾರ್ಮೋಡವನ್ನ ರಾಜ್ಯ ಸರ್ಕಾರ ಬದಿಗೆ ಸರಿಸಿದ್ದು, SSLC ಪರೀಕ್ಷೆ ಯಾವುದೇ ಅಡ್ಡಿ ಆತಂಕವಿಲ್ಲದೆ ನಿಗದಿಯಂತೆ ನಡೆಯುತ್ತೆ ಅಂತಾ ಸ್ಪಷ್ಟಪಡಿಸಿದೆ.
‘SSLC ಪರೀಕ್ಷೆಗೆ ಸಕಲ ಮುಂಜಾಗ್ರತಾ ಕ್ರಮ’
ನಿಜ.. ಇಂದು ಟಿವಿ9 SSLC ಪರೀಕ್ಷೆ ಕುರಿತು ಪೋಷಕರು, ಮಕ್ಕಳು, ತಜ್ಞರ ಅಭಿಪ್ರಾಯ ಪಡೆಯೋ ಅಭಿಯಾನವೊಂದನ್ನ ನಡೆಸಿತ್ತು. ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಟಿವಿ9 ಕೂಡ ಸರ್ಕಾರಕ್ಕೆ ಸಲಹೆ ಕೊಟ್ಟಿತ್ತು. ಪರಿಣಾಮ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಈ ಬಾರಿಯ SSLC ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಅಷ್ಟಕ್ಕೂ ಸರ್ಕಾರ ಕೈಗೊಳ್ತಿರೋ ಕ್ರಮಗಳೇನು ಅಂತಾ ನೋಡೋದಾದ್ರೆ.
ರಾಜ್ಯದ್ಯಂತ ಬರೋಬ್ಬರಿ 8.5 ಲಕ್ಷ ವಿದ್ಯಾರ್ಥಿಗಳು ಜೂನ್ 25ರಿಂದ SSLC ಪರೀಕ್ಷೆ ಬರೆಯಲಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ತಲಾ 2 ಮಾಸ್ಕ್ ನೀಡಲಾಗುತ್ತೆ. ಪರೀಕ್ಷಾ ಕೊಠಡಿ ಪ್ರವೇಶಿಸುವ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತೆ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಅಂಥಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯೋ ವ್ಯವಸ್ಥೆ ಮಾಡಲಾಗುತ್ತೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ವಾಹನ ವ್ಯವಸ್ಥೆಯೂ ಇರಲಿದೆ.
ಎಲ್ಲಾ ಪೋಷಕರನ್ನ ಸಂಪರ್ಕಿಸಿ ವಾಹನ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಲಾಗುತ್ತೆ. ಪೋಷಕರೇ ಸ್ವಂತ ವಾಹನದಲ್ಲಿ ತಮ್ಮ ಮಕ್ಕಳನ್ನ ಕರೆದುಕೊಂಡು ಹೋಗಬಹುದು. ಆಯಾ ಶಿಕ್ಷಣ ಸಂಸ್ಥೆಗಳೂ ವಿದ್ಯಾರ್ಥಿಗಳಿಗೆ ವಾಹನ ವ್ಯವಸ್ಥೆ ಮಾಡಬಹುದು. ಇದ್ಯಾವುದೂ ಆಗಲ್ಲ ಅಂದ್ರೆ ಸರ್ಕಾರವೇ ವಾಹನ ವ್ಯವಸ್ಥೆ ಮಾಡಲಿದೆ. ಒಬ್ಬ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತರಾಗದಂತೆ ಸರ್ಕಾರ ಕ್ರಮಕೈಗೊಳ್ಳಲಿದೆ. ಆರೋಗ್ಯ, ಪೊಲೀಸ್ ಇಲಾಖೆ ಸಹಕಾರದೊಂದಿಗೆ ಪರೀಕ್ಷೆ ನಡೆಸಲಾಗುತ್ತೆ.
‘ಪರೀಕ್ಷೆ ನಡೆಯಲಿ, ಮುಂಜಾಗ್ರತಾ ಕ್ರಮ ಕೈಗೊಳ್ಳಲಿ’
ಇನ್ನು ಟಿವಿ9 ಜತೆ ಮಾತನಾಡಿರೋ ಪೋಷಕರ ಪೈಕಿ ಹಲವರು ಪರೀಕ್ಷೆ ನಡೆಯಲಿ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. SSLC ಪರೀಕ್ಷೆ ನಡೆಯದಿದ್ರೆ ಮಕ್ಕಳ ಭವಿಷ್ಯ ಮಾರಕವಾಗಲಿದೆ. ಹೀಗಾಗಿ ಎಲ್ಲಾ ಮುಂಜಾಗೃತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಯಲಿ ಅನ್ನೋದು ಬಹುತೇಕರ ಅಭಿಪ್ರಾಯ.
ಪರೀಕ್ಷೆ ಬರೀತೀವಿ ಅಂತಿದ್ದಾರೆ ಸ್ಟೂಡೆಂಟ್ಸ್!
ಇನ್ನು ಜೂನ್ 25ರಿಂದ ಆರಂಭವಾಗಲಿರೋ ಪರೀಕ್ಷೆ ಬಗ್ಗೆ SSLC ವಿದ್ಯಾರ್ಥಿಗಳನ್ನ ಕೇಳಿದ್ರೆ, ಕೋರೊನಾ ಜಾಸ್ತಿಯಾಗ್ತಿದ್ದು ಪರೀಕ್ಷೆ ಬರೆಯೋಕೆ ಭಯ ಇದೆ. ಆದ್ರೂ ಈ ಪರೀಕ್ಷೆ ಜೀವನದ ಟರ್ನಿಂಗ್ ಪಾಯಿಂಟ್ ಹೀಗಾಗಿ ಬರೀತೀವಿ ಅಂತಿದ್ದಾರೆ.
ಒಟ್ನಲ್ಲಿ, SSLC ಪರೀಕ್ಷೆ ಜೂನ್ 25 ರಿಂದ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಈಗಿಂದೀಗಲೇ ಅಂತಿಮ ಹಂತದ ತಯಾರಿ ನಡೆಸಬೇಕಿದೆ. ಆದ್ರೆ, ಯಾವೊಬ್ಬ ವಿದ್ಯಾರ್ಥಿಗೂ ತೊಂದರೆಯಾಗದಂತೆ ಪರೀಕ್ಷೆ ನಡೆಸಬೇಕಿರೋ ಅಗ್ನಿಪರೀಕ್ಷೆ, ಸವಾಲು ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳ ಮೇಲಿವೆ.
Published On - 6:15 am, Thu, 11 June 20