ಬೆಂಗಳೂರು: ಜೂನ್ 21ರಿಂದ ಪ್ರಾರಂಭವಾಗಬೇಕಿದ್ದ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಮುಂದೂಡಿದ್ದಾಗಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಾಧ್ಯಮ ಪ್ರಕಟಣೆ ತಿಳಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ ಮುಂದೆ ಯಾವಾಗ ನಡೆಯುತ್ತದೆ ಎಂದು ಇನ್ನೂ ದಿನಾಂಕವನ್ನು ಪ್ರಕಟಿಸಿಲ್ಲ. ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದ್ದು, ನಂತರದ ದಿನಗಳಲ್ಲಿ ಹೊಸ ದಿನಾಂಕ ತಿಳಿಸುವುದಾಗಿ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ದಿನೇದಿನೆ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳು, ಶಾಲಾ ಸಂಘಟನೆಗಳು, ಶಿಕ್ಷಕರು, ಪಾಲಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಇನ್ನು ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಬಹುತೇಕ ಎಲ್ಲ ರೀತಿಯ ಆಫ್ಲೈನ್ ಪರೀಕ್ಷೆಗಳನ್ನೂ ಮುಂದೂಡಲಾಗುತ್ತಿದೆ.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಇದೀಗ ಮುಂದೆ ಹೋದ ತಕ್ಷಣ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕೊವಿಡ್ ಎರಡನೇ ಅಲೆಯ ಪ್ರಭಾವ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಹೊಸ ದಿನಾಂಕವನ್ನು ಪ್ರಕಟಿಸುತ್ತೇವೆ. ವಿದ್ಯಾರ್ಥಿಗಳು ವಿಚಲಿತರಾಗದೆ ಅಧ್ಯಯನ ಮುಂದುವರಿಸಬೇಕು ಎಂದೂ ಶಿಕ್ಷಣ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊವಿಡ್ ಸೋಂಕು ಪ್ರಸರಣ ಹೆಚ್ಚಿರುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಆಫ್ಲೈನ್ ಪರೀಕ್ಷೆಗಳನ್ನೂ ಮುಂದೂಡಬೇಕು. ಆನ್ಲೈನ್ ಪರೀಕ್ಷೆಗಳನ್ನು ನಿಗದಿಪಡಿಸಿದ ಸಮಯದಲ್ಲಿ ನಡೆಸಲು ಯಾವುದೇ ಸಮಸ್ಯೆಯಿಲ್ಲ ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವೂ ಹೇಳಿದೆ. ಇನ್ನು ಕರ್ನಾಟಕದಲ್ಲಿ ಮೇ 24ರವರೆಗೂ ಲಾಕ್ಡೌನ್ ಇದ್ದು, ಅದು 24ಕ್ಕೆ ಕೊನೆಯಾಗುವ ಸೂಚನೆಯೂ ಕಾಣುತ್ತಿಲ್ಲ. ಈ ಸಮಯದಲ್ಲಿ ಮಕ್ಕಳನ್ನು ಪರೀಕ್ಷೆ ನೆಪದಲ್ಲಿ ಮತ್ತೆ ಹೊರಗೆ ಕರೆದರೆ ಪಾಲಕರಿಗೂ ಆತಂಕ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರೀಕ್ಷೆಯನ್ನೇ ಮುಂದೂಡುವ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ: ಆರ್ಸಿಬಿ ಆಟಗಾರ ಯಜ್ವೇಂದ್ರ ಚಹಲ್ ತಂದೆ- ತಾಯಿಗೆ ಕೊರೊನಾ ಪಾಸಿಟಿವ್; ಮಾಹಿತಿ ಹಂಚಿಕೊಂಡ ಧನಶ್ರೀ ವರ್ಮಾ
UPSC Prelims Exam 2021 Postponed: ಜೂನ್ 27ರ ಯುಪಿಎಸ್ಸಿ ಪ್ರಿಲಿಮಿನರಿ ಪರೀಕ್ಷೆ ಅಕ್ಟೋಬರ್ 10ಕ್ಕೆ ಮುಂದೂಡಿಕೆ
Published On - 4:50 pm, Thu, 13 May 21