BS Yediyurappa Press Meet LIVE: ರಾಜ್ಯದಲ್ಲಿ ಕೊವಿಡ್ ಮೂರನೇ ಅಲೆ ತಡೆಯಲು ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಟಾಸ್ಕ್​​ಫೋರ್ಸ್ ರಚನೆ

guruganesh bhat
|

Updated on: May 13, 2021 | 6:28 PM

Karnataka CM BS Yediyurappa Live Updates: ನಿನ್ನೆಯಷ್ಟೇ ರಾಜ್ಯ ಸರ್ಕಾರ 18-44 ವರ್ಷದೊಳಗಿನವರಿಗೆ ಲಸಿಕೆ ತಾತ್ಕಾಲಿಕ ಸ್ಥಗಿತ ಆದೇಶ ಪ್ರಕಟಿಸಿತ್ತು. 

BS Yediyurappa Press Meet LIVE: ರಾಜ್ಯದಲ್ಲಿ ಕೊವಿಡ್ ಮೂರನೇ ಅಲೆ ತಡೆಯಲು ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಟಾಸ್ಕ್​​ಫೋರ್ಸ್ ರಚನೆ
ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ

LIVE NEWS & UPDATES

  • 13 May 2021 06:10 PM (IST)

    ಚಾಮರಾಜನಗರ ದುರಂತ; ಕೋರ್ಟ್​ನಲ್ಲಿರುವ ಕಾರಣ ಪ್ರತಿಕ್ರಿಯಿಸಲ್ಲ: ಸಿಎಂ ಯಡಿಯೂರಪ್ಪ

    ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ಕೊರತೆ ದುರಂತದಲ್ಲಿ ಸದ್ಯ ಪ್ರತಿಕ್ರಿಯೆ ನೀಡುವುದಿಲ್ಲ. ಆ ಬಗ್ಗೆ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಕೋರ್ಟ್​ನಲ್ಲಿರುವ ಕಾರಣ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದರು.

  • 13 May 2021 06:07 PM (IST)

    ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ, ಇತರ ಖಾಯಿಲೆ ಇರುವವರೇ ಹೆಚ್ಚು ಸಾವಿಗೀಡಾಗುತ್ತಿದ್ದಾರೆ: ಸರ್ಕಾರ

    ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ, ಇತರ ಖಾಯಿಲೆ ಇರುವವರೇ ಹೆಚ್ಚು ಸಾವಿಗೀಡಾಗುತ್ತಿದ್ದಾರೆ. ಯುವಕರಿಗಿಂತ ಹೆಚ್ಚು ವಯಸ್ಸಾದವರು ಮತ್ತು ಇತರ ಖಾಯಿಲೆಗಳಿಂದ ಬಳಲುತ್ತಿರುವವರೇ ಕೊವಿಡ್​ನಿಂದ ಹೆಚ್ಚು ನಿಧನರಾಗುತ್ತಿದ್ದಾರೆ ಎಂದು ಸಚಿವರು ಮತ್ತು ಸಿಎಂ ಯಡಿಯೂರಪ್ಪ ನೇತೃತ್ವದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಲಾಯಿತು.

  • 13 May 2021 06:04 PM (IST)

    ಯಾವ ರಾಜ್ಯದಲ್ಲೂ ಇಷ್ಟೊಂದು ಆಕ್ಸಿಜನ್ ಬೆಡ್ ಇಲ್ಲ; ಸಚಿವ ಡಾ.ಸುಧಾಕರ್

    ಈ ಮುನ್ನ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ಇರಲಿಲ್ಲ. ಪ್ರಸ್ತುತ ಶೇ ೫೦ ರಷ್ಟು ಆಕ್ಸಿಜನ್ ಬೆಡ್ ಇವೆ. 38,600 ಆಕ್ಸಿಜನ್ ಬೆಡ್ ಖಾಸಗಿ ಆಸ್ಪತ್ರೆಗಳಲ್ಲಿ ಇವೆ. ಆರೋಗ್ಯ ಆಸ್ಪತ್ರೆಗಳಲ್ಲಿ 31,444 ಬೆಡ್ ಇವೆ 1 ಲಕ್ಷದ 20 ಸಾವಿರ ಆಕ್ಸಿಜನ್ ಬೆಡ್ ರಾಜ್ಯದಲ್ಲಿವೆ. ಯಾವ ರಾಜ್ಯದಲ್ಲೂ ಇಷ್ಟೊಂದು ಆಕ್ಸಿಬೆಡ್ ಇಲ್ಲ. ಖಾಸಗಿಯವರು ಶೇ 50ರಷ್ಟು ಬೆಡ್ ಕೊಟ್ಟಿದ್ದಾರೆ ಎಂದು ಸಚಿವ.ಡಾ.ಸುಧಾಕರ್ ತಿಳಿಸಿದರು.

  • 13 May 2021 06:01 PM (IST)

    2 ಕೋಟಿ ಡೋಸ್ ಇಂಜೆಕ್ಷನ್ ಸರಬರಾಜು ಮಾಡಲು ಜಾಗತಿಕ ಟೆಂಡರ್

    ಭಾರತ ಸರ್ಕಾರವು 45 ವರ್ಷ ಮೇಲ್ಪಟ್ಟ ನಾಗರಿಕರಿಗೆ, ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಮುಂಚೂಣಿಯ ಕಾರ್ಯಕರ್ತರಿಗೆ ಲಸಿಕೆ ಪೂರೈಕೆ ಮಾಡುತ್ತಿದೆ. ಈ ವರೆಗೆ 1.10 ಕೋಟಿ ಡೋಸ್‍ಗಳನ್ನು ಭಾರತ ಸರ್ಕಾರ ಒದಗಿಸಿದ್ದು, ಅದರಲ್ಲಿ 99.5 ಲಕ್ಷ ಕೋವಿಶೀಲ್ಡ್ ಹಾಗೂ 10.9 ಲಕ್ಷ ಕೋವ್ಯಾಕ್ಸಿನ್ ಲಸಿಕೆಗಳಿವೆ. ರಾಜ್ಯ ಸರ್ಕಾರವು 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡಲು 3 ಕೋಟಿ ಡೋಸ್ ಲಸಿಕೆಗಳ ಖರೀದಿಗೆ ಆದೇಶ ನೀಡಿದೆ. ಅದರಲ್ಲಿ 2 ಕೋಟಿ ಡೋಸ್ ಕೋವಿಶೀಲ್ಡ್ ಹಾಗೂ 1 ಕೋಟಿ ಡೋಸ್ ಕೊವ್ಯಾಕ್ಸಿನ್ ಸೇರಿದೆ. ಅಲ್ಲದೆ ಹೆಚ್ಚುವರಿಯಾಗಿ 2 ಕೋಟಿ ಡೋಸ್ ಇಂಜೆಕ್ಷನ್ ಸರಬರಾಜು ಮಾಡಲು ಜಾಗತಿಕ ಟೆಂಡರ್ ಕರೆಯಲಾಗಿದೆ ಎಂದು ಸರ್ಕಾರ ತಿಳಿಸಿದೆ.

  • 13 May 2021 05:59 PM (IST)

    ಲಾಕ್​ಡೌನ್ ಪ್ಯಾಕೇಜ್ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ

    ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಯಡಿಯೂರಪ್ಪ, ಮುಂದಿನ ದಿನಗಳಲ್ಲಿ ಲಾಕ್​ಡೌನ್​ನಿಂದ ತೊಂದರೆಗೆ ಒಳಗಾದವರಿಗೆ ಸಹಾಯ ಮಾಡಲು ವಿಶೇಷ ಯೋಜನೆಗಳ ಬಗ್ಗೆ ಚಿಂತಿಸಲಾಗುವುದು. ಸದ್ಯ ಜನರ ಜೀವ ಉಳಿಸುವುದು ನಮ್ಮ ಆದ್ಯತೆ. ಈಗಾಗಲೇ ಉಚಿತ ಊಟ ಸೇರಿದಂತೆ ಹಲವು ಯೋಜನೆ ಆರಂಭಿಸಲಾಗಿದೆ ಎಂದು ತಿಳಿಸಿದರು.

  • 13 May 2021 05:57 PM (IST)

    ಮುಂದಿನ 2-3 ವಾರಗಳಲ್ಲಿ ಬೆಂಗಳೂರಲ್ಲಿ ಕೊವಿಡ್ ಸೋಂಕು ಕಡಿಮೆಯಾಗುವ ಸಂಭವ: ಡಾ.ಸುಧಾಕರ್

    ಎರಡು ಮೂರು ವಾರಗಳಲ್ಲಿ ಬೆಂಗಳೂರಲ್ಲಿ ಕೊವಿಡ್ ಸೋಂಕು ಕಡಿಮೆಯಾಗುವ ಸಂಭವವಿದೆ. ಇತರ ಜಿಲ್ಲೆಗಳಲ್ಲಿ ಅದಕ್ಕಿಂತ ಮುಂದಿನ ಎರಡು ಮೂರು ತಿಂಗಳಲ್ಲಿ ಕಡಿಮೆಯಾಗುವ ಸಂಭವವಿದೆ. ರಾಜ್ಯದಲ್ಲಿ ಲಸಿಕೆ ನೀಡಲು ನೀತಿ ರೂಪಿಸಲು ಪ್ರೊ.ಗಗನ್​ದೀಪ್ ಕಾಂಗ್ ಅವರನ್ನು ಕರ್ನಾಟಕ್ಕೆ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಡಾ.ಸುಧಾಕರ್ ತಿಳಿಸಿದರು.

  • 13 May 2021 05:54 PM (IST)

    ಕೊವಿಡ್ ನಂತರದ ಬ್ಲ್ಯಾಕ್ ಫಂಗಸ್ ತಡೆಯಲು ತಕ್ಷಣವೇ ಕ್ರಮ

    ಕೊವಿಡ್ ನಂತರ ಬ್ಲ್ಯಾಕ್ ಫಂಗಸ್ ಎಂಬ ಅಪಾಯಕಾರಿ ಸೋಂಕು​ ಹರಡುತ್ತಿದೆ. ಇದರಿಂದ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅಪಾಯವಿದೆ. ಮಹಾರಾಷ್ಟ್ರದಲ್ಲಿ ಇಂತಹ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿಯೂ ಕೆಲವು ಪ್ರಕರಣಗಳು ದಾಖಲಾಗಿವೆ. ಈ ಸಮಸ್ಯೆಗೆ ತಕ್ಷಣವೇ ಔಷಧ ನೀಡಲು ಪೂರೈಕೆಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಡಾ.ಸುಧಾಕರ್ ತಿಳಿಸಿದರು.

  • 13 May 2021 05:51 PM (IST)

    ರಾಜ್ಯದ 19 ಲಕ್ಷ ಜನರಿಗೆ 2ನೇ ಡೋಸ್ ಲಸಿಕೆ ನೀಡಬೇಕಿದೆ: ಸಚಿವ ಡಾ.ಸುಧಾಕರ್

    ಕೊರೊನಾ ತಡೆಯಲು ಸರ್ಕಾರದಿಂದ ವ್ಯವಸ್ಥಿತ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ 19 ಲಕ್ಷ ಜನರಿಗೆ 2ನೇ ಡೋಸ್ ಕೊಡಬೇಕಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರದಿಂದಲೇ ಉಚಿತ ಲಸಿಕೆ ನೀಡಲಾಗುತ್ತಿದೆ. 18-44 ವರ್ಷದವರಿಗೆ ಲಸಿಕೆ ಕೊಟ್ಟೇ ಕೊಡುತ್ತೇವೆ. ಅಕ್ಟೋಬರ್, ನವೆಂಬರ್​ಗೆ 3ನೇ ಅಲೆ ಸಾಧ್ಯತೆಯಿರುವ ಕಾರಣ ಡಾ.ದೇವಿಶೆಟ್ಟಿ ಅಧ್ಯಕ್ಷತೆಯಲ್ಲಿ ಟಾಸ್ಕ್​ಫೋರ್ಸ್ ರಚನೆ ಮಾಡಲಾಗಿದೆ. ಇಂದು ಅಥವಾ ನಾಳೆಯಲ್ಲಿ ಟಾಸ್ರ್ಕಫೋರ್ಸ್​ನ ಸದಸ್ಯರನ್ನು ಅಂತಿಮಗೊಳಿಸುತ್ತೇವೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.

  • 13 May 2021 05:46 PM (IST)

    15 ತಿಂಗಳಿಂದ ದುಡಿದ ಆರೋಗ್ಯ ಸಿಬ್ಬಂದಿಗೆ ಧನ್ಯವಾದ: ಸಚಿವ ಡಾ.ಸುಧಾಕರ್

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​​, ಕೊರೊನಾ ವಿರುದ್ಧ 15 ತಿಂಗಳಿಂದ ದುಡಿಯುತ್ತಿರುವ ಆರೋಗ್ಯ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು. ಕೊವಿಡ್ 1ನೇ ಅಲೆ ಮತ್ತು 2ನೇ ಅಲೆ ನಡುವೆ ತಯಾರಿಗೆ 5ರಿಂದ6 ತಿಂಗಳು ಸಮಯವಿತ್ತು. ಆಗ ಸರಿಯಾದ ಸಿದ್ಧತೆ ಆಗಿರಲಿಲ್ಲ. ಆದರೆ ಈಗ ಕರ್ನಾಟಕ ದೇಶದಲ್ಲೇ ಕೊವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಶೇ.50ರಷ್ಟು ಐಸಿಯು ಬೆಡ್​ಗಳಿವೆ ಇವೆ ಎಂದು ಅವರು ವಿವರಿಸಿದರು.

  • 13 May 2021 05:39 PM (IST)

    ಆಸ್ಪತ್ರೆಗೆ ದಾಖಲಾಗಲು 2 ಗಂಟೆಗಳ ಅವಕಾಶ: ಸಚಿವ ಅರವಿಂದ ಲಿಂಬಾವಳಿ

    ಸೋಂಕಿತರಿಗೆ ಕನ್ನಡ, ಇಂಗ್ಲಿಷ್​ನಲ್ಲಿ ಮೆಸೇಜ್ ಹೋಗುವಂತಹ ವ್ಯವಸ್ಥೆ ಮಾಡಿದ್ದೇವೆ. ಮೊದಲು ಆಸ್ಪತ್ರೆಗೆ ದಾಖಲಿಗೆ 10 ಗಂಟೆ ಸಮಯವಿರುತ್ತಿತ್ತು. ಇದು ದುರ್ಬಳಕೆಯಾಗುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗಲು 2 ಗಂಟೆಗೆ ಇಳಿಕೆ ಮಾಡಿದ್ದೇವೆ. ಸೋಂಕಿತರಿಗೆ ಸಂದೇಶ ಬಂದ 2 ಗಂಟೆಯೊಳಗೆ ದಾಖಲಾಗಬೇಕು. ಕೊರೊನಾ ಸೋಂಕಿತರಿಗೆ ತಕ್ಷಣ ಬೆಡ್​ ವ್ಯವಸ್ಥೆ ಮಾಡಿದ್ದೇವೆ ಎಂದು ವಿಧಾನಸೌಧದಲ್ಲಿ ಸಚಿವ ಅರವಿಂದ ಅರವಿಂದ ಲಿಂಬಾವಳಿ​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  • 13 May 2021 05:37 PM (IST)

    ರಾಜ್ಯದಲ್ಲಿ 1,635 ಕೊವಿಡ್ ಕೇರ್ ಸೆಂಟರ್ ಆರಂಭ

    ಪಿಪಿಇ ಕಿಟ್ ಧರಿಸಿ ಅಧಿಕಾರಿಗಳಿಂದ ರಿಯಾಲಿಟಿ ಚೆಕ್​ ನಡೆಸಿ 2,216 ಬೆಡ್​ಗಳನ್ನು ಹೆಚ್ಚುವರಿಯಾಗಿ ಪಡೆಯಲಾಗಿದೆ. 1 ವಾರದಲ್ಲಿ ಖಾಸಗಿಯವರಿಂದ 2,216 ಬೆಡ್ ಪಡೆದಿದ್ದೇವೆ. ರಾಜ್ಯದಲ್ಲಿ 1,635 ಕೊವಿಡ್ ಕೇರ್ ಸೆಂಟರ್ ಆರಂಭವಾಗಿವೆ. ಕೊವಿಡ್ ಬಾಡಿಗಳ ಗೌರವಯುತ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ 18 ಕಡೆ ಹೊಸದಾಗಿ ಕೊವಿಡ್​ನಿಂದ ಮೃತಪಟ್ಟ ಸೋಂಕಿತರ ದಹನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

  • 13 May 2021 05:35 PM (IST)

    ಗೌರವಯುತವಾಗಿ ಉಚಿತ ಶವಸಂಸ್ಕಾರಕ್ಕೆ ಅವಕಾಶ

    ಉತ್ತರ ಭಾರತದ ಕೆಲವ ರಾಜ್ಯಗಳಲ್ಲಿ ಕೊವಿಡ್​ನಿಂದ ಮೃತಪಟ್ಟವರ ಶವ ಸಂಸ್ಕಾರ ನಡೆಸಲು ಕಷ್ವಾಗುತ್ತಿರುವುದನ್ನು ನೋಡಿದ್ದೇವೆ. ನಮ್ಮ ರಾಜ್ಯದಲ್ಲಿ ಈ ರೀತಿ ಆಗದಂತೆ ಕೊವಿಡ್​ನಿಂದ ಮೃತಪಟ್ಟವರಿಗೆ ಗೌರವಯುತವಾಗಿ ಉಚಿತ ಶವಸಂಸ್ಕಾರಕ್ಕೆ ಅವಕಾಶ ನೀಡಲು ಸೌಲಭ್ಯ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

  • 13 May 2021 05:32 PM (IST)

    ಪಿಪಿಇ ಕಿಟ್ ಧರಿಸಿ ಅಧಿಕಾರಿಗಳಿಂದ ರಿಯಾಲಿಟಿ ಚೆಕ್

    ಸಿಎಂ ಯಡಿಯೂರಪ್ಪ ಮತ್ತು ಡಿಸಿಎಂ ಡಾ.ಅಶ್ವತ್ಥ ನಾರಾಯಣ ಅವರ ನಂತರ ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿದರು. ‘ತಪ್ಪು ಲೆಕ್ಕ ಕೊಟ್ಟಿದ್ದ ಖಾಸಗಿ ಆಸ್ಪತ್ರೆಗಳಿಂದ ಬೆಡ್​ ಪಡೆದಿದ್ದೇವೆ. ಅಧಿಕಾರಿಗಳ ಪರಿಶೀಲನೆ ವೇಳೆ ಆಸ್ಪತ್ರೆಗಳ ಕಳ್ಳಾಟ ಬಯಲು ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಿಂದ ಹೆಚ್ಚುವರಿಯಾಗಿ 2,216 ಬೆಡ್​ಗಳನ್ನು ಪಡೆಯಲಾಗಿದೆ. ಪಿಪಿಇ ಕಿಟ್ ಧರಿಸಿ ಅಧಿಕಾರಿಗಳಿಂದ ರಿಯಾಲಿಟಿ ಚೆಕ್​ನಿಂದ ಈ ಕಳ್ಳಾಟ ಬಯಲಾಗಿದೆ ಎಂದು ತಿಳಿಸಿದರು.

  • 13 May 2021 05:27 PM (IST)

    ಕರ್ನಾಟಕದಲ್ಲಿ ಕೊವಿಡ್ ಸೋಂಕಿತರಿಗಾಗಿ 60 ಸಾವಿರ ಆಕ್ಸಿಜನ್​ ಬೆಡ್​

    ರಾಜ್ಯದಲ್ಲಿ ರೆಮ್​ಡಿಸಿವಿರ್ ಇಂಜೆಕ್ಷನ್, ಟೆಸ್ಟಿಂಗ್ ಕಿಟ್​ಗಳ ಕೊರತೆ ಇಲ್ಲ.ಯಾವ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಕೊರತೆಯಾಗದಂತೆ ನಿಭಾಯಿಸಿದ್ದೇವೆ. ವಿದೇಶ, ಬೇರೆ ರಾಜ್ಯಗಳಿಂದಲೂ ಆಕ್ಸಿಜನ್ ತರಿಸುತ್ತಿದ್ದೇವೆ.ನಮ್ಮ ರಾಜ್ಯದಲ್ಲಿ 60 ಸಾವಿರ ಆಕ್ಸಿಜನ್​ ಬೆಡ್​ಗಳು ಇವೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

  • 13 May 2021 05:25 PM (IST)

    ಕೊವಿಡ್ ತಡೆ ಅಭಿಯಾನದಲ್ಲಿ ಕರ್ನಾಟಕ ಇತರ ರಾಜ್ಯಗಳಿಗಿಂತ ಮುಂದಿದೆ: ಡಿಸಿಎಂ ಡಾ. ಅಶ್ವತ್ಥ ನಾರಾಯಣ

    ಸಿಎಂ ಯಡಿಯೂರಪ್ಪ ಅವರ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ‘ಸೋಂಕಿತರಿಗೆ ರಾಜ್ಯ ಸರ್ಕಾರದ ವತಿಯಿಂದ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ರೆಮ್​ಡಿಸಿವಿರ್ ಇಂಜೆಕ್ಷನ್, ಟೆಸ್ಟಿಂಗ್ ಕಿಟ್ ಕೊರತೆ ಇಲ್ಲ. ಆಸ್ಪತ್ರೆಗಳು ಬೇಡಿಕೆ ಇಟ್ಟಂತೆ ಆಕ್ಸಿಜನ್, ರೆಮ್​ಡೆಸಿವಿರ್ ಮುಂತಾದ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ. ಇತರ ಎಲ್ಲ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕೊವಿಡ್ ತಡೆ ಅಭಿಯಾನ ಸಮರ್ಥವಾಗಿ ಮುನ್ನಡೆಯುತ್ತಿದೆ ಎಂದು ವಿವರಿಸಿದರು.

  • 13 May 2021 05:21 PM (IST)

    ರಾಜ್ಯದಲ್ಲಿ ಕೊವಿಡ್ ಮೂರನೇ ಅಲೆ ತಡೆಯಲು ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಟಾಸ್ಕ್​​ಫೋರ್ಸ್ ರಚನೆ

    ರೆಮಿಡಿಸಿವಿರ್ ಇತರ ರಾಜ್ಯಗಳ ಕೋಟಾದಡಿ ಬಳಕೆಯಾಗದ ರೆಮಿಡಿಸಿವಿರ್ ರಾಜ್ಯಕ್ಕೆ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮೂರನೇ ಅಲೆ ತಡೆಯಲು ಡಾ.ದೇವಿಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

  • 13 May 2021 05:19 PM (IST)

    ರಾಜ್ಯದಲ್ಲಿ 18-44 ವರ್ಷದೊಳಗಿನವರಿಗೆ ಲಸಿಕೆ ವಿತರಣೆ ತಾತ್ಕಾಲಿಕವಾಗಿ ಮುಂದೂಡಿಕೆ

    ರಾಜ್ಯದಲ್ಲಿ 18-44 ವರ್ಷದೊಳಗಿನವರಿಗೆ ಲಸಿಕೆ ವಿತರಣೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. 1.10 ಕೋಟಿ ಡೋಸ್​ ಲಸಿಕೆ ಕೇಂದ್ರ ಸರ್ಕಾರ ನೀಡಲಾಗಿದೆ. 3 ಕೋಟಿ ಡೋಸ್ ಲಸಿಕೆ ಖರೀದಿಸಲು ಹಣ ನೀಡಲಾಗಿದೆ. ಇನ್ನೂ 2 ಕೋಟಿ ಕೊವಿಶೀಲ್ಡ್, ಕೊವ್ಯಾಕ್ಸಿನ್ 1 ಕೋಟಿ ಖರೀದಿ ಮಾಡಲಾಗುವುದು ಎ.ಂದು ಅವರು ಹೇಳಿದರು.

  • 13 May 2021 05:15 PM (IST)

    ಲಭ್ಯವಿರುವ ಆಕ್ಸಿಜನ್ ಸಂಪೂರ್ಣವಾಗಿ ಬಳಕೆ : ಸಿಎಂ

    ಕೇಂದ್ರ ಸರ್ಕಾರ ಆಕ್ಸಿಜನ್ 965ರಿಂದ 1018 ಟನ್​ಗೆ ಹೆಚ್ಚಿಸಿದೆ. ಲಭ್ಯವಿರುವ ಆಕ್ಸಿಜನ್ ಸಂಪೂರ್ಣವಾಗಿ ಬಳಕೆ ಮಾಡಲಾಗುತ್ತಿದೆ. ಜನತೆಯ ಸಲುವಾಗಿ ವಿವಿಧ ರಾಜ್ಯಗಳಿಂದಲೂ ಆಕ್ಸಿಜನ್ ಪಡೆಯುತ್ತಿದ್ದೇವೆ. ರಾಜ್ಯದಲ್ಲಿ 124 ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಚಿವರಾದ ಅಶ್ವತ್ಥ್ ನಾರಾಯಣ, ಡಾ.ಕೆ.ಸುಧಾಕರ್ ಆರ್​.ಅಶೋಕ್, ಅರವಿಂದ ಲಿಂಬಾವಳಿ ಸಹ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದಾರೆ.

  • 13 May 2021 05:12 PM (IST)

    ರಾಜ್ಯದಲ್ಲಿ ಬೆಡ್ ಮತ್ತು ಆಕ್ಸಿಜನ್ ಬೆಡ್​ಗಳ ಸಂಖ್ಯೆ ಹೆಚ್ಚಳ

    ರಾಜ್ಯದಲ್ಲಿ ಬೆಡ್ ಮತ್ತು ಆಕ್ಸಿಜನ್ ಬೆಡ್​ಗಳ ಸಂಖ್ಯೆ ಹೆಚ್ಚಿಸಲಾಗಿದೆ. ವೆಂಟಿಲೇಟರ್​ ಬೆಡ್​ಗಳ ಸಂಖ್ಯೆಯನ್ನೂ ಸಹ ಹೆಚ್ಚಿಸಲಾಗಿದೆ. ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸಲಾಗುತ್ತಿದೆ. ಜತೆಗೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪನೆಗೆ ಸಹಾಯಧನ ಒದಗಿಸಲಾಗುತ್ತಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

  • 13 May 2021 05:09 PM (IST)

    ರಾಜ್ಯದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ; ಸಿಎಂ ಯಡಿಯೂರಪ್ಪ

    ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಏ.24ರಿಂದ ನಿರ್ಬಂಧ ವಿಧಿಸಲಾಗಿದೆ. ಮೇ 10ರಿಂದ ಇನ್ನಷ್ಟು ಕಠಿಣ ಕ್ರಮ ಜಾರಿ ಮಾಡಿದ್ದೆವು. ಮೇ 5ರಂದು 50,112 ಕೊರೊನಾ ಕೇಸ್ ದಾಖಲಾಗಿತ್ತು. ಕಠಿಣ ಕ್ರಮಗಳ ಫಲವಾಗಿ ಕೊವಿಡ್ ಸಂಖ್ಯೆ 39 ಸಾವಿರಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ ಮೇ 5ರಂದು 23 ಸಾವಿರ ಕೇಸ್ ಇತ್ತು. ನಿನ್ನೆ ಬೆಂಗಳೂರಿನಲ್ಲಿ ಕೊರೊನಾ ಕೇಸ್ 16 ಸಾವಿರಕ್ಕಿಳಿದಿದೆ. ಬೆಂಗಳೂರು, ಕಲಬುರಗಿಯಲ್ಲಿ ಪ್ರಕರಣ ಇಳಿಕೆಯಾಗಿವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ಸಚಿವರಾದ ಅಶ್ವತ್ಥ್ ನಾರಾಯಣ, ಡಾ.ಕೆ.ಸುಧಾಕರ್, ಆರ್​.ಅಶೋಕ್, ಅರವಿಂದ ಲಿಂಬಾವಳಿ, ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಿದ್ದಾರೆ.

  • ಬೆಂಗಳೂರು: ರೆಮಿಡಿಸಿವಿರ್ ಇತರ ರಾಜ್ಯಗಳ ಕೋಟಾದಡಿ ಬಳಕೆಯಾಗದ ರೆಮಿಡಿಸಿವಿರ್ ರಾಜ್ಯಕ್ಕೆ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮೂರನೇ ಅಲೆ ತಡೆಯಲು ಡಾ.ದೇವಿಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಏ.24ರಿಂದ ನಿರ್ಬಂಧ ವಿಧಿಸಲಾಗಿದೆ. ಮೇ 10ರಿಂದ ಇನ್ನಷ್ಟು ಕಠಿಣ ಕ್ರಮ ಜಾರಿ ಮಾಡಿದ್ದೆವು. ಮೇ 5ರಂದು 50,112 ಕೊರೊನಾ ಕೇಸ್ ದಾಖಲಾಗಿತ್ತು. ಕಠಿಣ ಕ್ರಮಗಳ ಫಲವಾಗಿ ಕೊವಿಡ್ ಸಂಖ್ಯೆ 39 ಸಾವಿರಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ ಮೇ 5ರಂದು 23 ಸಾವಿರ ಕೇಸ್ ಇತ್ತು. ನಿನ್ನೆ ಬೆಂಗಳೂರಿನಲ್ಲಿ ಕೊರೊನಾ ಕೇಸ್ 16 ಸಾವಿರಕ್ಕಿಳಿದಿದೆ. ಬೆಂಗಳೂರು, ಕಲಬುರಗಿಯಲ್ಲಿ ಪ್ರಕರಣ ಇಳಿಕೆಯಾಗಿವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ಸಚಿವರಾದ ಅಶ್ವತ್ಥ್ ನಾರಾಯಣ, ಡಾ.ಕೆ.ಸುಧಾಕರ್, ಆರ್.ಅಶೋಕ್, ಅರವಿಂದ ಲಿಂಬಾವಳಿ, ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    Follow us