ಚನ್ನಪಟ್ಟಣ ಫಲಿತಾಂಶ: ನಿಖಿಲ್ ಸೋಲಿನ ಬೆನ್ನಲ್ಲೇ ಜೆಡಿಎಸ್ಗೆ ಶುರುವಾಯ್ತು ಹೊಸ ಆತಂಕ!
ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಸೋತಿರುವ ಆಘಾತ ಒಂದು ಕಡೆಯಾದರೆ, ಇದೀಗ ಜೆಡಿಎಸ್ಗೆ ಹಾಗೂ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಗೆ ಅದಕ್ಕಿಂತಲೂ ಹೆಚ್ಚಿನ ಆತಂಕ ಶುರುವಾಗಿದೆ. ರಾಮನಗರದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಪ್ರಶ್ನೆ ಅವರಿಗೆ ಎದುರಾಗಿದೆ. ಜೆಡಿಎಸ್ಗೆ ಎದುರಾಗಿರುವ ಹೊಸ ಆತಂಕ, ಸವಾಲುಗಳ ಬಗ್ಗೆ ಇಲ್ಲಿದೆ ವಿವರ.
ಬೆಂಗಳೂರು, ನವೆಂಬರ್ 24: ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವಿನ ನಿರೀಕ್ಷೆಯಲ್ಲಿದ್ದ ಜೆಡಿಎಸ್ಗೆ ದೊಡ್ಡ ಆಘಾತವೇ ಎದುರಾಗಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಲೆಕ್ಕಾಚಾರ ಸಂಪೂರ್ಣ ಉಲ್ಟಾಪಲ್ಟಾ ಆಗಿದೆ. ಇದರಿಂದಾಗಿ ದಳಪತಿಗಳಿಗೆ ಆತಂಕವೂ ಹೆಚ್ಚಾಗಿದೆ. ನಿಖಿಲ್ ಸೋಲಿನಿಂದಾಗಿ ಚನ್ನಪಟ್ಟಣದಲ್ಲಿ ಜೆಡಿಎಸ್ಗೆ ಹೊಸ ಟೆನ್ಷನ್ ಕೂಡ ಆರಂಭವಾಗಿದೆ.
ಸದ್ಯ ಉಪಚುನಾವಣೆ ಗೆಲುವಿನ ಮೂಲಕ ಜೆಡಿಎಸ್ ಭದ್ರಕೋಟೆಯಲ್ಲಿ ಡಿಕೆ ಸಹೋದರರು ಲಗ್ಗೆ ಇಟ್ಟಿದ್ದಾರೆ. ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಸಹೋದರರ ಪ್ರವೇಶದಿಂದಾಗಿ ಒಕ್ಕಲಿಗ ಜೆಡಿಎಸ್ ನಾಯಕರನ್ನು ಕಾಂಗ್ರೆಸ್ಗೆ ಸೆಳೆಯುವ ಆತಂಕ ದಳಪತಿಗಳಿಗೆ ಎದುರಾಗಿದೆ.
ಕುಮಾರಸ್ವಾಮಿಗೆ ನಾಯಕರ ಹಿಡಿದಿಡುವ ಸವಾಲು
ಜೆಡಿಎಸ್ ಹಿರಿಯ ನಾಯಕ, ಶಾಸಕ ಜಿಟಿ ದೇವೇಗೌಡ ಈಗಾಗಲೇ ಪಕ್ಷದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ. ಅವರು ಕಾಂಗ್ರೆಸ್ಗೆ ಸೇರುವ ಸಾಧ್ಯತೆಗಳಿವೆ ಎಂಬ ಊಹಾಪೋಹಗಳೂ ಹರಿದಾಡಲು ಆರಂಭವಾಗಿದೆ. ಇಂಥ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಜೆಡಿಎಸ್ ಮುಖಂಡರನ್ನು ಹಿಡಿದಿಟ್ಟುಕೊಳ್ಳುವ ಸವಾಲು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಮೇಲಿದೆ.
ಗಟ್ಟಿಯಾದ ಯೋಗೇಶ್ವರ್, ಡಿಕೆ ಸಹೋದರರ ಸ್ನೇಹ
ಮತ್ತೊಂದೆಡೆ, ಉಪಚುನಾವಣೆ ಗೆಲುವಿನಿಂದ ಸಿಪಿ ಯೋಗೇಶ್ವರ್ ಹಾಗೂ ಡಿಕೆ ಸಹೋದರರ ನಡುವಣ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ. ಇದರೊಂದಿಗೆ, ಜೆಡಿಎಸ್ ಭದ್ರಕೋಟೆ ಹಳೆ ಮೈಸೂರು ಭಾಗದಲ್ಲಿ ಸಂಪೂರ್ಣ ಹಿಡಿತ ಸಾಧಿಸಲು ಡಿಕೆ ಸಹೋದರರು ಯೋಜನೆ ರೂಪಿಸಿದ್ದಾರೆ. ಹೀಗಾಗಿ ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷಾಂತರ ಮಾಡುವ ಆತಂಕ ಜೆಡಿಎಸ್ಗೆ ಎದುರಾಗಿದೆ.
ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಅಸ್ತಿತ್ವದ ಪ್ರಶ್ನೆ
ನಿಖಿಲ್ ಸೋಲಿನಿಂದ ಕುಮಾರಸ್ವಾಮಿ ರಾಮನಗರ ಜಿಲ್ಲೆಯಲ್ಲಿ ಅಧಿಕಾರದಿಂದ ದೂರ ಉಳಿದಂತಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ, ಸವಾಲು ಕುಮಾರಸ್ವಾಮಿಗೆ ಎದುರಾಗಲಿದೆ.
ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ: ‘ಕೈ’ ಹಿಡಿದ ಸಿದ್ದರಾಮಯ್ಯ ತಂತ್ರಗಳು ಇವುಗಳೇ ನೋಡಿ!
ಫಲಿತಾಂಶದ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು?
ನಿನ್ನೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಬಂದಿದೆ. ಈಗ ಏನು ಚರ್ಚೆ ಮಾಡಿದರೂ ಪ್ರಯೋಜನ ಇಲ್ಲ. ಫಲಿತಾಂಶವನ್ನು ಒಪ್ಪಿಕೊಳ್ಳಲೇಬೇಕು ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಫಲಿತಾಂಶ ಒಪ್ಪಿಕೊಳ್ಳಲೇಬೇಕು. ಏನೇ ಇದ್ದರೂ ಆಮೇಲೆ ಮಾತನಾಡುತ್ತೇನೆ ಎಂದರು.
ಚುನಾವಣೆ ಫಲಿತಾಂಶ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ