ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
Australia vs India, 1st Test: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 37 ರನ್ ಬಾರಿಸಿ ಮಿಂಚಿದ್ದ ರಿಷಭ್ ಪಂತ್ ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 1 ರನ್ಗಳಿಸಿ ಔಟಾಗಿದ್ದಾರೆ.
ಪರ್ತ್ನ ಒಪ್ಟಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಸಾಗುತ್ತಿದೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಭರ್ಜರಿ ಆರಂಭ ಪಡೆದರೂ, ಇದೀಗ ಬ್ಯಾಕ್ ಟು ಬ್ಯಾಕ್ ವಿಕೆಟ್ಗಳನ್ನು ಕಳೆದುಕೊಂಡಿದೆ.
ದ್ವಿತೀಯ ಇನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ ಜೊತೆಗೂಡಿ ಮೊದಲ ವಿಕೆಟ್ಗೆ 201 ರನ್ ಪೇರಿಸಿದ ಬಳಿಕ ಕೆಎಲ್ ರಾಹುಲ್ (77) ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ದೇವದತ್ ಪಡಿಕ್ಕಲ್ (25) ಬೇಗನೆ ಔಟಾದರು. ಇನ್ನು 161 ರನ್ ಸಿಡಿಸಿ ಯಶಸ್ವಿ ಜೈಸ್ವಾಲ್ ಕೂಡ ಒಪ್ಪಿಸಿದರು.
ಈ ವೇಳೆಗೆ ಟೀಮ್ ಇಂಡಿಯಾ ಮೊತ್ತ 300ರ ಗಡಿದಾಟಿತ್ತು. ಆದರೆ ಜೈಸ್ವಾಲ್ ಔಟಾದ ಬೆನ್ನಲ್ಲೇ ಧ್ರುವ್ ಜುರೇಲ್ (1) ಹಾಗೂ ರಿಷಭ್ ಪಂತ್ (1) ಪೆವಿಲಿಯನ್ ಪರೇಡ್ ನಡೆಸಿದರು. ಅದರಲ್ಲೂ ಪಂತ್ ಅವರನ್ನು ನಾಥನ್ ಲಿಯಾನ್ ಒಂದೇ ಎಸೆತದಲ್ಲಿ ಔಟ್ ಮಾಡುವಲ್ಲಿ ಯಶಸ್ವಿಯಾದರು.
ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತು ನೀಡುವ ಪಂತ್ ತಂತ್ರವನ್ನು ನಾಥನ್ ಲಿಯಾನ್ ಎಸೆತವನ್ನು ಮುನ್ನುಗ್ಗಿ ಆಡಲು ಯತ್ನಿಸಿದ್ದರು. ಪಂತ್ ಅವರ ಈ ತಂತ್ರವನ್ನು ಮೊದಲೇ ಮನಗಂಡಿದ್ದ ಲಿಯಾನ್ ವೈಡ್ ಎಸೆದರು. ಅದಾಗಲೇ ಸ್ಟಂಪ್ ಮಾಡಲು ರೆಡಿಯಾಗಿ ನಿಂತಿದ್ದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಚೆಂಡನ್ನು ಹಿಡಿದು ಬೇಲ್ಸ್ ಎಗರಿಸಿದರು. ಇದರೊಂದಿಗೆ ರಿಷಭ್ ಪಂತ್ ಅವರ ಇನಿಂಗ್ಸ್ ಕೂಡ ಕೊನೆಗೊಂಡಿತು.
ಸದ್ಯ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಬ್ಯಾಟಿಂಗ್ ಮುಂದುವರೆಸಿದ್ದು, 107 ಓವರ್ಗಳ ಮುಕ್ತಾಯದ ವೇಳೆಗೆ ಭಾರತ ತಂಡವು 5 ವಿಕೆಟ್ ಕಳೆದುಕೊಂಡು 355 ರನ್ ಕಲೆಹಾಕಿದೆ. ಅಲ್ಲದೆ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಟೀಮ್ ಇಂಡಿಯಾ ಸ್ಕೋರ್ 401 ರನ್ ಆಗಿದೆ.