ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್

ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್

ಝಾಹಿರ್ ಯೂಸುಫ್
|

Updated on:Nov 24, 2024 | 12:05 PM

Australia vs India, 1st Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ಈ ಮೂಲಕ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವು ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಭಾರತ ತಂಡವು 150 ರನ್​ಗೆ ಆಲೌಟ್ ಆದರೆ, ಆಸ್ಟ್ರೇಲಿಯಾ ಕೇವಲ 104 ರನ್​ಗಳಿಸಿ ಸರ್ವಪತನ ಕಂಡಿತು. ಇದಾದ ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು.

ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ 201 ರನ್​ಗಳ ದಾಖಲೆಯ ಜೊತೆಯಾಟದೊಂದಿಗೆ ಟೀಮ್ ಇಂಡಿಯಾಗೆ ಭರ್ಜರಿ ಆರಂಭ ಒದಗಿಸಿದ್ದರು. ಆದರೆ ಇಂತಹದೊಂದು ಅಮೋಘ ಆರಂಭಕ್ಕೆ ಕಾರಣವಾಗಿದ್ದು ಉಸ್ಮಾನ್ ಖ್ವಾಜಾ ಕೈಚೆಲ್ಲಿದ ಕ್ಯಾಚ್ ಎಂಬುದು ವಿಶೇಷ.
ಟೀಮ್ ಇಂಡಿಯಾದ ದ್ವಿತೀಯ ಇನಿಂಗ್ಸ್​ನ 41ನೇ ಓವರ್​ನ 5ನೇ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಸ್ಲಿಪ್​ನಲ್ಲಿ ಕ್ಯಾಚ್ ನೀಡಿದ್ದರು. ಈ ಕ್ಯಾಚ್​ ಹಿಡಿಯುವಲ್ಲಿ ಉಸ್ಮಾನ್ ಖ್ವಾಜಾ ವಿಫಲರಾಗಿದ್ದರು.

ಚೆಂಡು ನೇರವಾಗಿ ಕೈನತ್ತ ಬಂದರೂ, ಅದನ್ನು ಉಸ್ಮಾನ್ ಖ್ವಾಜಾ ಸರಿಯಾಗಿ ಗುರುತಿಸಿರಲಿಲ್ಲ. ಪರಿಣಾಮ ಯಶಸ್ವಿ ಜೈಸ್ವಾಲ್​ಗೆ ಮೊದಲ ಜೀವದಾನ ಲಭಿಸಿತು. ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಯಶಸ್ವಿ ಜೈಸ್ವಾಲ್ ತನ್ನ ಸ್ಕೋರ್​ ಅನ್ನು 161 ಕ್ಕೆ ತಲುಪಿಸಿದರು.

ಈ ಮೂಲಕ ಟೀಮ್ ಇಂಡಿಯಾ ಸ್ಕೋರ್​ ಅನ್ನು 350 ರ ಗಡಿದಾಟಿಸುವಲ್ಲಿ ಯಶಸ್ವಿಯಾದರು. ಈ ಒಂದು ಕ್ಯಾಚ್ ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾಗಿರುವುದು ಸ್ಪಷ್ಟ. ಏಕೆಂದರೆ 51 ರನ್​ಗಳಿಸಿದ್ದ ವೇಳೆ ಸಿಕ್ಕ ಜೀವದಾನದ ಬಳಿಕ ಯಶಸ್ವಿ ಜೈಸ್ವಾಲ್ ಬರೋಬ್ಬರಿ 110 ರನ್ ಕಲೆಹಾಕಿದರು. ಇದೀಗ ಉಸ್ಮಾನ್ ಖ್ವಾಜಾ ಕೈ ಬಿಟ್ಟಿರುವ ಕ್ಯಾಚ್ ಪರ್ತ್ ಟೆಸ್ಟ್ ಪಂದ್ಯದ ಫಲಿತಾಂಶವನ್ನೇ ಬದಲಿಸಿದರೂ ಅಚ್ಚರಿಪಡಬೇಕಿಲ್ಲ.

 

Published on: Nov 24, 2024 12:04 PM