ಬೆಂಗಳೂರು, ಆಗಸ್ಟ್ 17: 2023ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಪಡೆದುಕೊಂಡಿದೆ. ವರ್ಲ್ಡ್ ಸಟ್ಟೈನಬಿಲಿಟಿ ಕಾಂಗ್ರೆಸ್ (World Suatainability Congress) ನೀಡುವ 14ನೇ ಆವೃತ್ತಿಯ 18ನೇ ಪ್ರಶಸ್ತಿಯನ್ನು ಕೆಎಸ್ಆರ್ಟಿಸಿ ಸ್ವೀಕರಿಸಿದೆ. ಮಾನವ ಸಂಪನ್ಮೂಲ ಉಪಕ್ರಮಗಳ ಅನುಷ್ಠಾನ ವರ್ಗದಲ್ಲಿ ಪ್ರಶಸ್ತಿ ಲಭಿಸಿದ್ದು, ವರ್ಲ್ಡ್ ಸಟ್ಟೈನಬಿಲಿಟಿ ಕಾಂಗ್ರೆಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಗುರುವಾರ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ನಿಗಮದ ಪರವಾಗಿ ಮುಖ್ಯ ಲೆಕ್ಕಾಧಿಕಾರಿ ಡಾ. ಲತಾ ಟಿ.ಎಸ್ ಅವರು ಪ್ರಶಸ್ತಿ ಸ್ವೀಕರಿಸಿದರು. ಹಳೆ ಬಸ್ಸುಗಳ ನವೀಕರಣ, ಹೊಸ ಬಸ್ಗಳ ಖರೀದಿ, 13 ಸಾವಿರ ಸಿಬ್ಬಂದಿ ನೇಮಕದಂತಹ ನಿರ್ಧಾರದಿಂದ ಇದು ಸಾಧ್ಯವಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಗುಣಮಟ್ಟದ ಸೇವೆಯನ್ನು ನೀಡಲು ಸಹಕಾರಿಯಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಈ ಮೊದಲು ನಷ್ಟದಲ್ಲಿ ಓಡುತ್ತಿದ್ದ ಕೆಎಸ್ಆರ್ಟಿಸಿ ಬಸ್ಗಳ ಸ್ಥಿತಿ ಈಗೀಗ ಸುಧಾರಿಸಿದ್ದು, ಮಾನವ ಅಭಿವೃದ್ಧಿ ಸಂಬಂಧಿಸಿದ ಹಲವು ಕಾರ್ಯಗಳನ್ನು ನಿಗಮವು ಕೈಗೊಳ್ಳುತ್ತಿವೆ. ಇದರ ಫಲವಾಗಿ 2023 ಫೆಬ್ರವರಿಯಲ್ಲಿ ರಾಷ್ಟ್ರ ಮಟ್ಟದ ಪಿಎಸ್ಯು (PSU) ಪ್ರಶಸ್ತಿ ಸಂಸ್ಥೆಗೆ ದೊರೆತಿತ್ತು.
ಕೋವಿಡ್ ಸಾಂಕ್ರಾಮಿಕದ ನಂತರ ನಷ್ಟದಲ್ಲಿ ಸಾಗುತ್ತಿದ್ದ ಕೆಎಸ್ಆರ್ಟಿಸಿಯು ಹಳೆ ಬಸ್ಗಳನ್ನು ನವೀಕರಿಸಿ ರಸ್ತೆಗಿಳಿಸುವ ಯೋಜನೆಯನ್ನು ಕೈಗೊಂಡಿದೆ. ಹೊಸ ಬಸ್ ಕೊಳ್ಳುವುದರ ಜತೆಗೆ ಬದಲಾಗಿ ಹಳೆ ಬಸ್ಗಳನ್ನೇ ನವೀಕರಿಸಿ ಓಡಿಸುವುದರಿಂದ ಹಣ ಉಳಿತಾಯವಾಗಲಿದೆ ಎಂಬ ಯೋಚನೆಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 10 ಲಕ್ಷ ಕಿಲೋ ಮೀಟರ್ ಸಂಚರಿಸಿದ 8,100 ಬಸ್ಗಳಿದ್ದು, 1000 ಬಸ್ಗಳನ್ನು ನವೀಕರಿಸಲಾಗುತ್ತಿದೆ. ಬಸ್ನಲ್ಲಿ ತುಕ್ಕು ಹಿಡಿದ ಭಾಗಗಳನ್ನು ತೆಗೆದು ಹೊಸ ಭಾಗಗಳನ್ನು ಜೋಡಿಸಿ ಬಸ್ಗೆ ಹೊಸ ಟಚ್ ನೀಡಲಾಗುತ್ತಿದೆ.
ಇದನ್ನೂ ಓದಿ: ದ್ವಿತೀಯ ಪಿಯು 2ನೇ ಪೂರಕ ಪರೀಕ್ಷೆಯಂದು KSRTC ಬಸ್ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಹಿನ್ನಲೆಯಲ್ಲಿ ಸರ್ಕಾರಿ ಬಸ್ಗಳ ಬಳಕೆಯು ಹೆಚ್ಚಾಗಿದ್ದು, ಮಹಿಳೆಯರಿಗೆ ಉಚಿತ ಸೇವೆಯನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ. ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೇ ಹಲವಾರು ತೀರ್ಥ ಕ್ಷೇತ್ರಗಳಿಗೆ ತೆರಳುವ ಬಸ್ಗಳಲ್ಲಿ ಸಂಚರಿಸುವ ಮಹಿಳೆಯರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ.
ಕರ್ನಾಟಕ ಸಾರಿಗೆ ಸಂಸ್ಥೆಯು ಪರಿಸರಸ್ನೇಹಿ ಬಸ್ಗಳಿಗೂ ಸಾಕಷ್ಟು ಒತ್ತು ನೀಡಿದೆ. ಈಗಾಗಲೇ ರಾಜ್ಯದ ಹಲವೆಡೆ ಬಯೋ-ಡೀಸೆಲ್ ಆಧಾರಿತ ಬಸ್ಗಳು ಸಂಚರಿಸುತ್ತಿವೆ. ಬೆಂಗಳೂರು ಮೈಸೂರು ರಸ್ತೆಯಲ್ಲಿ ಇಲೆಕ್ಟ್ರಿಕ್ ಬಸ್ಗಳು ಸಂಚರಿಸುತ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Thu, 17 August 23