ಎಲೆಕ್ಟ್ರಿಕ್ ಕಾರು ಪ್ರಿಯರಿಗೆ ಶಾಕ್: ಇನ್ಮುಂದೆ ಕರ್ನಾಟಕದಲ್ಲಿ ಇವಿ ವಾಹನಗಳೂ ದುಬಾರಿ! ಕಾರಣ ಇಲ್ಲಿದೆ
ಕರ್ನಾಟಕ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ರಸ್ತೆ ತೆರಿಗೆ ವಿನಾಯಿತಿಯನ್ನು ಹಿಂಪಡೆಯಲು ಮುಂದಾಗಿದ್ದು, ಗ್ರಾಹಕರಿಗೆ ದರ ಏರಿಕೆಯ ಶಾಕ್ ಎದುರಾಗಲಿದೆ. ಇದರಿಂದ ರಾಜ್ಯಕ್ಕೆ 259 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ. ಈ ನಿರ್ಧಾರ ಎಲೆಕ್ಟ್ರಿಕ್ ವಾಹನ ಖರೀದಿದಾರರ ಮೇಲೆ ಪರಿಣಾಮ ಬೀರಲಿದೆ.

ಬೆಂಗಳೂರು, ಏಪ್ರಿಲ್ 1: ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು (Electric Vehicle) ಉತ್ತೇಜಿಸಲು ಕಳೆದ ಹತ್ತು ವರ್ಷಗಳಿಂದ ನೀಡಲಾಗುತ್ತಿದ್ದ ರಸ್ತೆ ತೆರಿಗೆ (Road Tax) ವಿನಾಯಿತಿಯನ್ನು ಹಿಂಪಡೆಯಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಸಂಬಂಧ ‘ಕರ್ನಾಟಕ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ವಿಧೇಯಕ 2026’ಕ್ಕೆ ಈಗಾಗಲೇ ಅನುಮೋದನೆ ಪಡೆಯಲಾಗಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಯಾವ ಇವಿ ವಾಹನಕ್ಕೆ ಎಷ್ಟು ತೆರಿಗೆ?
ಹೊಸ ನಿಯಮದ ಪ್ರಕಾರ, ಎಲೆಕ್ಟ್ರಿಕ್ ಕಾರುಗಳು, ಜೀಪುಗಳು ಮತ್ತು ಖಾಸಗಿ ಬಸ್‌ಗಳ ಬೆಲೆಯ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಆ ಮಾಹಿತಿ ಇಲ್ಲಿದೆ.
- 10 ಲಕ್ಷ ರೂ.ವರೆಗಿನ ಕಾರುಗಳಿಗೆ: ಶೇ 5 ರಷ್ಟು ತೆರಿಗೆ.
- 10 ರೂ.ನಿಂದ 25 ಲಕ್ಷ ರೂ.ವರೆಗಿನ ಕಾರುಗಳಿಗೆ: ಶೇ 8 ರಷ್ಟು ತೆರಿಗೆ.
- 25 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಕಾರುಗಳಿಗೆ: ಶೇ 10 ರಷ್ಟು ತೆರಿಗೆ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗಿಲ್ಲ ಟ್ಯಾಕ್ಸ್
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಈ ಹೊಸ ತೆರಿಗೆ ಅನ್ವಯಿಸುವುದಿಲ್ಲ, ಅವುಗಳಿಗೆ ಹಳೆಯ ವಿನಾಯಿತಿ ಮುಂದುವರಿಯಲಿದೆ.
ಸರ್ಕಾರದ ನಿರ್ಧಾರಕ್ಕೆ ಕಾರಣವೇನು?
ಈ ಹೊಸ ತೆರಿಗೆಯಿಂದ ರಾಜ್ಯ ಸರ್ಕಾರಕ್ಕೆ ಸುಮಾರು 259 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ. 2016 ರಿಂದ ನೀಡಲಾಗುತ್ತಿದ್ದ ಸಂಪೂರ್ಣ ವಿನಾಯಿತಿಯನ್ನು ಈಗ ಹಂತ ಹಂತವಾಗಿ ಹಿಂಪಡೆಯಲಾಗುತ್ತಿದೆ. ಆದರೂ, ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ಇಂದಿಗೂ ಕಡಿಮೆ ಇದೆ (ಸಾಮಾನ್ಯ ಕಾರುಗಳಿಗೆ ಶೇ 13 ರಿಂದ ಶೇ 18 ರಷ್ಟು ತೆರಿಗೆ ಇದೆ) ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
2024 ರಲ್ಲೇ ಎಲ್ಲಾ ಎಲೆಕ್ಟ್ರಿಕ್ ಕಾರುಗಳ ಮೇಲೆ ಒಂದು ಬಾರಿಯ ಲೈಫ್ಟೈಂ ತೆರಿಗೆ ವಿಧಿಸುವ ಯೋಜನೆಗಳಿದ್ದವು. ಆದರೆ ತೀವ್ರ ವಿರೋಧದ ನಂತರ 25 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ವಾಹನಗಳಿಗೆ ಮಾತ್ರ ತೆರಿಗೆ ವಿಧಿಸುವ ನಿರ್ಧಾರಕ್ಕೆ ಬರಲಾಗಿತ್ತು. ನೋಂದಣಿ ವಿಷಯದಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರ ಕರ್ನಾಟಕವು ಭಾರತದಲ್ಲಿ ನಾಲ್ಕನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿದೆ. ಹೆಚ್ಚಿನ ರಾಜ್ಯಗಳು ವಿದ್ಯುತ್ ವಾಹನಗಳಿಗೆ ತೆರಿಗೆ ವಿನಾಯಿತಿ ಅಥವಾ ರಿಯಾಯಿತಿಗಳನ್ನು ನೀಡುತ್ತವೆ. ಆದಾಗ್ಯೂ ಗುಜರಾತ್ ಮತ್ತು ಕೇರಳದಂತಹ ಕೆಲವು ರಾಜ್ಯಗಳು ತೆರಿಗೆ ವಿಧಿಸುತ್ತವೆ.
ಖರೀದಿದಾರರ ಮೇಲೆ ಪ್ರಭಾವ
ಬೆಂಗಳೂರಿನಲ್ಲಿ ಈಗಾಗಲೇ 4.1 ಲಕ್ಷ ಎಲೆಕ್ಟ್ರಿಕ್ ವಾಹನಗಳಿದ್ದು, ಅದರಲ್ಲಿ ಕಾರುಗಳ ಸಂಖ್ಯೆ ಸುಮಾರು 37,000 ದಾಟಿದೆ. ಈಗ ಏಕಾಏಕಿ ತೆರಿಗೆ ವಿಧಿಸಿರುವುದರಿಂದ ಹೊಸದಾಗಿ ಕಾರು ಖರೀದಿಸುವವರ ಜೇಬಿಗೆ ಕತ್ತರಿ ಬೀಳಲಿದ್ದು, ಎಲೆಕ್ಟ್ರಿಕ್ ವಾಹನಗಳ ಖರೀದಿ ಪ್ರಮಾಣ ತುಸು ಕಡಿಮೆಯಾಗುವ ಆತಂಕ ಎದುರಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:12 pm, Wed, 1 April 26
