ಕರ್ನಾಟಕದಲ್ಲಿ ಟ್ರಾಫಿಕ್ ಫೈನ್ 3,000 ಕೋಟಿ ರೂ. ಬಾಕಿ! ರಿಯಾಯಿತಿ ಕೊಟ್ಟರೂ ಮುಗಿಯದ ಗೋಳು
ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಬಾಕಿ ಪ್ರಮಾಣ ಭಾರೀ ಏರಿಕೆಯಾಗಿದೆ. 2019ರಿಂದ 2026ರ ಆಗಸ್ಟ್‌ವರೆಗೆ ದಾಖಲಾಗಿರುವ 8.16 ಕೋಟಿ ಪ್ರಕರಣಗಳ ಪೈಕಿ 5.53 ಕೋಟಿ ಪ್ರಕರಣಗಳು ಬಾಕಿ ಉಳಿದಿದ್ದು, 3,006.70 ಕೋಟಿ ರೂ. ದಂಡ ವಸೂಲಿಯಾಗದೆ ಬಾಕಿ ಉಳಿದಿರುವ ಬಗ್ಗೆ ವರದಿಯಾಗಿದೆ.

ಮುಖ್ಯಾಂಶಗಳು
- ಕರ್ನಾಟಕದಲ್ಲಿ ₹3,000 ಕೋಟಿಗೂ ಅಧಿಕ ದಂಡ ಬಾಕಿ
- 5.53 ಕೋಟಿ ಸಂಚಾರ ಪ್ರಕರಣಗಳು ಇನ್ನೂ ಬಾಕಿ
- ಬೆಂಗಳೂರೊಂದರಲ್ಲೇ ₹2,048 ಕೋಟಿ ದಂಡ ವಸೂಲಿ ಬಾಕಿ
ಬೆಂಗಳೂರು, ಅಕ್ಟೋಬರ್ 6: ಸರ್ಕಾರ ಹಲವು ಬಾರಿ ಶೇ 50ರಷ್ಟು ರಿಯಾಯಿತಿ ನೀಡಿದರೂ ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. 2019ರಿಂದ 2026ರ ಆಗಸ್ಟ್‌ವರೆಗೆ ರಾಜ್ಯದಲ್ಲಿ ದಾಖಲಾಗಿರುವ 8.16 ಕೋಟಿ ಸಂಚಾರ ಉಲ್ಲಂಘನೆ ಪ್ರಕರಣಗಳ ಪೈಕಿ 5.53 ಕೋಟಿ ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ. ಈ ಪ್ರಕರಣಗಳ ದಂಡ ಮೊತ್ತ ಬರೋಬ್ಬರಿ 3,006.70 ಕೋಟಿ ಬಾಕಿಯಿದೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲೇ ಟ್ರಾಫಿಕ್ ದಂಡ ಬಾಕಿ ಅತಿಹೆಚ್ಚು
ರಾಜ್ಯದ ಒಟ್ಟು ಬಾಕಿ ಪ್ರಕರಣಗಳಲ್ಲಿ ಬೆಂಗಳೂರಿನ ಪಾಲು ಅತಿ ಹೆಚ್ಚು. ನಗರದಲ್ಲಿ ದಾಖಲಾಗಿರುವ 5.85 ಕೋಟಿ ಸಂಚಾರ ಉಲ್ಲಂಘನೆ ಪ್ರಕರಣಗಳ ಪೈಕಿ 3.72 ಕೋಟಿಗೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ. ಇದರಿಂದ ಬೆಂಗಳೂರಿನಲ್ಲಿ ವಸೂಲಾಗದೆ ಉಳಿದಿರುವ ದಂಡದ ಮೊತ್ತ 2,048.56 ಕೋಟಿ ಎಂದು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ವರದಿ ಮಾಡಿದೆ. ಬಾಕಿ ಇರುವ ಸಂಚಾರ ದಂಡದ ವಿಚಾರವಾಗಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳನ್ನು ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿತ್ತು. ಬಾಕಿ ಇರುವ ಇ-ಚಲನ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದ ಕೋರ್ಟ್, ಬಾಕಿ ದಂಡ ಹೊಂದಿರುವ ವಾಹನಗಳನ್ನು ವಶಕ್ಕೆ ಪಡೆಯುವುದು ಹಾಗೂ ಆನ್‌ಲೈನ್ ಸಾರಿಗೆ ಸಂಬಂಧಿತ ಸೇವೆಗಳನ್ನು ಸ್ಥಗಿತಗೊಳಿಸುವಂತಹ ಕ್ರಮಗಳ ಬಗ್ಗೆಯೂ ನಿರ್ದೇಶನ ನೀಡಿದೆ.
ಎಫ್ಸಿ ಬಾಕಿ ಇದ್ದರೆ ದಂಡ ಕಡ್ಡಾಯ?
ಈ ಹಿನ್ನೆಲೆಯಲ್ಲಿ ಸಂಚಾರ ದಂಡ ಪಾವತಿಯನ್ನು ಕಡ್ಡಾಯಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲು ಇಲಾಖೆ ಮುಂದಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕ ಎಂ.ಎ. ಸಲೀಂ ತಿಳಿಸಿರುವುದನ್ನೂ ವರದಿ ಉಲ್ಲೇಖಿಸಿದೆ. ವಾಹನದ ಫಿಟ್‌ನೆಸ್ ಸರ್ಟಿಫಿಕೇಟ್ (FC) ಪಡೆಯಲು ಬಾಕಿ ಇರುವ ಸಂಚಾರ ದಂಡ ಪಾವತಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆದಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿರುವ ವಾಹನಗಳಿಗೆ ವಿಮೆ ನವೀಕರಣಕ್ಕೆ ಅವಕಾಶ ನೀಡದಂತೆ ಕೆಲವು ಕಾಯ್ದೆಗಳಿಗೆ ತಿದ್ದುಪಡಿ ತರಲು ಕೂಡ ಇಲಾಖೆ ಪ್ರಯತ್ನಿಸುತ್ತಿದೆ.
ಟ್ರಾಫಿಕ್ ಫೈನ್ ವಿದ್ಯುತ್ ಬಿಲ್‌ಗೆ ಲಿಂಕ್?
ಸಂಚಾರ ದಂಡ ಪಾವತಿಗೆ ಜನರನ್ನು ಉತ್ತೇಜಿಸಲು ವಿವಿಧ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಸಂಚಾರ ದಂಡವನ್ನು ವಿದ್ಯುತ್ ಬಿಲ್‌ಗೆ ಲಿಂಕ್ ಮಾಡುವ ಸಾಧ್ಯತೆಯ ಬಗ್ಗೆಯೂ ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದು, ಈ ಆಯ್ಕೆಗಳನ್ನು ಪರಿಶೀಲಿಸಲಾಗುವುದು ಎಂದು ಸಲೀಂ ತಿಳಿಸಿದ್ದಾರೆ.
ದಂಡ ವಸೂಲಿ ಕಡಿಮೆಯಾಗಲು ಕಾರಣವೇನು?
ಬೆಂಗಳೂರು ಸಂಚಾರ ಪೊಲೀಸರ ಹಿರಿಯ ಅಧಿಕಾರಿಗಳ ಪ್ರಕಾರ, ಸಂಪರ್ಕರಹಿತ ಜಾರಿ ವ್ಯವಸ್ಥೆ ಹಾಗೂ ವ್ಯವಸ್ಥೆಯಲ್ಲಿರುವ ಕೆಲವು ಲೋಪಗಳು ದಂಡ ವಸೂಲಿ ಕಡಿಮೆಯಾಗಲು ಪ್ರಮುಖ ಕಾರಣಗಳಾಗಿವೆ. ಶೇ 80ಕ್ಕೂ ಅಧಿಕ ಪ್ರಕರಣಗಳು ಸ್ವಯಂಚಾಲಿತ ಕಣ್ಗಾವಲು ಕ್ಯಾಮರಾಗಳ ಮೂಲಕ ದಾಖಲಾಗುತ್ತಿವೆ. ವಾಹನ ಚಾಲಕರನ್ನು ಸ್ಥಳದಲ್ಲೇ ನಿಲ್ಲಿಸದ ಕಾರಣ ಕೆಲವರು ಎಸ್‌ಎಂಎಸ್ ಮೂಲಕ ಬರುವ ನೋಟಿಸ್‌ಗಳನ್ನು ನಿರ್ಲಕ್ಷಿಸುತ್ತಾರೆ ಅಥವಾ ಪೊಲೀಸರ ಕೈಗೆ ಸಿಕ್ಕಿಬೀಳುವವರೆಗೆ ದಂಡದ ಬಗ್ಗೆ ಗಮನಹರಿಸುವುದಿಲ್ಲ.
ಇದನ್ನೂ ಓದಿ: ಒಂದೇ ವರ್ಷದಲ್ಲಿ 10 ಕೋಟಿ ರೂ ಟ್ರಾಫಿಕ್ ಫೈನ್: ವಸೂಲಾಗಿದ್ದು 1 ಕೋಟಿ ರೂ. ಮಾತ್ರ
ವಾಹನ ಮಾಲೀಕರು ವಿಳಾಸ ಬದಲಾಯಿಸಿದರೂ ಅಥವಾ ವಾಹನ ಮಾರಾಟ ಮಾಡಿದರೂ ವಾಹನ್ (VAHAN) ಡೇಟಾಬೇಸ್‌ನಲ್ಲಿ ವಿವರಗಳನ್ನು ನವೀಕರಿಸದಿರುವುದರಿಂದ ಹಲವು ನೋಟಿಸ್‌ಗಳು ಸಂಬಂಧಪಟ್ಟವರಿಗೆ ತಲುಪುತ್ತಿಲ್ಲ. ಪದೇಪದೇ ಶೇ 50ರಷ್ಟು ದಂಡ ರಿಯಾಯಿತಿ ನೀಡಿರುವುದರಿಂದ, ಮುಂದೆ ಮತ್ತೊಂದು ರಿಯಾಯಿತಿ ಯೋಜನೆ ಬರಬಹುದು ಎಂಬ ನಿರೀಕ್ಷೆಯಲ್ಲಿ ವಾಹನ ಸವಾರರು ದಂಡ ಪಾವತಿಸದೆ ಕಾಯುತ್ತಿರುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆಲವು ಸಂಚಾರ ಉಲ್ಲಂಘನೆಗಳಿಗೆ ದಂಡದ ಮೊತ್ತವನ್ನು ₹5,000ಕ್ಕೆ ಹೆಚ್ಚಿಸಲು ಸರ್ಕಾರ ಇತ್ತೀಚೆಗೆ ಯೋಜಿಸಿತ್ತು. ಆದರೆ ಈಗಾಗಲೇ ಕೋಟ್ಯಂತರ ಪ್ರಕರಣಗಳು ಬಾಕಿ ಇರುವ ಹಿನ್ನೆಲೆಯಲ್ಲಿ, ದಂಡ ಹೆಚ್ಚಳದಿಂದ ಮಾತ್ರ ಸಮಸ್ಯೆ ಬಗೆಹರಿಯುತ್ತದೆಯೇ ಎಂಬ ಬಗ್ಗೆ ಅಧಿಕಾರಿಗಳಲ್ಲೇ ಅನುಮಾನವಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




