ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸಾರಿಗೆ ನೌಕರರ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ. ಸಿಬ್ಬಂದಿ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರಿಗೆ ಸಾರಿಗೆ ನೌಕರರ ಒಕ್ಕೂಟ ಮನವಿ ಸಲ್ಲಿಸಿದೆ. ಮಾರಣಾಂತಿಕ ಹಲ್ಲೆ ತಡೆಯಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಶಕ್ತಿ ಯೋಜನೆ ಜಾರಿ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಶಕ್ತಿ ಯೋಜನೆ ಜಾರಿ ಬಳಿಕ ನಿಗಮಗಳ ಆದಾಯ ಹೆಚ್ಚಳವಾಗುತ್ತಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸಾರಿಗೆ ಬಸ್, ಸಿಬ್ಬಂದಿ ಇಲ್ಲ. ಈಗಿರುವ ಬಸ್ಗಳಲ್ಲಿ ಹೆಚ್ಚಿನ ಸಂಖ್ಯೆ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಎಲ್ಲಾ ಒತ್ತಡ ಸಹಿಸಿಕೊಂಡು ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡ್ತಿದ್ದಾರೆ. ಕೆಲವೆಡೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರಿಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಭಯಪಡುವಂತಹ ಸ್ಥಿತಿಯಿದೆ. ಕೆಲವು ಆರೋಪಿಗಳ ವಿರುದ್ಧ ಎಫ್ಐಆರ್ ಆಗಿದ್ದರೂ ದೌರ್ಜನ್ಯ ನಿಂತಿಲ್ಲ. ಹಲ್ಲೆ ಮಾಡಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒಕ್ಕೂಟ ಉಲ್ಲೇಖಿಸಿದೆ.
ಇದನ್ನೂ ಓದಿ: ಪ್ರಯಾಣಿಕರು ತಪ್ಪು ಕಲ್ಪನೆಯಿಂದ ಹಲ್ಲೆ ಮಾಡಿರಬಹುದು: ರಾಮಲಿಂಗಾರೆಡ್ಡಿ
ಸಾರಿಗೆ ಬಸ್ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವಿನ ಗಲಾಟೆ ಪ್ರಕರಣಗಳಿಗೆ ಸಂಬಂಧಿಸಿ ಎರಡು ದಿನ ಹಿಂದಷ್ಟೇ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದರು. ಪ್ರಯಾಣಿಕರು ತಪ್ಪು ಕಲ್ಪನೆಯಿಂದ ಹಲ್ಲೆ ನಡೆಸಿರಬಹುದು. ನಮ್ಮ ಸಿಬ್ಬಂದಿ ಕೂಡ ಕೆಲವು ಸಲ ಪ್ರಯಾಣಿಕರ ಜೊತೆ ಅನುಚಿತವಾಗಿ ವರ್ತಿಸಿದ್ದಿದೆ. ಕೆಲವು ಬಾರಿ ಪ್ರಯಾಣಿಕರೂ ಹಲ್ಲೆ ಮಾಡಿರಬಹುದು. ಇಂಥ ಸಣ್ಣಪುಟ್ಟ ಘಟನೆಗಳು ನಡೆಯುತ್ತಿರುತ್ತವೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ