ಪ್ರಯಾಣಿಕರು ತಪ್ಪು ಕಲ್ಪನೆಯಿಂದ ಹಲ್ಲೆ ಮಾಡಿರಬಹುದು: ರಾಮಲಿಂಗಾರೆಡ್ಡಿ
Belagavi News: ಕರ್ನಾಟಕದಲ್ಲಿ ಶಕ್ತಿ ಯೋಜನೆ ಜಾರಿ ಮಾಡಿದ ನಂತರ ಸಾರಿಗೆ ಬಸ್ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವಿನ ಗಲಾಟೆ ಪ್ರಕರಣಗಳು ನಡೆಯುತ್ತಿವೆ. ಈ ಬಗ್ಗೆ ಬೆಳಗಾವಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿ: ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದ ಶಕ್ತಿ ಯೋಜನೆ (Shakti Scheme) ಜಾರಿಯಾದ ನಂತರ ಕರ್ನಾಟಕದಲ್ಲಿ ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ಗಲಾಟೆಗಳು ನಡೆಯುತ್ತಿವೆ. ಕಂಡಕ್ಟರ್ ಪ್ರಯಾಣಕರ ಮೇಲೆ, ಪ್ರಯಾಣಿಕರು ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy), ಪ್ರಯಾಣಿಕರು ತಪ್ಪು ಕಲ್ಪನೆಯಿಂದ ಹಲ್ಲೆ ನಡೆಸಿರಬಹುದು ಎಂದಿದ್ದಾರೆ.
ಇಲಾಖೆಯಲ್ಲಿ 24 ಸಾವಿರ ಬಸ್‌ಗಳಿದ್ದು ನಿತ್ಯ 23 ಸಾವಿರ ಬಸ್‌ಗಳು ಸಂಚಾರ ಮಾಡುತ್ತಿವೆ. ಪ್ರತಿನಿತ್ಯ ಸರ್ಕಾರಿ ಬಸ್‌ಗಳು 1 ಲಕ್ಷ 56 ಸಾವಿರ ಟ್ರಿಪ್ಗಳನ್ನು ಮಾಡುತ್ತವೆ. ಈ ಪೈಕಿ ಯಾವುದೋ ಒಂದು ಟ್ರಿಪ್‌ನಲ್ಲಿ ಹಲ್ಲೆ ಪ್ರಕರಣ ಆಗಿರಬಹುದು, ಇಲ್ಲ ಎಂದು ಹೇಳುತ್ತಿಲ್ಲ. ನಮ್ಮ ಸಿಬ್ಬಂದಿ ಕೆಲವು ಸಲ ಪ್ರಯಾಣಿಕರ ಜೊತೆ ಅನುಚಿತವಾಗಿ ವರ್ತಿಸುತ್ತಾರೆ. ಪ್ರಯಾಣಿಕರೂ ಕೆಲ ಸಂದರ್ಭದಲ್ಲಿ ತಪ್ಪು ಕಲ್ಪನೆಯಿಂದ ಹಲ್ಲೆ ಮಾಡಿರಬಹುದು. ಇಂಥ ಸಣ್ಣಪುಟ್ಟ ಘಟನೆ ನಡೆಯುತ್ತಿರುತ್ತವೆ, ಸಿಬ್ಬಂದಿ ಅರ್ಥ ಮಾಡಿಕೊಳ್ಳಬೇಕು. ಸಿಬ್ಬಂದಿ ಸಹ ಸಾರ್ವಜನಿಕರ ಜೊತೆ ಸೌಜನ್ಯಯುತವಾಗಿ ವರ್ತಿಸಬೇಕು. ಸಾರ್ವಜನಿಕರು ಸಹ ಸಹಕಾರ ಕೊಡಬೇಕು ಎಂದರು.
ಹಲವು ಗ್ರಾಮಗಳಿಗೆ ಸರ್ಕಾರಿ ಬಸ್‌ಗಳು ಇಲ್ಲದಿರುವ ಬಗ್ಗೆ ಮಾತನಾಡಿದ ಸಾರಿಗೆ ಸಚಿವರು, ಇಡೀ ಪ್ರಪಂಚದಲ್ಲಿ ಸಾರಿಗೆ ಸಂಸ್ಥೆಗಳು ಸಾರ್ವಜನಿಕರ ಅನುಕೂಲಕ್ಕಾಗಿ ಇವೆ. ದೊಡ್ಡ ಜಿಲ್ಲೆಯಾದ ಬೆಳಗಾವಿಯಲ್ಲಿ 20 ಹಳ್ಳಿ ಬಿಟ್ಟು ಎಲ್ಲಾ ಹಳ್ಳಿಗೆ ಬಸ್‌ಗಳಿವೆ. ನಷ್ಟವಾದರೆ ಖಾಸಗಿ ಬಸ್‌ಗಳನ್ನು ಮಾಲೀಕರು ಓಡಿಸ್ತಾರಾ? ಸರ್ಕಾರಿ ಬಸ್‌ಗಳಲ್ಲಿ 10 ಜನರಿದ್ದರೂ ಬಸ್ ಸಂಚರಿಸುತ್ತದೆ. ಸಾರ್ವಜನಿಕ ಸೇವೆಗೆ ಇರುವಂತದ್ದು, ಲಾಭ ನಷ್ಟ ನೋಡಲು ಆಗುವುದಿಲ್ಲ ಎಂದರು.
ಬೊಮ್ಮಾಯಿಯವರ ಆರೋಪ ರಾಜಕೀಯ ಆರೋಪ: ರಾಮಲಿಂಗಾರೆಡ್ಡಿ
ಶಕ್ತಿ ಯೋಜನೆಯಿಂದ ಕೆಎಸ್‌ಆರ್‌ಟಿಸಿ ಮುಚ್ಚಿ ಹೋಗುತ್ತದೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ ರಾಮಲಿಂಗಾರೆಡ್ಡಿ, ಬೊಮ್ಮಾಯಿಯವರ ಆರೋಪ ರಾಜಕೀಯ ಆರೋಪವಾಗಿದೆ ಎಂದರು. ಅವರು ಸರಿಯಾಗಿ ಕೆಲಸ ಮಾಡಿಸಿದ್ದಿದ್ದರೆ ಅವರು ಆಡಳಿತದಲ್ಲಿ ಯಾಕೆ ಇರುತ್ತಿರಲಿಲ್ಲ? ಅವರು ಸರಿಯಾಗಿ ಕೆಲಸ ಮಾಡಿಲ್ಲ ಅದಕ್ಕೆ ವಿರೋಧ ಪಕ್ಷದಲ್ಲಿ ಕುಳಿತುಕೊಂಡಿದ್ದಾರೆ. ವಿರೋಧ ಪಕ್ಷದಲ್ಲಿ ಕುಳಿತು ನಮಗೆ ಸಲಹೆ ಸೂಚನೆ ಕೊಡಲಿ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:32 pm, Sun, 25 June 23