ನನ್ನನ್ನು ಜೈಲಿಗೆ ಹಾಕುತ್ತೀರಾ? ಸಚಿವ ಎಂಬಿ ಪಾಟೀಲ್ ವಿರುದ್ಧ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ
ಪಠ್ಯ ಪುಸ್ತಕದ ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಸಚಿವ ಎಂಬಿ ಪಾಟೀಲ್ ಎಚ್ಚರಿಕೆ ನೀಡಿದ್ದರು. ಇದನ್ನೇ ಮುಂದಿಟ್ಟುಕೊಂಡು ಚಕ್ರವರ್ತಿ ಸೂಲಿಬೆಲೆ ಅವರು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ವಿಡಿಯೋ ವೈರಲ್ ಆಗುತ್ತಿದೆ.
ವಿಜಯಪುರ: ಅಯ್ಯೋ ಪುಣಾತ್ಮ ಶಿವಾಜಿಯ ವಂಶಸ್ಥರು ನಾವು, ನನ್ನನ್ನು ಜೈಲಿಗೆ ಹಾಕುತ್ತೀರಾ ಎಂದು ಹೇಳಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಸಚಿವ ಎಂಬಿ ಪಾಟೀಲ್ (MB Patil) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ (ಜೂನ್ 24) ಸಂಜೆ ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ನಡೆದ ಗೋ ಸಮಾವೇಶದಲ್ಲಿ ಮಾತನಾಡಿರುವ ಚಕ್ರವರ್ತಿ ಸೂಲಿಬೆಲೆ (Chakravarty Sulibele) ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನೀವು ಆಯ್ಕೆ ಮಾಡಿರುವ ಶಾಸಕರೊಬ್ಬರು ಚಕ್ರವರ್ತಿ ಸೂಲಿಬೆಲೆನಾ ಜೈಲಿಗೆ ಹಾಕುತ್ತೇನೆ ಎಂದು ಹೇಳುತ್ತಾರೆ. ಅಯ್ಯೋ ಪುಣಾತ್ಮ ನಾವು ಶಿವಾಜಿಯ ವಂಶಸ್ಥರು, ನಾನು ರಾಣಾ ಪ್ರತಾಪರ ವಂಶಸ್ಥ, ನಾನು ಸಾವರ್ಕರ್ ವಂಶಸ್ಥ. ನಾನು ಭಗತಸಿಂಗ್ ಹೆಸರು ಹೇಳಿಕೊಂಡು ಬಂದವನು. ನನ್ನನ್ನ ಒಳಗೆ ಹಾಕುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಹಿಂದೆ ಪಠ್ಯ ಪುಸ್ತಕ ಮರು ಪರಿಷ್ಕರಣೆ ಚರ್ಚೆ ಸಮಯದಲ್ಲಿ ಚಕ್ರವರ್ತಿ ಸೂಲಿಬೆಲೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಎಂಬಿ ಪಾಟೀಲ್ ಅವರು ಎಚ್ಚರಿಕೆ ನೀಡಿದ್ದರು. ಇದರ ಮುಂದುವರಿದ ಭಾಗವಾಗಿ ಚಕ್ರವರ್ತಿ ಸೂಲಿಬೆಲೆ ಅವರು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಪಶುಸಂಗೋಪನಾ ಸಚಿವರು ಹಸು ಕಡಿಯುವ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನು ಟೀಕಿಸಿದ ಚಕ್ರವರ್ತಿ ಸೂಲಿಬೆಲೆ ಅವರು ರಾಜ್ಯದಲ್ಲಿ ಹಿಟ್ಲರ್ ಆಡಳಿತವಿದೆ ಎಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಎಂಬಿ ಪಾಟೀಲರು, ಈ ಹಿಂದೆ ಹಿಜಾಬ್, ಹಲಾಲ್ ವಿಚಾರದಲ್ಲಿ ಗಲಾಟೆ ಮಾಡಿದಂತೆ ಈಗ ಏನಾದರೂ ಗಲಾಟೆ ಮಾಡಿದರೆ ಜೈಲಿಗೆ ಹಾಕುತ್ತೇವೆ ಅಂತ ಎಚ್ಚರಿಕೆ ನೀಡಿದ್ದರು.
ಎಂಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಚಕ್ರವರ್ತಿ ಸೂಲಿಬೆಲೆ, ಜೈಲಿಗೆ ಹಾಕಿಸುವಂತಹ ತಪ್ಪು ನನ್ನಿಂದ ಏನಾಗಿದೆ ಅಂತ ಪ್ರಶ್ನಿಸಿದ್ದರು. ಅಸಲು ಸಂಗತಿಯೇನೆಂದರೆ ಅಧಿಕಾರದಲ್ಲಿರುವವರಿಗೆ ಅವರಿಗೆ ಸಹ್ಯವಾಗದ ಸತ್ಯಗಳನ್ನು ಮಾತಾಡಿದರೆ, ಆಡಳಿತದಲ್ಲಿನ ಅಪಸವ್ಯಗಳನ್ನು ಎತ್ತಿತೋರಿದರೆ ಪಥ್ಯವಾಗದು, ಅಧಿಕಾರ ತಮ್ಮ ಕೈಯಲ್ಲಿದೆ ಅನ್ನೋ ಕಾರಣಕ್ಕೆ ನಾಲಗೆಯನ್ನು ಬೇಕಾಬಿಟ್ಟಿ ಹರಿಬಿಡುತ್ತಾರೆ ಎಂದು ಹೇಳಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:22 pm, Sun, 25 June 23