ಕರ್ನಾಟಕದಲ್ಲಿ ಎಲೆಕ್ಷನ್ ಕಮಿಷನ್‌ನಿಂದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಘೋಷಣೆ: 2027ರ ಜನವರಿ 1 ಅರ್ಹತಾ ದಿನಾಂಕ

ಕರ್ನಾಟಕದಲ್ಲಿ 1.08 ಕೋಟಿ ಹೆಸರುಗಳು ಕೈಬಿಟ್ಟ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಘೋಷಿಸಿದೆ. 2027ರ ಜನವರಿ 1 ಅರ್ಹತಾ ದಿನಾಂಕವಾಗಿದ್ದು, ಅರ್ಹ ಮತದಾರರನ್ನು ಸೇರಿಸಲು, ಅನರ್ಹರನ್ನು ತೆಗೆದುಹಾಕಲು ಫಾರ್ಮ್ 6, 7, 8 ಲಭ್ಯ. ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಿನ ಪರಿಶೀಲನಾ ಶಿಷ್ಟಾಚಾರಗಳು, ನಗರ ಪ್ರದೇಶದಲ್ಲಿ ಹೊಸ ಮತಗಟ್ಟೆಗಳು, ವಿಶೇಷ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಕರ್ನಾಟಕದಲ್ಲಿ ಎಲೆಕ್ಷನ್ ಕಮಿಷನ್‌ನಿಂದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಘೋಷಣೆ: 2027ರ ಜನವರಿ 1 ಅರ್ಹತಾ ದಿನಾಂಕ
ಸಾಂದರ್ಭಿಕ ಚಿತ್ರ
Edited By:

Updated on: Nov 17, 2026 | 8:58 AM

ಬೆಂಗಳೂರು, ನ.17: ಕರ್ನಾಟಕದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ವೇಳೆ ಬರೋಬ್ಬರಿ 1.08 ಕೋಟಿ ಮತದಾರರ ಹೆಸರುಗಳು ಕೈಬಿಟ್ಟುಹೋಗಿವೆ ಎಂದು ನಾಗರಿಕ ಹಕ್ಕುಗಳ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬೆನ್ನಲ್ಲೇ, ಭಾರತ ಚುನಾವಣಾ ಆಯೋಗ ರಾಜ್ಯದಲ್ಲಿ ವಿಶೇಷ ಸಾರಾಂಶ ಪರಿಷ್ಕರಣೆ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. 2027ರ ಜನವರಿ 1 ಅನ್ನು ಅರ್ಹತಾ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ.

ಬಿಟ್ಟುಹೋದ ಅರ್ಹ, ಯುವ ಹಾಗೂ ಪ್ರಥಮ ಬಾರಿಗೆ ಮತದಾನದ ಹಕ್ಕು ಪಡೆದಿರುವ ಎಲ್ಲರಿಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದನ್ನು ಖಚಿತಪಡಿಸುವುದು ಈ ಪರಿಷ್ಕರಣೆಯ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ಹೊಸ ಸೇರ್ಪಡೆಗಾಗಿ ಫಾರ್ಮ್ 6 , ಹೆಸರು ತೆಗೆದುಹಾಕಲು/ಆಕ್ಷೇಪಣೆಗಾಗಿ ಫಾರ್ಮ್ 7 ಹಾಗೂ ವಿಳಾಸ ಬದಲಾವಣೆ ಅಥವಾ ತಿದ್ದುಪಡಿಗಾಗಿ ಫಾರ್ಮ್ 8 ಅನ್ನು ವೋಟರ್ ಸರ್ವಿಸ್ ಪೋರ್ಟಲ್ (voters.eci.gov.in) ಅಥವಾ ಇಸಿನೆಟ್ (ECINET) ಮೊಬೈಲ್ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ.

Loading...

ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಬಿಟ್ಟುಹೋಗದಂತೆ ಮತ್ತು ಅನರ್ಹರು ಸೇರದಂತೆ ನೋಡಿಕೊಳ್ಳಲು ಚುನಾವಣಾ ನೋಂದಣಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತಪ್ಪಾಗಿ ಹೆಸರುಗಳನ್ನು ಸಾಮೂಹಿಕವಾಗಿ ಕೈಬಿಡುವುದನ್ನು ತಡೆಯಲು ಫಾರ್ಮ್-7 ಅರ್ಜಿಗಳ ಸಲ್ಲಿಕೆಗೆ ಮಿತಿ ವಿಧಿಸಲಾಗಿದೆ.

ಅಕ್ರಮಗಳಿಗೆ ಕಡಿವಾಣ: ಕಟ್ಟುನಿಟ್ಟಿನ ಪರಿಶೀಲನಾ ಶಿಷ್ಟಾಚಾರ

ಯಾವುದೇ ಮತಗಟ್ಟೆಯಲ್ಲಿ ಮತದಾರರ ಹೆಸರು ಕಡಿತ ಪ್ರಮಾಣವು ಶೇಕಡಾ 2ನ್ನು ಮೀರಿದರೆ ಅಥವಾ ಒಬ್ಬರೇ ವ್ಯಕ್ತಿ 5 ಕ್ಕಿಂತ ಹೆಚ್ಚು ಹೆಸರುಗಳಿಗೆ ಆಕ್ಷೇಪಣೆ ಸಲ್ಲಿಸಿದರೆ, ಅಂತಹ ಪ್ರಕರಣಗಳನ್ನು ಇಆರ್‌ಒ ಖುದ್ದು ಪರಿಶೀಲನೆ ನಡೆಸಲಿದ್ದಾರೆ. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರು ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಪ್ರತಿದಿನ ಗರಿಷ್ಠ 10 ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದು. ಸಂಪೂರ್ಣ ಪರಿಷ್ಕರಣಾ ಅವಧಿಯಲ್ಲಿ ಒಬ್ಬ ಬಿಎಲ್‌ಎ 30 ಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ಇಆರ್‌ಒ ಅಥವಾ ಸಹಾಯಕ ಇಆರ್‌ಒ ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು. ಬಿಎಲ್‌ಒಗಳು ಮತದಾರರ ಹೊಸ ಗುಣಮಟ್ಟದ ಫೋಟೋಗಳನ್ನು ಸಂಗ್ರಹಿಸಲಿದ್ದು, ನಕಲಿ ನಮೂದುಗಳು, ನಿಧನ ಹೊಂದಿರುವ ಮತದಾರರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ಫಾರ್ಮ್-7 ಮೂಲಕ ತೆಗೆದುಹಾಕಲಾಗುವುದು.

ಇದನ್ನೂ ಓದಿ: ಬೆಂಗಳೂರಿನ ಬೆನ್ನಲ್ಲೇ ಮಂಗಳೂರಿನಲ್ಲೂ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: ಟೇಕಾಫ್ ವೇಳೆ ತಪ್ಪಿತು ಭಾರೀ ಅನಾಹುತ

ನಗರ ಪ್ರದೇಶದ ಮತದಾರರಿಗೆ ಅನುಕೂಲ ಹಾಗೂ ವಿಶೇಷ ಸಹಾಯವಾಣಿ

ನಗರ ಪ್ರದೇಶದ ಮತದಾರರ ಅನುಕೂಲಕ್ಕಾಗಿ ಅಪಾರ್ಟ್‌ಮೆಂಟ್‌ಗಳು, ಗೃಹ ನಿರ್ಮಾಣ ಸೊಸೈಟಿಗಳು, ಆರ್‌ಡಬ್ಲ್ಯೂಎ ವಸಾಹತುಗಳು ಮತ್ತು ಕೊಳೆಗೇರಿ ಪ್ರದೇಶಗಳ ನೆಲಮಹಡಿಗಳಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ವ್ಯಾಪಕ ಸಮೀಕ್ಷೆ ನಡೆಸಲು ಆದೇಶಿಸಲಾಗಿದೆ. ವಲಸೆ ಕಾರ್ಮಿಕರು, ರಾತ್ರಿ ಆಶ್ರಯ ತಾಣಗಳಲ್ಲಿರುವ ನಿರಾಶ್ರಿತರು, ಮಹಿಳೆಯರು, ತೃತೀಯಲಿಂಗಿಗಳು ಹಾಗೂ ಹಿರಿಯ ನಾಗರಿಕರಿಗಾಗಿ ವಿಶೇಷ ಸಹಾಯ ಕೇಂದ್ರಗಳು ಮತ್ತು ವಿಶೇಷ ಶಿಬಿರಗಳನ್ನು ಆಯೋಜಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ. ಸಂವಿಧಾನದ 324 ನೇ ವಿಚ್ಛೇದನದನ್ವಯ, ಈ ಪ್ರಕ್ರಿಯೆ ಮುಗಿಯುವವರೆಗೆ ಯಾವುದೇ ಜಿಲ್ಲಾ ಚುನಾವಣಾ ಅಧಿಕಾರಿಗಳು (DEO), ಇಆರ್‌ಒ ಅಥವಾ ಎಇಆರ್‌ಒ ಹುದ್ದೆಗಳು ಖಾಲಿಯಿರದಂತೆ ನೋಡಿಕೊಳ್ಳಲು ಮತ್ತು ಈ ಅಧಿಕಾರಿಗಳ ವರ್ಗಾವಣೆಯ ಮೇಲೆ ಸಂಪೂರ್ಣ ನಿಷೇಧ ಹೇರುವಂತೆ ಮುಖ್ಯ ಕಾರ್ಯಚರ್ಶಿಗಳಿಗೆ ಚುನಾವಣಾ ಆಯೋಗ ಸೂಚಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:46 am, Tue, 17 November 26

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us