Karnataka Weather Today: ನ. 30ರವರೆಗೂ ಕರ್ನಾಟಕದಲ್ಲಿ ಭಾರೀ ಮಳೆ; ವರುಣನ ಆರ್ಭಟಕ್ಕೆ ಆಂಧ್ರ, ತಮಿಳುನಾಡು ತತ್ತರ

Karnataka Rain: ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

Karnataka Weather Today: ನ. 30ರವರೆಗೂ ಕರ್ನಾಟಕದಲ್ಲಿ ಭಾರೀ ಮಳೆ; ವರುಣನ ಆರ್ಭಟಕ್ಕೆ ಆಂಧ್ರ, ತಮಿಳುನಾಡು ತತ್ತರ
ಬೆಂಗಳೂರು ಮಳೆ
Edited By:

Updated on: Nov 28, 2021 | 6:42 AM

ಬೆಂಗಳೂರು: ಕರ್ನಾಟಕದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಬುಧವಾರದವರೆಗೂ ಮಳೆ ಜೋರಾಗಿರಲಿದೆ. ಬೆಂಗಳೂರು ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನ ಮತ್ತು ಕರಾವಳಿ ಪ್ರದೇಶದ ಹಲವು ಪ್ರದೇಶಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡಿನಲ್ಲಿ ನವೆಂಬರ್ 30ರವರೆಗೂ ಮಳೆ ಮುಂದುವರೆಯುವ ನಿರೀಕ್ಷೆಯಿದೆ. ಆಂಧ್ರಪ್ರದೇಶದಲ್ಲೂ ವಿಪರೀತ ಮಳೆಯಾಗುತ್ತಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಮಲೆನಾಡು, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದು ಮಳೆ ಅಬ್ಬರಿಸಲಿದೆ.

ಶ್ರೀಲಂಕಾ ಕರಾವಳಿಯ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವಿದೆ ಮತ್ತು ತಮಿಳುನಾಡು ಕರಾವಳಿ ಮತ್ತು ಆಂಧ್ರಪ್ರದೇಶದ ದಕ್ಷಿಣ ಕರಾವಳಿಯಲ್ಲಿ ಈಶಾನ್ಯ ಮಾರುತಗಳು ಅಪ್ಪಳಿಸಲಿವೆ. ಮುಂದಿನ 4 ದಿನಗಳಲ್ಲಿ ಕರಾವಳಿ ಆಂಧ್ರಪ್ರದೇಶ, ಯಾನಂ, ರಾಯಲಸೀಮಾ, ದಕ್ಷಿಣ ಒಳನಾಡಿನ ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಇಂದು ವ್ಯಾಪಕವಾದ ಮಳೆಯಾಗುವ ಸಾಧ್ಯತೆಯಿದೆ.

ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನಾವು ನೀಡಿಲ್ಲ. ನಮ್ಮ ಪ್ರಕಾರ ಅಲ್ಲಲ್ಲಿ ಅಲ್ಪಸ್ವಲ್ಪ ಮಳೆಯಾಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಇಂದು ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಕೇರಳದಲ್ಲಿ ಸಾಕಷ್ಟು ವ್ಯಾಪಕ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಲಕ್ಷದ್ವೀಪ ಮತ್ತು ಕರ್ನಾಟಕದಲ್ಲಿ ಚದುರಿದ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಲಡಾಖ್, ಗೋವಾ, ತೆಲಂಗಾಣ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಐಎಂಡಿ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕವು ತಿಂಗಳಿಗೆ 292 ರಷ್ಟು ಹೆಚ್ಚುವರಿ ಮಳೆಯನ್ನು ಪಡೆದಿದೆ. ಈ ವಿಪರೀತ ಮಳೆಯು ಭಾರೀ ಪ್ರವಾಹವನ್ನು ಉಂಟುಮಾಡುತ್ತದೆ, ಇದು ಜೀವಹಾನಿ ಮತ್ತು ಆಸ್ತಿ ಹಾನಿಗೆ ಕಾರಣವಾಗುತ್ತದೆ ಎನ್ನಲಾಗಿದೆ. ಈಶಾನ್ಯ ಮಾನ್ಸೂನ್​ನಿಂದ ದಕ್ಷಿಣ ಕರ್ನಾಟಕ, ಕೇರಳ, ತಮಿಳುನಾಡು, ಕರಾವಳಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ಮಳೆ ಹೆಚ್ಚಾಗಲಿದೆ.

ಕಳೆದ ಬಾರಿ ಇದೇ ರೀತಿಯ ಪರಿಸ್ಥಿತಿ ನವೆಂಬರ್ 2015ರಲ್ಲಿ ಚೆನ್ನೈ ಮತ್ತು ತಮಿಳುನಾಡಿನ ಇತರ ಹಲವು ಪ್ರದೇಶಗಳಲ್ಲಿ ಇದೇ ರೀತಿಯ ವಿಪರೀತ ಮಳೆಗೆ ಸಾಕ್ಷಿಯಾಗಿತ್ತು. ನವೆಂಬರ್ 29ರವರೆಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಪ್ರತ್ಯೇಕವಾದ ಅತಿ ಹೆಚ್ಚು ಮಳೆಯಾಗಲಿದೆ. ಇಂದು ಮತ್ತು ನಾಳೆ ದಕ್ಷಿಣ ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾದಲ್ಲಿ ಅತಿ ಹೆಚ್ಚು ಮಳೆ ಬೀಳಲಿದೆ ಎಂದು IMD ಮುನ್ಸೂಚನೆ ನೀಡಿದೆ. ಇಂದು ತಮಿಳುನಾಡಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಬಂಗಾಳಕೊಲ್ಲಿಯಲ್ಲಿ ಅಭಿವೃದ್ಧಿಯಾದರೆ ಮುಂದಿನ ವಾರಾಂತ್ಯದ ವೇಳೆಗೆ ಪೂರ್ವ ಕರಾವಳಿ ರಾಜ್ಯಗಳಾದ ಒಡಿಶಾ ಮತ್ತು ಆಂಧ್ರಪ್ರದೇಶಕ್ಕೆ ಅಪಾಯ ಎದುರಾಗಬಹುದು. ನವೆಂಬರ್ 29 ಮತ್ತು 30ರಂದು ಅಂಡಮಾನ್ ಮತ್ತು ನಿಕೋಬಾರ್ ಮೇಲೆ ಪ್ರತ್ಯೇಕವಾದ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಲಡಾಖ್ ಮತ್ತು ಅರುಣಾಚಲ ಪ್ರದೇಶ ಈ ವಾರಾಂತ್ಯದಲ್ಲಿ ಪ್ರತ್ಯೇಕ ಮಳೆ/ ಹಿಮವನ್ನು ಕಾಣಬಹುದು. ದೇಶದ ಇತರೆಡೆ ಯಾವುದೇ ಮಹತ್ವದ ಮಳೆಯ ಮುನ್ಸೂಚನೆ ಇಲ್ಲ. ದೇಶದಾದ್ಯಂತ ರಾತ್ರಿಯ ಕನಿಷ್ಠವು ಸಾಮಾನ್ಯಕ್ಕಿಂತ ಸರಾಸರಿ ಅಥವಾ ಬೆಚ್ಚಗಿರುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೂಲ್ ಕೂಲ್ ವೆದರ್; ಎರಡು ದಿನ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

Andhra Pradesh Rain: ಭಯಂಕರ ಮಳೆಯಿಂದ ಆಂಧ್ರದಲ್ಲಿ ಪ್ರಾಣಕಳೆದುಕೊಂಡವರು 44 ಮಂದಿ; ಅಲ್ಲಲ್ಲಿ ಇನ್ನೂ ಸಿಗುತ್ತಿವೆ ಶವಗಳು