ನಾಳೆಯ ಹವಾಮಾನ: 28 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್, ಕರಾವಳಿಗೆ ಕೊಂಚ ರಿಲೀಫ್​

Karnataka Weather Tomorrow: ರಾಜ್ಯದಲ್ಲಿ ಇನ್ನೂ ಕೆಲ ದಿನ ಮಳೆ ಮುಂದುವರಿಯಲಿದ್ದು, ನಾಳೆ 28 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಭಾಗ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದ್ದು, ಮುಂಜಾಗೃತಾ ಕ್ರಮವಾಗಿ ಅರಬ್ಬಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.

ನಾಳೆಯ ಹವಾಮಾನ: 28 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್, ಕರಾವಳಿಗೆ ಕೊಂಚ ರಿಲೀಫ್​
ಮಳೆ

Updated on: Oct 24, 2025 | 6:08 PM

ಬೆಂಗಳೂರು, ಅಕ್ಟೋಬರ್​ 24: ಇನ್ನೂ ಕೆಲವು ದಿನಗಳ ಕಾಲ ರಾಜ್ಯದಲ್ಲಿ ಮಳೆ (Weather Forecast) ಮುಂದುವರಿಯುವ ಸೂಚನೆ ಇದ್ದು ನಾಳೆಯೂ 28 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಕರಾವಳಿ ಭಾಗದಲ್ಲಿ ಕಳೆದ 3-4 ದಿನಗಳಿಂದ ಅಬ್ಬರಿಸುತ್ತಿದ್ದ ವರುಣ ಕೊಂಚ ಶಾಂತವಾಗಲಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಇಳಿಕೆಯಾಗಲಿದೆ. ಆದರೆ ಗಾಳಿಯ ಪ್ರಮಾಣ ಹೆಚ್ಚಿರಲಿರುವ ಕಾರಣ ಮುಂಜಾಗೃತಾ ಕ್ರಮವಾಗಿ ಅರಬ್ಬಿ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ.

ಉತ್ತರ ಒಳನಾಡು ಭಾಗಕ್ಕೆ ಹೋಲಿಸಿದರೆ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ನಾಳೆ ಹೆಚ್ಚು ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಗಾಳಿ ನಿರೀಕ್ಷಿಸಲಾಗಿದೆ. ಈಗಾಗಲೇ ಅರಬ್ಬಿ ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಹವಾಮಾನ ಇಲಾಖೆ ಸೂಚನೆಯಂತೆ 50ಕ್ಕೂ ಹೆಚ್ಚು ಮೀನುಗಾರಿಕೆ ಬೋಟ್​ಗಳು ಬಂದರಿಗೆ ವಾಪಸ್ ಆಗಿದ್ದು, ನೂರಾರು ಮೀನುಗಾರಿಕೆ ಬೋಟ್​ಗಳು ಬಂದರಿನಲ್ಲಿ ಲಂಗರು ಹಾಕಿವೆ. ಹವಾಮಾನ ವೈಪರೀತ್ಯದಿಂದ ಈ ವರ್ಷ ತಡವಾಗಿ ಮೀನುಗಾರಿಕೆ ಆರಂಭ ಆಗಿರುವ ನಡುವೆ ವಾಯುಭಾರ ಕುಸಿತದಿಂದ ಚಟುವಟಿಕೆಗೆ ಮತ್ತೆ ಬ್ರೇಕ್​ ಬಿದ್ದಿದೆ. ನೆರೆಯ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲೂ ಸಾಧಾರಣ ಮಳೆಯ ನಿರೀಕ್ಷೆ ಇದೆ. ಇಲ್ಲಿಯೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: ರಾಜ್ಯದ 3 ಜಿಲ್ಲೆಗಳಿಗೆ ಆರೆಂಜ್​ ಅಲರ್ಟ್​; ಕರವಾಳಿ, ಮಲೆನಾಡಲ್ಲಿ ಭಾರೀ ಮಳೆ ಮುನ್ಸೂಚನೆ

ದಕ್ಷಿಣ ಒಳನಾಡು ಭಾಗದ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಉತ್ತಮ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಉತ್ತರ ಒಳನಾಡು ಭಾಗದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲೂ ಇದೇ ರೀತಿಯ ಹವಾಮಾನ ಇರಲಿದೆ.

ರಾಜಧಾನಿ ಬೆಂಗಳೂರಲ್ಲೂ ನಾಳೆ ಮಳೆಯಾಗಲಿದ್ದು, ಬೆಳ್ಳಂ ಬೆಳಗ್ಗೆ ವರುಣ ತಂಪೆರೆಯುವ ನಿರೀಕ್ಷೆ ಇದೆ. ಮಧ್ಯಾಹ್ನದ ವೇಳೆಯೂ ಸಾಧಾರಣ ಮಳೆ ಅಂದಾಜಿಸಲಾಗಿದ್ದು, ಗಾಳಿಯ ವೇಗ ಗಂಟೆಗೆ 6-12 ಕಿ.ಮೀ. ಇರಲಿದೆ. ನಗರದ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್​ ಇರಲಿದ್ದು, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:07 pm, Fri, 24 October 25