Karnataka Weekend Lockdown: ವೀಕೆಂಡ್​ ಲಾಕ್​ಡೌನ್- ಏನಿರುತ್ತೆ ಮತ್ತು ಏನಿರಲ್ಲ, ಯಾರೆಲ್ಲ ಆಚೆ ಬರಬಹುದು, ಆಸ್ಪತ್ರೆಗಳಿಗೆ ಹೋಗಬಹುದಾ? ಇಲ್ಲಿದೆ ಮಾಹಿತಿ

|

Updated on: Apr 23, 2021 | 5:11 PM

ಅಗತ್ಯ ಸೇವೆಗಳಿಗೆ ಸಂಬಂಧಿಸಿದ ಉದ್ಯೋಗಿಗಳು, 24x7 ಕೆಲಸ ಮಾಡುವ ಕಾರ್ಖಾನೆ ಮತ್ತು ಸಂಸ್ಥೆಗಳ ನೌಕರರು ವಾರಾಂತ್ಯದ ಕರ್ಫ್ಯೂನಲ್ಲೂ ಕೆಲಸಕ್ಕೆ ಹೋಗಬಹುದಾಗಿದೆ. ಅದರೆ ಕೆಲಸಕ್ಕೆ ಹೋಗುವಾಗ ಅವರು ತಾವು ಕೆಲಸ ಮಾಡುವ ಸಂಸ್ಥೆಯ ಗುರುತಿನ ಕಾರ್ಡ್​ ಅನ್ನು ತಮ್ಮೊಂದಿಗೆ ಇಟ್ಟುಕೊಂಡಿರಬೇಕು.

Karnataka Weekend Lockdown: ವೀಕೆಂಡ್​ ಲಾಕ್​ಡೌನ್- ಏನಿರುತ್ತೆ ಮತ್ತು ಏನಿರಲ್ಲ, ಯಾರೆಲ್ಲ ಆಚೆ ಬರಬಹುದು, ಆಸ್ಪತ್ರೆಗಳಿಗೆ ಹೋಗಬಹುದಾ? ಇಲ್ಲಿದೆ ಮಾಹಿತಿ
ಲಾಕ್​ಡೌನ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕರ್ನಾಟಕದಲ್ಲಿ ಅಂಕೆಮೀರಿ ಹಬ್ಬುತ್ತಿರುವ ಕೊವಿಡ್-19 ಪಿಡುಗನ್ನು ಹತೋಟಿಗೆ ತರಲು ರಾಜ್ಯ ಸರ್ಕಾರ ರಾಜ್ಯವಿಡೀ ರಾತ್ರಿ ಕರ್ಫ್ಯೂ ವಿಧಿಸುವ ಜೊತೆಗೆ ಕೆಲವು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಅವುಗಳೊಂದಿಗೆ ವಾರಾಂತ್ಯದ ಕರ್ಫ್ಯೂ ಸಹ ಹೇರಿದೆ. ಹೊಸ ಲಾಕ್​ಡೌನ್​ಗೆ ಸಂಬಂಧಿಸಿದ ನಿಯಮಾವಳಿಗಳು ಏಪ್ರಿಲ್ 21ರಿಂದ ಜಾರಿಗೆ ಬಂದಿದ್ದು, ಮೇ 4ರವರೆಗೆ ಅಸ್ತಿತ್ವದಲ್ಲಿರುತ್ತವೆ. ಕೇವಲ ತುರ್ತು ಸಂದರ್ಭ ಮತ್ತು ಅಗತ್ಯ ವಸ್ತುಗಳ ಖರೀದಿಗೆ ಹೊರತುಪಡಿಸಿ ಬೇರೆ ಯಾವ ಕಾರಣಕ್ಕೂ ಜನ ಮನೆಬಿಟ್ಟು ಆಚೆ ಬಾರದಂತೆ ಸರ್ಕಾರ ಆಗ್ರಹಿಸಿದೆ. ಸರ್ಕಾರ ವಿಧಿಸಿರುವ ವಾರಾಂತ್ಯದ ಲಾಕ್​ಡೌನ್ ಇಂದಿನಿಂದ ಅಂದರೆ ಶುಕ್ರವಾರದಿಂದ ಜಾರಿಗೆ ಬಂದಿದ್ದು, ಉಳಿದ ದಿನಗಳಲ್ಲಿ ರಾತ್ರಿ ಕರ್ಪ್ಯೂಗೆ ಸಂಬಂಧಿಸಿದ ಎಲ್ಲ ನಿಯಮಗಳು ಅನ್ವಯವಾಗುತ್ತವೆ.

ಹಾಗಾದರೆ, ಈ ವೀಕೆಂಡ್ ಕರ್ಪ್ಯೂ ಯಾರಿಗೆಲ್ಲ ಅನ್ವಯವಾಗುತ್ತದೆ, ಯಾರು ಮನೆಬಿಟ್ಟು ಆಚೆ ಬರಬಹುದು ಎನ್ನುವುದನ್ನು ತಿಳಿಯುವುದು ಅತ್ಯವಶ್ಯಕವಾಗಿದೆ.

ಅಗತ್ಯ ಸೇವೆಗಳ ಇಲಾಖೆಗಳಲ್ಲಿರುವ ಸರ್ಕಾರಿ ನೌಕರರು ಕೆಲಸಕ್ಕೆ ಹೋಗಬಹುದೇ?
ಹೌದು, ಖಂಡಿತವಾಗಿ ಅವರು ಹೋಗಬಹುದು. ಅಗತ್ಯ ಸೇವೆಗಳಿಗೆ ಸಂಬಂಧಿಸಿದ ಉದ್ಯೋಗಿಗಳು, 24×7 ಕೆಲಸ ಮಾಡುವ ಕಾರ್ಖಾನೆ ಮತ್ತು ಸಂಸ್ಥೆಗಳ ನೌಕರರು ವಾರಾಂತ್ಯದ ಕರ್ಫ್ಯೂನಲ್ಲೂ ಕೆಲಸಕ್ಕೆ ಹೋಗಬಹುದಾಗಿದೆ. ಅದರೆ ಕೆಲಸಕ್ಕೆ ಹೋಗುವಾಗ ಅವರು ತಾವು ಕೆಲಸ ಮಾಡುವ ಸಂಸ್ಥೆಯ ಗುರುತಿನ ಕಾರ್ಡ್​ ಅನ್ನು ತಮ್ಮೊಂದಿಗೆ ಇಟ್ಟುಕೊಂಡಿರಬೇಕು.

ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳ ಪ್ರತಿ

ವಾರಾಂತ್ಯದ ಲಾಕ್​ಡೌನ್​ನಲ್ಲಿ ಯಾರೆಲ್ಲ ಮನೆಯಿಂದ ಆಚೆ ಬರಬಹುದು?
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಯ ಪ್ರಕಾರ ಕೇವಲ ಟೆಲಿಕಾಮ್/ಇಂಟರ್ನೆಟ್ ಸೇವೆ ಒದಗಿಸುವ ಉದ್ಯೋಗಿಗಳು ಮಾತ್ರ ತಮ್ಮ ಗುರುತಿನ ಚೀಟಿಯೊಂದಿಗೆ ಆಚೆ ಬರಬಹುದು. ಐಟಿ/ ಐಟಿಇಎಸ್ ಸಂಸ್ಥೆಗಳ ಅಗತ್ಯ ಸೇವೆಗಳ ವಿಭಾಗಗಳಲ್ಲಿ ಕೆಲಸ ಮಾಡುವವರು ಕಚೇರಿಗಳಿಗೆ ಹೋಗಿ ಕೆಲಸ ಮಾಡಬಹುದು ಆದರೆ ಉಳಿದವರು ತಮ್ಮ ಮನೆಗಳಿಂದಲೇ ಕೆಲಸ (ವರ್ಕ್​ ಫ್ರಂ ಹೋಮ್) ಮಾಡಬೇಕು. ಹಾಗೆಯೇ, ಲಸಿಕೆ ಹಾಕಿಸಿಕೊಳ್ಳಲು ಅರ್ಹರಿರುವ ಜನ ತಮ್ಮ ಗುರುತಿನ ಚೀಟಿಗಳೊಂದಿಗೆ ಮನೆಯಿಂದ ಆಚೆ ಬಂದು ಲಸಿಕಾ ಕೇಂದ್ರಗಳಿಗೆ ಹೋಗಬಹುದು.

ಅಸ್ವಸ್ಥರು ಆಸ್ಪತ್ರೆಗಳಿಗೆ ಹೋಗಬಹುದೇ?
ಹೌದು. ಅಸ್ವಸ್ಥರು ಮತ್ತು ಪ್ರಯಾಣಿಸಲೇಬೇಕಾದ ಅನಿವಾರ್ಯತೆ ಇರುವವರು ವಾರಾಂತ್ಯದ ಲಾಕ್​ಡೌನ್​ನಲ್ಲಿ ಆಚೆ ಬರಬಹುದೆಂದು ಸರ್ಕಾರ ಸ್ಪಷ್ಟಪಡಿಸಿದೆ. ಹಾಗೆಯೇ, ವೈದ್ಯಕೀಯ ನೆರವಿನ ಅಗತ್ಯವಿರುವವರು ಸಹ ಮನೆಯಿಂದ ಆಚೆ ಬರಬಹುದು.

ಕಿರಾಣಾ ಅಂಗಡಿಗಳು ತೆರೆದಿರುತ್ತವೆಯೇ, ಹಾಲಿನ ಸರಬರಾಜು ಹೇಗೆ?
ಸರ್ಕಾರ ಜಾರಿಗೊಳಿಸಿರುವ ನಿಯಮಾವಳಿಗಳ ಪ್ರಕಾರ, ನಿಮ್ಮ ನೆರೆಹೊರೆಯ ಅಂಗಡಿಗಳು, ಹಾಲಿನ ಪಾರ್ಲರ್​ಗಳು ಶನಿವಾರ ಮತ್ತು ರವಿವಾರಗಳಂದು ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ತೆರೆದಿರುತ್ತವೆ. ಆದರೆ, ಅಗತ್ಯ ವಸ್ತುಗಳ ಆನ್​ಲೈನ್ ಸೇವೆ ಲಾಕ್​ಡೌನ್​ದುದ್ದಕ್ಕೂ ಜಾರಿಯಲ್ಲಿರುತ್ತದೆ.

ವೀಕೆಂಡ್ ಕರ್ಫ್ಯೂ ವೇಳೆ ಬಿಎಂಟಿಸಿ ಬಸ್ ಓಡಾಟ ಇರಲ್ಲ
ಟಿವಿ9 ಜೊತೆ ಮಾತಾಡಿರುವ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ ಶಿಖಾ ಅವರು, ವೀಕೆಂಡ್ ಕರ್ಫ್ಯೂ ವೇಳೆ ಬಿಎಂಟಿಸಿ ಬಸ್​ಗಳ ಸಂಚಾರ ಇರೋದಿಲ್ಲ ಅಂತ ತಿಳಿಸಿದ್ದಾರೆ.

ಮೆಟ್ರೋ ಪ್ರಯಾಣಿಕರಿಗೆ ಮುಖ್ಯವಾದ ಮಾಹಿತಿ
ವಾರಾಂತ್ಯ ಕರ್ಪ್ಯೂ ಹಿನ್ನಲೆಯಲ್ಲಿ ಶನಿವಾರ ಮತ್ತು ಭಾನುವಾರ ಮೆಟ್ರೋ ಸಂಚಾರ ರದ್ದು ಮಾಡಲಾಗಿದೆ. ಆದರೆ, ಸೋಮವಾರದಿಂದ ಶುಕ್ರವಾರದವರೆಗೆ ಮೆಟ್ರೋ ಸೇವೆ ಎಂದಿನಂತೆ ಬೆಳಗ್ಗೆ 7 ಗಂಟೆಗ ಆರಂಭವಾಗಲಿದೆ ಎಂದು ಬಿಎಮ್​ಆರ್​ಸಿಎಲ್ ತನ್ನ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ರಾಜ್ಯದಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಗಿನ 6 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಯಿರುತ್ತದೆ ಎಂದು ಮಾರ್ಗಸೂಚಿಯಲ್ಲಿ ಹೇಳಿರುವ ಸರ್ಕಾರವು, ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವೆರೆಗೆ ಇರುತ್ತದೆ ಎಂದು ತಿಳಿಸಿದೆ.

(Karnataka Weekend Lockdown: What all is available and who can step out of the house? Details are here)

ಇದನ್ನೂ ಓದಿ: Karnataka Lockdown News: ಲಾಕ್​ಡೌನ್​ ಹೇರುವ ಪರಿಸ್ಥಿತಿ ತರಬೇಡಿ.. ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ, ಲಸಿಕೆ ತೆಗೆದುಕೊಳ್ಳಿ : ಪ್ರತಾಪ್​ ಸಿಂಹ ಮನವಿ

Published On - 4:58 pm, Fri, 23 April 21