ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಕಲಾಪ ನಿಗದಿ; ಮಂಗಳವಾರದಿಂದ ಪುನರಾರಂಭಗೊಳ್ಳಲಿದೆ ಅಧಿವೇಶನ

ಶುಕ್ರವಾರ ಸರ್ಕಾರ ವಿಧಾನಪರಿಷತ್​ನ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಈ ಪತ್ರದಲ್ಲಿ ಪರಿಷತ್​ ಕಲಾಪವನ್ನು ಡಿಸೆಂಬರ್ 15ರಿಂದ ಪುನರಾರಂಭಿಸಲು ನಿರ್ದೇಶಿಸಿತ್ತು.

ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಕಲಾಪ ನಿಗದಿ; ಮಂಗಳವಾರದಿಂದ ಪುನರಾರಂಭಗೊಳ್ಳಲಿದೆ ಅಧಿವೇಶನ
ವಿಧಾನಸೌಧ
Rajesh Duggumane

|

Dec 12, 2020 | 6:37 PM

ಬೆಂಗಳೂರು: ಪರಿಷತ್​ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಆದ ಬೆನ್ನಲ್ಲೇ, ಡಿಸೆಂಬರ್ 15ರಂದು ಪರಿಷತ್ ಅಧಿವೇಶನ ಕರೆಯುವಂತೆ ವಿಧಾನ ಪರಿಷತ್ ಕಾರ್ಯದರ್ಶಿಗೆ ಸರ್ಕಾರ ಪತ್ರ ಬರೆದಿತ್ತು. ಈ ಪತ್ರದ ನಿರ್ದೇಶನದಂತೆ ಮಂಗಳವಾರದಿಂದ ಕಲಾಪ ಆರಂಭಗೊಳ್ಳಲಿದೆ.

ಡಿಸೆಂಬರ್​ 10ರಂದು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 (ಗೋಹತ್ಯೆ ನಿಷೇಧ ಕಾನೂನು) ಮಾಡಲು ಬಿಜೆಪಿ ಮುಂದಾಗಿತ್ತು. ಆದರೆ, ಪಶು ಸಂಗೋಪನಾ ಸಚಿವರು ಕಲಾಪದಲ್ಲಿ ಹಾಜರಿಲ್ಲ ಎಂಬ ನೆಪ ಹೇಳಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ವಿಧೇಯಕ ಮಂಡನೆಗೆ ಅವಕಾಶ ನೀಡಲಿಲ್ಲ. ವಿಧೇಯಕ ಮಂಡನೆಯಾಗದೇ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು.

ಇದಾದ ಬೆನ್ನಲ್ಲೇ ಶುಕ್ರವಾರ ಸರ್ಕಾರ ವಿಧಾನಪರಿಷತ್​ನ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಈ ಪತ್ರದಲ್ಲಿ ಪರಿಷತ್​ ಕಲಾಪವನ್ನು ಡಿಸೆಂಬರ್ 15ರಿಂದ ಪುನರಾರಂಭಿಸಲು ನಿರ್ದೇಶಿಸಿತ್ತು. ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಕಲಾಪ ನಿಗದಿಗಿಯಾದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಪರಿಷತ್​ ಕಲಾಪ ಪುನರಾರಂಭಗೊಳ್ಳಲಿದೆ.

ಮತ್ತೆ ಪರಿಷತ್​ ಕಲಾಪ ಆರಂಭಕ್ಕೆ ಕಾರಣವೇನು? ವಿಧಾನಸಭೆಯಲ್ಲಿ (ಕೆಳ ಮನೆ ) ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆಗೆ ಅನುಮೋದನೆ ದೊರೆತಿದೆ. ಅದೇ ರೀತಿ  ವಿಧಾನ ಪರಿಷತ್​ನಲ್ಲೂ​ (ಮೇಲ್ಮನೆ) ಗೋ ಹತ್ಯೆ ನಿಷೇಧಕ್ಕೆ ಅನುಮೋದನೆ ಪಡೆದುಕೊಳ್ಳುವ ತರಾತುರಿ ಬಿಜೆಪಿಯದ್ದು. ಆದರೆ, ಇದು ಬಿಜೆಪಿಗೆ ಅಷ್ಟು ಸುಲಭವಾಗಿಲ್ಲ. ಏಕೆಂದರೆ, ವಿಧಾನ ಪರಿಷತ್​ನಲ್ಲಿ ಬಿಜೆಪಿ 31, ಕಾಂಗ್ರೆಸ್​ 28 ಹಾಗೂ ಜೆಡಿಎಸ್​ 14 ಸ್ಥಾನಗಳನ್ನು ಹೊಂದಿದೆ. ಒಂದೊಮ್ಮೆ ಜೆಡಿಎಸ್​ ಅಧಿವೇಶನದಿಂದ ಹೊರ ನಡೆದರೆ ಬಿಜೆಪಿಗೆ ಲಾಭದಾಯಕವಾಗಲಿದೆ. ಆದರೆ, ಇಂದು ಮಾಧ್ಯಮದ ಜೊತೆ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.​ಡಿ. ಕುಮಾರಸ್ವಾಮಿ, ಗೋ ಮಾತೆ ಹೆಸರಲ್ಲಿ ಬಿಜೆಪಿಗೆ ಮತ ಪಡೆಯಬೇಕಿದೆ ಎಂದಿದ್ದರು. ಹೀಗಾಗಿ, ಜೆಡಿಎಸ್​ ಇದಕ್ಕೆ ವಿರೋಧ ವ್ಯಕ್ತಪಡಿಸೋದು ಬಹುತೇಕ ಖಚಿತವಾಗಿದೆ.

ಒಂದೊಮ್ಮೆ, ಈ ವಿಚಾರದಲ್ಲಿ ಜೆಡಿಎಸ್​​-ಕಾಂಗ್ರೆಸ್​ ಒಂದಾದರೆ, ಗೋ ಹತ್ಯೆ ನಿಷೇಧ ವಿಧೇಯಕ ಪಾಸಾಗುವುದಿಲ್ಲ. ಹಾಗಾದಾಗ, ಈ ವೀಧೇಯಕವನ್ನು ಮತ್ತೆ ಕೆಳಮನೆಗೆ ತೆಗೆದುಕೊಂಡು ಹೋಗಿ ಒಪ್ಪಿಗೆ ಪಡೆಯಬಹುದು.

ಇನ್ನು, ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ಸಾಧ್ಯತೆ ಇದೆ. ಹೀಗಾದಲ್ಲಿ, ಜೆಡಿಎಸ್​ ಕೂಡ ಇದಕ್ಕೆ ಬೆಂಬಲ ಸೂಚಿಸಲಿದೆ. ಈ ಕಾರಣಕ್ಕೆ ಬಿಜೆಪಿ ಮತ್ತೆ ಪರಿಷತ್​ ಅಧಿವೇಶನ ಕರೆಯುವಂತೆ ಸೂಚನೆ ನೀಡಿದೆ ಎನ್ನುವ ಮಾತು ಕೇಳಿ ಬಂದಿದೆ.

ಡಿ.15ರಂದು ಪರಿಷತ್ ಅಧಿವೇಶನ ಕರೆಯುವಂತೆ ವಿಧಾನ ಪರಿಷತ್ ಕಾರ್ಯದರ್ಶಿಗೆ ಸರ್ಕಾರ ಪತ್ರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada