ವಿಡಿಯೋ ವೈರಲ್ ಬೆನ್ನಲ್ಲೇ ಡಿಜಿಪಿ ರಾಮಚಂದ್ರ ರಾವ್ ಅಜ್ಞಾತ ಸ್ಥಳಕ್ಕೆ: ಕಾನೂನು ಹೋರಾಟದ ಕುರಿತು ಚರ್ಚೆ
ರಾಸಲೀಲೆ ವಿಡಿಯೋ ವೈರಲ್ ಬೆನ್ನಲ್ಲೇ ಡಿಜಿಪಿ ಡಾ.ರಾಮಚಂದ್ರ ರಾವ್ 10 ದಿನ ರಜೆ ಹಾಕಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಕಾನೂನು ಹೋರಾಟಕ್ಕೆ ವಕೀಲರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಇತ್ತ ರಾಜ್ಯ ಸರ್ಕಾರ ಅವರನ್ನು ಅಮಾನತುಗೊಳಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ಪ್ರಕರಣ ಪೊಲೀಸ್ ಇಲಾಖೆಗೆ ಮುಜುಗರ ತಂದ ಹಿನ್ನೆಲೆ ಶಿಸ್ತುಕ್ರಮ ನಿರೀಕ್ಷಿಸಲಾಗಿದೆ.

ಬೆಂಗಳೂರು, ಜನವರಿ 19: ರಾಸಲೀಲೆ ವಿಡಿಯೋ ವೈರಲ್ ಬೆನ್ನಲ್ಲೇ 10 ದಿನ ರಜೆ ಹಾಕಿ ಡಿಜಿಪಿ ಡಾ. ರಾಮಚಂದ್ರ ರಾವ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಕಾನೂನಾತ್ಮಕ ಹೋರಾಟದ ಕುರಿತು ರಹಸ್ಯ ಸ್ಥಳದಲ್ಲಿ ವಕೀಲರ ತಂಡದ ಜೊತೆ ರಾಮಚಂದ್ರ ರಾವ್ ಚರ್ಚಿಸಲಿದ್ದಾರೆ. ಮತ್ತೊಂದೆಡೆ ಡಿಜಿಪಿಗೆ ಶಾಕ್ ಕೊಡುವ ತಯಾರಿಯಲ್ಲಿ ರಾಜ್ಯ ಸರ್ಕಾರ ಇದ್ದು, ಯಾವುದೇ ಕ್ಷಣ ಅಧಿಕಾರಿ ಅಮಾನತು ಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ವಿಚಾರಣೆ ಮಾಡಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂದು ಹೇಳಿದ್ದರು. ಅದಾದ ಕೆಲವೇ ಹೊತ್ತಲ್ಲಿ ಡಿಜಿಪಿ ರಜೆ ಹಾಕಿ ತೆರಳಿದ್ದಾರೆ. ಇನ್ನು ಘಟನೆ ಬಗ್ಗೆ ಮಾಜಿ ಅಧಿಕಾರಿಗಳಿಂದಲೂ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರುವ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ , ಪ್ರಕರಣದಿಂದ ಪೊಲೀಸ್ ಇಲಾಖೆಗೆ ಮುಜುಗರವಾಗಿದೆ. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದ ಕಾರಣ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್; ಪೊಲೀಸ್ ಇಲಾಖೆ ಮಾನ ಹರಾಜು ಹಾಕಿದ ಹಿರಿಯ IPS ಅಧಿಕಾರಿ
ರಾಮಚಂದ್ರ ರಾವ್ ಫಸ್ಟ್ ರಿಯಾಕ್ಷನ್
ವಿಡಿಯೋ ವೈರಲ್ ವಿಚಾರ ಸಂಬಂಧ ಡಿಜಿಪಿ ಡಾ.ರಾಮಚಂದ್ರ ರಾವ್ ಪ್ರತಿಕ್ರಿಯೆ ನೀಡಿದ್ದು, ಇದು ಹಳೆಯ ವಿಡಿಯೋ ಎಂದಿದ್ದಾರೆ. ಈ ಕಾಲದಲ್ಲಿ ಏನು ಬೇಕಾದರೂ ಮಾಡುವ ಸಾಧ್ಯತೆ ಇದೆ. ಎಂಟು ವರ್ಷದ ಹಿಂದೆ ನಾನು ಬೆಳಗಾವಿಯಲ್ಲಿದ್ದೆ. ಇದರ ಬಗ್ಗೆ ನಾನು ವಕೀಲರ ಜೊತೆಗೆ ಮಾತನಾಡುತ್ತೇನೆ. ಈ ಬಗ್ಗೆ ತನಿಖೆ ಆಗಬೇಕು ಎಂದು ತಿಳಿಸಿದ್ದಾರೆ. ಘಟನೆ ಕುರಿತು ಗೃಹ ಸಚಿವರಿಗೆ ಮಾಹಿತಿ ನೀಡಲು ಬಂದಿದ್ದೆ ಎಂದು ಪರಮೇಶ್ವರ್ ನಿವಾಸದ ಬಳಿ ಡಿಜಿಪಿ ಡಾ.ರಾಮಚಂದ್ರ ರಾವ್ ತಿಳಿಸಿದ್ದರು.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:17 pm, Mon, 19 January 26
