ಕಾರವಾರ: ಉತ್ತರ ಕನ್ನಡ ಜಿಲ್ಲೆ ಬಹುತೇಕ ರಸ್ತೆಗಳಲ್ಲಿ ಬಿಡಾಡಿ ದನಗಳದ್ದೆ ಹಾವಳಿಯಾಗಿಬಿಟ್ಟಿದೆ. ಇವುಗಳ ಹಾವಳಿಯಿಂದಾಗಿ ವಾಹನ ಸವಾರರು ಜೀವ ಭಯದಲ್ಲಿ ವಾಹನಗಳನ್ನು ಚಾಲನೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದನಗಳು ರಾತ್ರಿ ಹಾಗೂ ಹಗಲಿನಲ್ಲಿ ರಸ್ತೆಯ ಮೇಲೆಯೇ ಇರುವುದರಿಂದ ಅಪಘಾತಗಳು ಕೂಡ ಸಂಭವಿಸಿ ವಾಹನ ಸವಾರರು ಗಾಯಗೊಂಡು, ಜಾನುವಾರುಗಳು ಸಾವನಪ್ಪಿರುವ ಘಟನೆಗಳು ಜರುಗಿವೆ. ಹೀಗಾಗಿ ರಸ್ತೆಗಳ ಅಪಘಾತಗಳ ಸಂಖ್ಯೆ ಏರಿಕೆಯಾಗುವುದಕ್ಕೆ ಬಿಡಾಡಿ ದನಗಳು ಒಂದು ರೀತಿ ಕಾರಣವಾಗಿವೆ. ಇದರಿಂದ ಬೇಸತ್ತ ಜನ ಬಿಡಾಡಿ ದನಗಳನ್ನು ಗೋ ಶಾಲೆ ಮಾಡುವುದರ ಮೂಲಕ ಅವುಗಳನ್ನು ಒಂದೆಡೆ ಕಟ್ಟಿ ಹಾಕುವಂತೆ ಮಾಡಿ ಪೋಷಣೆ ಮಾಡಬೇಕು ಮತ್ತು ಒಂದು ವೇಳೆ ಹಸುಗಳು ಯಾರಿಗಾದರು ಸಂಭಂದ ಪಟ್ಟಿದ್ದಾದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.
ಜಿಲ್ಲೆಯ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 52, ಶಿರಸಿ – ಕುಮಟಾ NH766E, ಭಟ್ಕಳ-ಕಾರವಾರ NH66 ಸೇರಿದಂತೆ ಹಲವು ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಇದೆ. ಹೀಗಾಗಿ ಸವಾರರ ತಮ್ಮ ಜೀವ ಕೈಯಲ್ಲಿ ಹಿಡಿದೆ ಸಂಚಾರ ಮಾಡಬೇಕು. ಇನ್ನೂ ಗ್ರಾಮೀಣ ಪ್ರದೇಶದಿಂದ ದ್ವಿಚಕ್ರ ವಾಹನಗಳಲ್ಲಿ ಪಟ್ಟಣಕ್ಕೆ ಬಂದು ವಾಹನಗಳಲ್ಲಿ ಹಣ್ಣು ಇತ್ಯಾದಿಗಳನ್ನು ಇಟ್ಟು ಹೋಗಿ ಬರುವಷ್ಟರಲ್ಲಿ ಬಿಡಾಡಿ ದನಗಳ ಪಾಲಾಗಿ ಬೀಡುತ್ತಿವೆ. ಅಲ್ಲದೆ ವಾಹನಗಳು ಬರುತ್ತಿರುವಾಗ ದನಗಳು ಅಡ್ಡ ಹೋಗಿ ಕೆಲವೊಂದು ಸಂದರ್ಭಗಳಲ್ಲಿ ಅಪಘಾತಗಳು ಸಂಭವಿಸಿ ಸವಾರರು ಗಾಯಗೊಂಡಿರುವ ಮತ್ತು ಸಾವನ್ನಪ್ಪಿರುವ ಘಟನೆಗಳು ಸಹ ಜರುಗಿವೆ. ಹೀಗಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಜನರು ಒತ್ತಾಯಿಸುತ್ತಿದ್ದಾರೆ.
ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆದ್ದಾರಿಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು. ಇದರಿಂದ ವಾಹನ ಸವಾರರು ನಿತ್ಯ ಜೀವ ಭಯದಲ್ಲಿ ಸಂಚಾರ ಮಾಡುವಂತಾಗಿದೆ. ಇನ್ನಾದರು ಸಂಭಂದಿಸಿದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೇ ಎಂಬುವುದನ್ನ ಕಾದು ನೋಡಬೇಕಿದೆ.
ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:57 am, Sat, 29 October 22