ಬೆಂಗಳೂರು: ಕೊಚ್ಚಿ-ಮಂಗಳೂರು ನಡುವಣ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ.
ನಾಳೆ ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಅವರಿಂದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಒಂದು ರಾಷ್ಟ್ರ, ಒಂದು ಅನಿಲ ಗ್ರಿಡ್ ಸ್ಥಾಪನೆಗೆ ಈ ಯೋಜನೆ ಮೈಲಿಗಲ್ಲು ಎಂದು ಪ್ರಧಾನಿ ಕಾರ್ಯಾಲಯ ಅಭಿಪ್ರಾಯಪಟ್ಟಿದೆ. ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೇರಳ ಸಿಎಂ ಪಿಣರಾಯಿ ವಿಜಯನ್, ಎರಡೂ ರಾಜ್ಯಗಳ ರಾಜ್ಯಪಾಲರು, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಾಮರ್ಥ್ಯ ಎಷ್ಟು?
450 ಕಿ.ಮೀ ಉದ್ದದ ಪೈಪ್ ಲೈನ್ ಅನ್ನು ಗೈಲ್ (ಇಂಡಿಯಾ) ನಿರ್ಮಾಣ ಮಾಡಿದೆ. ದಿನಕ್ಕೆ 12 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಘನ ಮೀಟರ್ ತೈಲ ಕೊಂಡೊಯ್ಯುವ ಸಾಮರ್ಥ್ಯ ಇದಕ್ಕೆ ಇದೆ. ಕೊಚ್ಚಿಯಿಂದ ಮಂಗಳೂರಿಗೆ ಎಲ್ಪಿಜಿಯನ್ನು ದ್ರವ ರೂಪದಲ್ಲಿ ಸಾಗಿಸಲಾಗುತ್ತದೆ. ಈ ಪೈಪ್ಲೈನ್ ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಳಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಮೂಲ ಹಾದು ಹೋಗಿ ಮಂಗಳೂರನ್ನು ತಲುಪುತ್ತದೆ.
ವೆಚ್ಚ ಎಷ್ಟು?
ಈ ಬೃಹತ್ ಯೋಜನೆಗೆ ಕೇಂದ್ರ ಸರ್ಕಾರ ಬರೋಬ್ಬರಿ 3 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿದೆ. 12 ಲಕ್ಷ ಮಾನವ ದಿನಗಳ ಕೆಲಸ ಬಳಕೆ ಆಗಿದೆ. ಕೈಗಾರಿಕಾ ಮತ್ತು ಜನಸಾಮಾನ್ಯರಿಗೆ ಅಗ್ಗದ ಮತ್ತು ಉತ್ತಮ ಇಂಧನವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
7 ವರ್ಷ ವಿಳಂಬ
2009ರಲ್ಲಿ ಈ ಯೋಜನೆಗೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಒಪ್ಪಿಗೆ ನೀಡಿತ್ತು. 2014ರಲ್ಲಿ ಯೋಜನೆ ಪೂರ್ಣಗೊಳ್ಳಬೇಕಿತ್ತು. ಆದರೆ, ಆರು ವರ್ಷ ತಡವಾಗಿ ಯೋಜನೆ ಅಂತ್ಯಗೊಂಡಿದೆ. ಪೈಪ್ಲೈನ್ ನಿರ್ಮಾಣದ ವೇಳೆ ಸಾಕಷ್ಟು ಅಡೆ-ತಡೆ ಎದುರಾಗಿದ್ದು ಇದಕ್ಕೆ ಮುಖ್ಯ ಕಾರಣ. ಇನ್ನು, ಯೋಜನೆಯ ವೆಚ್ಚ ಅಂದುಕೊಂಡಿದ್ದಕ್ಕಿಂತ 85 ಕೋಟಿ ಹೆಚ್ಚುವರಿಯಾಗಿ ಖರ್ಚಾಗಿದೆ.
ಮಂಗಳೂರು-ಬೆಂಗಳೂರು ಶಿರಾಡಿ ಸುರಂಗ ಮಾರ್ಗಕ್ಕೆ ಯೋಜನೆ ಸಿದ್ಧ: ನಿತಿನ್ ಗಡ್ಕರಿ