ಕೊಡಗು: ಬೆಟ್ಟ ಗುಡ್ಡಗಳಿಂದಲೇ ಕೂಡಿರುವ ಕೊಡಗು ಜಿಲ್ಲೆಯಲ್ಲಿ ಮೊಬೈಲ್ ನೆಟ್ವರ್ಕ್ ಇನ್ನು ಕೂಡ ಕನಸಿನಮಾತೇ ಆಗಿದೆ. ಕೇವಲ ಪಟ್ಟಣ ಪ್ರದೇಶಗಳಲ್ಲಿ ಮಾತ್ರ ನೆಟ್ವರ್ಕ್ ಸಿಗುತ್ತದೆ ಬಿಟ್ಟರೆ, ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಿಗುವುದೇ ಇಲ್ಲ. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೆಟ್ವರ್ಕ್ ಇಲ್ಲದೆ ಪರದಾಡುವಂತಾಗಿದೆ. ಅದರಲ್ಲೂ ಕೊರೊನಾ ಪ್ರಾರಂಭವಾದ ದಿನದಿಂದ ಆನ್ಲೈನ್ ತರಗತಿ ಪ್ರಾರಂಭವಾಗಿದ್ದು, ಮಕ್ಕಳು ಪಾಠ ಕೇಳುವುದಕ್ಕಾಗಿ ಮರ ಹತ್ತಿರುವುದು ಮತ್ತು ಪಾಠದಿಂದ ವಂಚಿತರಾಗಿರುವ ಬಗ್ಗೆ ನಾವು ಓದಿದ್ದೇವೆ. ಎಷ್ಟೋ ಗ್ರಾಮಗಳಲ್ಲಿ ಆನ್ಲೈನ್ ಕ್ಲಾಸ್ಗಳೇ ನಡೆಯುತ್ತಿಲ್ಲ. ಶಿಕ್ಷಕರು ಕೂಡ ಕೈಚೆಲ್ಲಿ ಕುಳಿತಿದ್ದಾರೆ. ಆದರೆ ಕೊಡಗು ಜಿಲ್ಲೆಯಲ್ಲಿನ ಶಿಕ್ಷಕರೊಬ್ಬರು ನೆಟ್ವರ್ಕ್ಗಾಗಿ ಹೊಸದಾರಿ ಕಂಡುಕೊಂಡಿದ್ದು, ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.
ಸೋಮವಾರಪೇಟೆ ತಾಲ್ಲೂಕಿನ ಮಳ್ಳೂರು ಗ್ರಾಮದ ಶಿಕ್ಷಕ ಸಿ.ಎಸ್ ಸತೀಶ್ ನೆಟ್ವರ್ಕ್ಗಾಗಿಯೇ 20 ಅಡಿ ಎತ್ತರದ ಅಟ್ಟಣಿಗೆ ನಿರ್ಮಿಸಿಕೊಂಡಿದ್ದಾರೆ. ಬಿದಿರು, ಮತ್ತು ಇನ್ನಿತರ ಜಾತಿಯ ಮರಗಳನ್ನು ಬಳಸಿ ಆಕರ್ಷಕ ಅಟ್ಟಣಿಗೆ ನಿರ್ಮಾಣ ಮಾಡಿದ್ದು, ಅಟ್ಟಣಿಗೆಯಲ್ಲಿ ಆನ್ಲೈನ್ ಕ್ಲಾಸ್ ನಡೆಸಲು ಬೇಕಾದ, ಸ್ಟ್ಯಾಂಡ್, ಕಪ್ಪು ಬೋರ್ಡ್ಗಳನ್ನು ಅಳವಡಿಸಿಕೊಂಡಿದ್ದಾರೆ. ಮಕ್ಕಳಿಗೆ ಪಾಠದ ಜೊತೆ ಯೋಗಾಸನ, ಕಥೆ, ಕವನ, ಸಾಂಸ್ಕೃತಿಕ ಚಟುವಟಿಕೆಗಳನ್ನೂ ಹೇಳಿಕೊಡುತ್ತಿದ್ದಾರೆ.
37 ವರ್ಷದ ಸತೀಶ್ ಮುಲ್ಲೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದು, 20 ಅಡಿ ಎತ್ತರದ ಅಟ್ಟಣಿಗೆ ನಿರ್ಮಿಸಲು 2 ತಿಂಗಳು ತೆಗೆದುಕೊಂಡಿದ್ದಾರೆ. ಈ ಅಟ್ಟಣಿಗೆ ತಯಾರಿಸಲು 10000ರೂಪಾಯಿ ಖರ್ಚಾಗಿದೆ. ಈ ಅಟ್ಟಣಿಗೆಯಲ್ಲಿ ವಿದ್ಯುತ್ ವ್ಯವಸ್ಥೆ ಕೂಡ ಇದೆ. ಅಟ್ಟಣಿಗೆಗೆ ಅಗತ್ಯವಿರುವ ಬಿದಿರು, ಹುಲ್ಲು, ಗೋಣಿ ಚೀಲಗಳನ್ನು ಸ್ನೇಹಿತರು ನೀಡಿ ಸಹಾಯ ನೀಡಿದ್ದಾರೆ ಎಂದು ಶಿಕ್ಷಕ ಸತೀಶ್ ತಿಳಿಸಿದ್ದಾರೆ.
ನಮ್ಮ ಶಿಕ್ಷಕರ ಈ ಅದ್ಭುತ ಕಾರ್ಯದಿಂದ ನಾವು ಒಂದೇ ಒಂದು ಕ್ಲಾಸ್ ಅನ್ನು ಕೂಡ ತಪ್ಪಿಸಿಕೊಂಡಿಲ್ಲ. ನಿಜಕ್ಕೂ ಇದು ನಮ್ಮ ಕಲಿಕೆಗೆ ಸಹಾಯವಾಗುತ್ತಿದೆ ಎಂದು ನಾಲ್ಕನೆ ತರಗತಿ ವಿದ್ಯಾರ್ಥಿ ಪುನ್ಯಾ ಹೇಳಿದ್ದಾರೆ.
ಬಹಳಷ್ಟು ಶಿಕ್ಷಕರು ನೆಟ್ವರ್ಕ್ ಸಮಸ್ಯೆ ಇದೆ ಎನ್ನುವ ಕಾರಣಕ್ಕೆ ಆನ್ಲೈನ್ ತರಗತಿಗಳನ್ನೇ ಮಾಡುವುದಿಲ್ಲ. ಆದರೆ ಸತೀಶ್ ಅವರು ಈ ಹೊಸ ಪ್ರಯತ್ನದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಸತೀಶ್ ಅವರ ಅಟ್ಟಣಿಗೆ ಕ್ಲಾಸ್ ಇದೀಗ ಜಿಲ್ಲೆಯಲ್ಲಿ ಮನೆ ಮಾತಾಗಿದೆ.
ಶಿಕ್ಷಣ ಇಲಾಖೆ ಆದೇಶವಿಲ್ಲದೆ ಪ್ರಥಮ ಪಿಯು ದಾಖಲಾತಿ ಮಾಡುವಂತಿಲ್ಲ; ಆನ್ಲೈನ್ ತರಗತಿ ನಡೆಸುವಂತಿಲ್ಲ