ಕೊಡಗಿನಲ್ಲಿ ಎರಡಂತಸ್ಥಿನ ಕಟ್ಟಡ ಕುಸಿತ; ಆಶ್ಚರ್ಯಕರ ರೀತಿಯಲ್ಲಿ ಪಾರಾಗಿ ಬಂದ ನಾಲ್ವರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 20, 2024 | 8:42 PM

ಪೊನ್ನಂಪೇಟೆ (Ponnampet) ತಾಲ್ಲೂಕಿನ ಗೋಣಿಕೊಪ್ಪಲು ಪಟ್ಟಣದಲ್ಲಿ ಇಂದು(ಗುರುವಾರ) ಮಧ್ಯಾಹ್ನದ ವೇಳೆ ಎರಡಂತಸ್ಥಿನ ಕಟ್ಟಡ ಕುಸಿದು(Building Collapse) ಬಿದ್ದಿತ್ತು. ಏಕಾಏಕಿ ಕುಸಿದ ಎರಡಂತಸ್ಥಿನ ಕಟ್ಟಡದ ಒಳಗಿಂದ ನಾಲ್ವರು ಯಾವುದೇ ಅಪಾಯವಿಲ್ಲದೆ ಪಾರಾಗಿ ಬಂದಿದ್ದಾರೆ.

ಕೊಡಗಿನಲ್ಲಿ ಎರಡಂತಸ್ಥಿನ ಕಟ್ಟಡ ಕುಸಿತ; ಆಶ್ಚರ್ಯಕರ ರೀತಿಯಲ್ಲಿ ಪಾರಾಗಿ ಬಂದ ನಾಲ್ವರು
ಕೊಡಗಿನಲ್ಲಿ ಎರಡಂತಸ್ಥಿನ ಕಟ್ಟಡ ಕುಸಿತ; ಆಶ್ಚರ್ಯಕರ ರೀತಿಯಲ್ಲಿ ಪಾರಾಗಿ ಬಂದ ನಾಲ್ವರು
Follow us on

ಕೊಡಗು, ಜೂನ್ 20: ಅದೃಷ್ಟ ಚೆನ್ನಾಗಿದ್ದರೆ ಎಂತಹ ಪರಿಸ್ಥಿತಿಯಲ್ಲೂ ಕೆಲವರು ಸಾವಿನ ಬಾಯಿಯಿಂದ ಬಚಾವ್ ಆಗಿ ಹೊರ ಬರುತ್ತಾರೆ. ಇದಕ್ಕೆ ಉದಾಹರಣೆ ಕೊಡಗು ಜಿಲ್ಲೆಯಲ್ಲಿ ನಡೆದ ಈ ಒಂದು ದುರಂತ. ಹೌದು, ಪೊನ್ನಂಪೇಟೆ (Ponnampet) ತಾಲ್ಲೂಕಿನ ಗೋಣಿಕೊಪ್ಪಲು ಪಟ್ಟಣದಲ್ಲಿ ಇಂದು(ಗುರುವಾರ) ಮಧ್ಯಾಹ್ನದ ವೇಳೆ ಎರಡಂತಸ್ಥಿನ ಕಟ್ಟಡ ಕುಸಿದು(Building Collapse) ಬಿದ್ದಿತ್ತು. ಏಕಾಏಕಿ ಕುಸಿದ ಎರಡಂತಸ್ಥಿನ ಕಟ್ಟಡದ ಒಳಗಿಂದ ನಾಲ್ವರು ಯಾವುದೇ ಅಪಾಯವಿಲ್ಲದೆ ಪಾರಾಗಿ ಬಂದಿದ್ದಾರೆ.

ಈ ಕಟ್ಟಡದ ನೆಲ ಮಹಡಿಯಲ್ಲಿ ಒಂದು ಧಮ್ ಬಿರಿಯಾನಿ ಹೋಟೆಲ್ ಹಾಗೂ ಮಟನ್ ಅಂಗಡಿ ಇತ್ತು. ಇದು ಸುಮಾರು 75 ವರ್ಷಗಳಷ್ಟು ಹಳೆಯ ಕಟ್ಟಡ, ಮಳೆಯಿಂದ ನೆನೆದು ಶಿಥಿಲಾವಸ್ಥೆ ತಲುಪಿತ್ತು. ಹೋಟೆಲ್​ನ ಒಳಗೆ ನಾಲ್ವರು ಸಿಬ್ಬಂದಿ ಹಾಗೂ ಇಬ್ಬರು ಗ್ರಾಹಕರು ಇದ್ದರೆ, ಮಟನ್ ಅಂಗಡಿಯಲ್ಲೂ ಇಬ್ಬರು ವ್ಯಕ್ತಿಗಳಿದ್ದರು. ಮಧ್ಯಾಹ್ನ ಸುಮಾರು 2.30ರ ವೇಳೆಗೆ ಜೋರಾಗಿ ಶಬ್ಧ ಮಾಡುತ್ತಾ ಕಟ್ಟಡದ ಮೊದಲ ಮಹಡಿ ಮೊದಲು ಕುಸಿದಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಟ್ಟಡ ಕುಸಿತ, ಇಬ್ಬರು ಸಾವು, 17 ಮಂದಿಗೆ ಗಾಯ

ಈ ಸಂದರ್ಭ ಹೋಟೆಲ್​ ಒಳಗಿದ್ದವರು ಎದ್ದು ಬಿದ್ದು ಹೊರಗಡೆ ಓಡಿದ್ದಾರೆ. ನೋಡ ನೋಡುತ್ತಿದ್ದಂತೆ ಇಡೀ ಕಟ್ಟಡ ಕುಸಿದು ಬಿದ್ದಿದೆ. ಆರಂಭದಲ್ಲಿ ಹೋಟೆಲ್ ಒಳಗೆ ಎಷ್ಟು ಜನರಿದ್ದರು, ಎಷ್ಟು ಜನ ಹೊರಗೋಡಿ ಬಂದರು ಎಂಬುದು ಯಾರಿಗೂ ಸ್ಪಷ್ಟತೆ ಇರಲಿಲ್ಲ. ಕನಿಷ್ಟ 5ಕ್ಕೂ ಅಧಿಕ ಮಂದಿ ಒಳಗೆ ಸಿಲುಕಿದ್ದಾರೆ ಎಂದೇ ಭಾವಿಸಲಾಗಿತ್ತು. ಅಲ್ಲದೆ ಕಟ್ಟಡ ಕುಸಿದು ಬಿದ್ದಿರುವ ರೀತಿ ನೋಡಿದರೆ ಒಳಗಿದ್ದವರು ಬದುಕಿದ್ದಾರೆ ಇಲ್ಲವೋ ಎಂಬಷ್ಟು ಭಯಾನಕವಾಗಿತ್ತು ಎಂದು ಪ್ರತ್ಯಕ್ಷ ದರ್ಶಿ ಪ್ರಕಾಶ್ ಎಂಬುವವರು ಹೇಳುತ್ತಾರೆ.

ಕಟ್ಟಡ ಕುಸಿದ ಮಾಹಿತಿ ಪಡೆದ ಗೋಣಿಕೊಪ್ಪಲು ಅಗ್ನಿ ಶಾಮಕ ತಂಡ ತಕ್ಷಣವೇ ಅಲ್ಲಿಗೆ ದೌಡಾಯಿಸಿ, ಕಾರ್ಯಾಚರಣೆ ಶುರುಮಾಡಿದೆ. ಕೆಲ ಹೊತ್ತಿನಲ್ಲಿಯೇ ಮಡಿಕೇರಿಯಿಂದ ಹೆಚ್ಚುವರಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಎನ್​ಡಿಆರ್​ಎಫ್ ಸಿಬ್ಬಂದಿ
ಬಂದಿದೆ. ಹಿಟಾಚಿ ಯಂತ್ರ ಬಳಸಿ ಅವಶೇಷಗಳನ್ನ ತೆರವು ಮಾಡುತ್ತಾ ಸಾಗುತ್ತಿದ್ದಂತೆ ಓರ್ವ ವ್ಯಕ್ತಿ ಅಲ್ಲಿ ಸಿಲುಕಿರುವುದು ಗೋಚರಿಸಿದೆ. ಈತನನ್ನ ಹೋಟೆಲ್ ಊಟಕ್ಕೆ ಬಂದಿದ್ದ ಮಧು ಎಂದು ಗುರುತಿಸಲಾಗಿದೆ. ಈತನ ಕಾಲಿನ ಮೇಲೆ ಅವಶೇಷಗಳು ಬಿದ್ದಿದ್ದ ಹಿನ್ನೆಲೆಯಲ್ಲಿ ಗಂಭೀರ ಗಾಯವಾಗಿತ್ತು. ತಕ್ಷಣವೇ ಇತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮೈಸೂರು ಆಸ್ಪತ್ರೆಗೆ ರವಾನಿಸಲಾಯಿತು.

ಇದನ್ನೂ ಓದಿ: ದೆಹಲಿಯಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿತ, ಇಬ್ಬರು ಸಾವು

ಇತನನ್ನ ರಕ್ಷಣೆ ಮಾಡಿದಾಗ ಒಳಗೆ ಇನ್ನೂ ಇಬ್ಬರು ಇದ್ದಾರೆ ಎಂದು ಕೈ ಸನ್ನೆ ಮಾಡಿದ್ದರು. ಹಾಗಾಗಿ ಮತ್ತೆ ಕಾರ್ಯಾಚರಣೆ ಮುಂದುವರಿಸಲಾಯಿತು. ಆದ್ರೆ, ಸತತ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿದರೂ ಒಳಗೆ ಯಾರೂ ಪತ್ತೆಯಾಗಲಿಲ್ಲ. ಹಾಗಾಗಿ ಗೊಂದಲದಲ್ಲಿ ಗಾಯಾಳು ಮಧು ಒಳಗೆ ಜನರಿದ್ದಾರೆ ಎಂದು ತಿಳಿಸಿದ್ದ ಎಂಬುದು ಸ್ಪಷ್ಟವಾಯಿತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು ಎಂದು ಅಗ್ನಿಶಾಮಕ ಅಧಿಕಾರಿ ಚಂದನ್ ತಿಳಿಸಿದ್ದಾರೆ.

ಕಟ್ಟಡ ಕುಸಿಯುವ ಸಂದರ್ಭ ಹೊರಗೋಡುವ ವೇಳೆ, ಹೋಟೆಲ್ ಮಾಲಿಕ, ತಿರುಮುರುಗನ್, ಅಲಮೇಲು, ನಾರಾಯಣ, ಮಹಾಲಿಂಗ ಹಾಗೂ ಗ್ರಾಹಕ ತಿಮ್ಮನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕಾರ್ಯಾಚರಣೆ ಸ್ಥಳಕ್ಕೆ ಸ್ವತಃ ಕೊಡಗು ಡಿಸಿ ಡಾ. ವೆಂಕಟರಾಜ, ಎಸ್ಪಿ ರಾಮರಾಜನ್ ಭೇಟಿ ನೀಡಿ ಕಾರ್ಯಾಚರಣೆ ಉಸ್ತುವಾರಿ ವಹಿಸಿದ್ದರು. ಘಟನೆ ನಡೆದಾಗ ಮಧ್ಯಾಹ್ನ ಸುಮಾರು 2.30 ರ ಸಮಯವಾದ್ದರಿಂದ ಆ ವೇಳೆಗಾಗಲೆ ಗ್ರಾಹಕರು ಊಟ ಮುಗಿಸಿ ತೆರಳಿದ್ದರು. ಒಂದು ವೇಳೆ ಇದೇ ಘಟನೆ ಒಂದು ಗಂಟೆ ಮೊದಲು ಸಂಭವಿಸಿದ್ದರೆ ಭಾರೀ ಅನಾಹುತವಾಗುತ್ತಿತ್ತು. ಈ ಸಮಯದಲ್ಲಿ ಕಾಲೇಜು ಮಕ್ಕಳು ಸೇರಿದಂತೆ ಹತ್ತಾರು ಮಂದಿ ಇಲ್ಲಿ ಊಟ ಮಾಡುತ್ತಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ