ಕೊಡಗು: ಬಿಜೆಪಿ ಕಾರ್ಯಕರ್ತರಿಂದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಹೊಸ್ಕೇರಿ ಗ್ರಾಮದಲ್ಲಿ ನಡೆದಿದೆ. ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಯಶ್ ದೋಲ್ಪಾಡಿ, ಖಜಾಂಚಿ ಚಂದನ್ಗೆ ಗಂಭೀರ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸೋದರರಾದ ಹೊಸ್ಕೇರಿ ಗ್ರಾ.ಪಂ. ಅಧ್ಯಕ್ಷ, ಬಿಜೆಪಿ ಕಾರ್ಯಕರ್ತ ಪ್ರಭುಶೇಖರ, ಆನಂದ್ ರಘು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವೀಂದ್ರರಿಂದ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ರಾಜಕೀಯ ದ್ವೇಷದ ಹಿನ್ನೆಲೆ ಸೋದರರು ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಸದ್ಯ ಮೂವರು ಸಹೋದರರಿಗಾಗಿ ಹುಡುಕಾಟ ನಡೆಸಿದ್ದು ತಲೆಮರೆಸಿಕೊಂಡಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಜಿಮ್‌ಗೆ ತೆರಳುತ್ತಿದ್ದಾಗ ಹೃದಯಾಘಾತವಾಗಿ ಯುವಕ ಸಾವು
ಧಾರವಾಡ: ಜಿಮ್‌ಗೆ ತೆರಳುತ್ತಿದ್ದಾಗ ತೀವ್ರ ಹೃದಯಾಘಾತದಿಂದ ಯುವಕ ಸಾವನ್ನಪ್ಪಿರುವಂತಹ ಘಟನೆ ನಗರದ ಸವದತ್ತಿ ರಸ್ತೆಯ ಪಾಟೀಲ್ ಜಿಮ್ ಎದುರಿಗೆ ನಡೆದಿದೆ. ರಸ್ತೆಯಲ್ಲಿ ಬೀಳುತ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಧಾರವಾಡ ತಾಲೂಕಿನ ಗರಗ್ ಗ್ರಾಮದ ಸಂಗಪ್ಪ ಬಳಿಗೇರ (28) ಮೃತ ಯುವಕ. ಜ್ಯೋತಿ ತಾಲೀಮಿನ ಸಂಗಪ್ಪ ಪೈಲ್ವಾನ್ ಆಗಿದ್ದ. ಇಂದು ಜಿಮ್‌ಗೆ ಬರುವಾಗ ತೀವ್ರ ಹೃದಯಾಘಾತವಾಗಿ ಒಮ್ಮೆಲೇ ರಸ್ತೆಯಲ್ಲಿ ಬಿದಿದ್ದು, ಸ್ಥಳದಲ್ಲಿಯೇ ಸಂಗಪ್ಪ ಮೃತಪಟ್ಟಿದ್ದಾರೆ. ಉಪನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಕ್ಕಳ ಕಳ್ಳರ ಎಂದು ತಿಳಿದು ಮಾನಸಿಕ ಅಸ್ವಸ್ಥತನನ್ನು ಥಳಿಸಿದ ಜನ
ಹಾಸನ: ಹಾಸನ ಜಿಲ್ಲೆಗೂ ಮಕ್ಕಳ ಕಳ್ಳರ ವದಂತಿ ಕಾಲಿಟ್ಟಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಮಕ್ಕಳ ಕಳ್ಳ ಎಂದು ಭಾವಿಸಿ ಮಾನಸಿಕ ಅಸ್ವಸ್ಥತನ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಹಾಸನ ತಾಲ್ಲೂಕಿನ, ಅವ್ವೇರಹಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ಸಕಲೇಶಪುರ ಪಟ್ಟಣದಲ್ಲಿ ಹಲವು ತಿಂಗಳುಗಳಿಂದ ರಸ್ತೆ ಬದಿಯಲ್ಲಿ ಮಾನಸಿಕ ಅಸ್ವಸ್ಥ ವಾಸಿಸುತ್ತಿದ್ದ. ಮಕ್ಕಳ ಕಳ್ಳ ಎಂದು ಆತಂಕಗೊಂಡು ಮಾತು ಬಾರದ ಮಾನಸಿಕ ಅಸ್ವಸ್ಥತನನ್ನು ಹಿಡಿದು ಜನ ಥಳಿಸಿದ್ದಾರೆ. ಹಲ್ಲೆ ಮಾಡಿದವರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಪೆಟ್ರೋಲ್ ಕದಿಯುತ್ತಿದ್ದ ಕಳ್ಳನಿಂದ ವೃದ್ಧನ ಮೇಲೆ ಹಲ್ಲೆ
ಚಿತ್ರದುರ್ಗ: ಪೆಟ್ರೋಲ್ ಕಳ್ಳತನ ಕಂಡು ಕೂಗಿದ ವೃದ್ಧನ ಮೇಲೆ ಕಳ್ಳನಿಂದ ಹಲ್ಲೆ ಮಾಡಿರುವಂತಹ ಘಟನೆ ತಾಲೂಕಿನ ಹಳೇರಂಗಾಪುರದಲ್ಲಿ ನಡೆದಿದೆ. ಓಬಣ್ಣ ಹಲ್ಲೆಗೊಳಗಾದ ವೃದ್ಧ. ದಾವಣಗೆರೆ ಜಿಲ್ಲೆ ಮಾಯಕೊಂಡ ಗ್ರಾಮದ ಆರೋಪಿ ವಸಂತ್ ನಾಯ್ಕ್ ಚಾಕು ಇರಿದಿದ್ದಾನೆ. ಆರೋಪಿಯನ್ನು ಥಳಿಸಿ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ಓಬಣ್ಣ ಚಿತ್ರದುರ್ಗ ನಗರದಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮದ್ಯೆ ಮಾರಾಮಾರಿ ಕೇಸ್!
ಯಾದಗಿರಿ: ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮದ್ಯೆ ಮಾರಾಮಾರಿ ನಡೆದಿದ್ದು, ಎರಡು ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಯಾದಗಿರಿ ತಾಲೂಕಿನ ಸಾವೂರು ಗ್ರಾಮದಲ್ಲಿ ಅಡಿಗಲ್ಲು ಸಮಾರಂಭದಲ್ಲಿ ಬ್ಯಾನರ್ ವಿಚಾರಕ್ಕೆ ಘಟನೆ ನಡೆದಿದೆ. ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ್ ಹಾಗೂ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ ಸಮ್ಮುಖದಲ್ಲಿ ನಡೆದಿದ್ದ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಜೆಡಿಎಸ್ನ ಬಂದಪ್ಪಗೌಡ ಹಾಗೂ ಬಿಜೆಪಿಯ ಶಿವರಾಜ್ ಸೇರಿ ಇತರರ ಮೇಲೆ ಕೇಸ್ ಹಾಕಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.