ಮಡಿಕೇರಿ, ಜುಲೈ 4: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹರಗ, ಕುಂದಳ್ಳಿ, ಕೂತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂದಿಗೂ ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಟ ಜೀವಂತವಿದೆ. ಕಳೆದ ಹಲವು ವರ್ಷಗಳಿಂದ ಹಲವು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ತೀವ್ರ ಮಾನಸಿಕ ಯಾತನೆಗೆ ಒಳಗಾದ ಹಲವು ಕುಟುಂಬ ಊರೇಬಿಟ್ಟು ಹೋಗಿವೆ. ಇದು ಜಿಲ್ಲಾ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಯ ಕುಟುಂಬವನ್ನೇ ಬಿಟ್ಟಿಲ್ಲ.
2004ನೇ ಇಸವಿಯಲ್ಲಿ ಸುಗ್ಗಿ ಹಬ್ಬದ ಸಂದರ್ಭ ಕೆಳ ಜಾತಿಯವರು ಮಾಡಬೇಕಾಗಿದ್ದ ಕೆಲಸಗಳನ್ನು ಮಾಡಲು ನಿರಾಕರಿಸಿದ್ದಕ್ಕೆ ಕುಂದಳ್ಳಿ ಗ್ರಾಮದ ಬಿಕೆ ರವಿ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ಇವರು ಕೊಡಗು ಜಿಲ್ಲಾ ಪಂಚಾಯತ್ನಲ್ಲಿ ವಿಕೇಂದ್ರಿತ ತರಬೇತಿ ಸಂಯೋಜಕ ಅಧಿಕಾರಿಯಾಗಿದ್ದಾರೆ. ಇವರಿಗೇ ಹೀಗೆ ಬಹಿಷ್ಕಾರ ಹಾಕಿರುವಾಗ ಇನ್ನು ಜನ ಸಾಮಾನ್ಯರ ಪಾಡೇನು ಎಂಬುದು ಸಂತ್ರಸ್ತರ ಪ್ರಶ್ನೆಯಾಗಿದೆ.
ನಮ್ಮ ಮನೆಯವರೊಂದಿಗೆ ಯಾರೂ ಮಾತನಾಡುವುದಿಲ್ಲ. ತಾಯಿ ಮೃತರಾಗಿದ್ದಾಗಲೂ ಯಾರೂ ಬಂದಿರಲಿಲ್ಲ. ಸಹೋದರರ ವಿವಾಹವಾದಗಲೂ ಕೂಡ ಯಾರೂ ಬಂದಿರಲಿಲ್ಲ. ನಾವು ಕೂಡ ಯಾರ ಕಾರ್ಯಕ್ರಮಗಳಿಗೂ ಹೋಗುವಂತಿಲ್ಲ ಎಂದು ಬಿಕೆ ರವಿ ‘ಟಿವಿ9’ಗೆ ತಿಳಿಸಿದ್ದಾರೆ.
ಅತ್ತ ಹರಗ ಗ್ರಾಮದಲ್ಲೂ ಇಬ್ಬರ ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ. ಇದರಲ್ಲಿ ರುದ್ರಪ್ಪ ಎಂಬುವರ ಮಗ 2004ರಲ್ಲಿ ಊರಿನ ದೇವಸ್ಥಾನ ಪ್ರವೇಶಿಸುತ್ತಾನೆ. ಕೆಳವರ್ಗದವರಾಗಿ ದೇವಸ್ಥಾನ ಪ್ರವೇಶಿಸಿದ್ದು ಮಹಾದಪರಾಧ ಎಂದು ಬಿಂಬಿಸಿದ ಗ್ರಾಮ ಸಮಿತಿ ಅಂದಿನಿಂದಲೂ ಬಹಿಷ್ಕಾರದ ಶಿಕ್ಷೆಗೆ ಗುರಿಯಾಗಿಸಿದೆ. ಉರಿನಲ್ಲಿ ತೀವ್ರ ಮಾನಸಿಕ ಹಿಂಸೆ ಅನುಭವಿಸಿದ ಈ ಕುಟುಂಬ ಕೆಲ ವರ್ಷಗಳ ನಂತರ ಊರನ್ನೇ ಬಿಟ್ಟು ಬೇರೆ ಊರಿನಲ್ಲಿ ಹೋಗಿ ನೆಲೆಸಿದೆ. ಇಂದಿಗೂ ಆ ಊರಿನ ಮಂದಿಗೆ ಇವರನ್ನ ಕಂಡರೆ ಅಷ್ಟಕಷ್ಟೆ.
ಹರಗ ಗ್ರಾಮದ ಗಿರೀಶ್ ಎಂಬವರ ಕುಟುಂಬ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿತ್ತು. ಇದು ಬಳಿಕ ಅರಣ್ಯ ಇಲಾಖೆಯಲ್ಲಿ ಕೇಸ್ ಆಗಿ ಪ್ರಕರಣವೂ ಇತ್ಯರ್ಥವಾಗಿತ್ತು. ಆದ್ರೆ ಗ್ರಾಮ ಸಮಿತಿ ಮಾತ್ರ ಗಿರೀಶ್ಗೆ 80 ಸಾವಿರ ರೂ ದಂಡ ವಿಧಿಸಿದೆ. ಪ್ರಕರಣ ಇತ್ಯರ್ಥವಾಗಿರೋದ್ರಿಂದ ದಂಡ ಕಟ್ಟುವುದಿಲ್ಲ ಎಂದಿದ್ದಕ್ಕೆ ಈ ಕುಟುಂಬಕ್ಕೆ ಬಹಿಷ್ಕಾರ ಶಿಕ್ಷೆ ವಿಧಿಸಲಾಗಿದೆ.
ಇದನ್ನೂ ಓದಿ: ಪ್ರತಿ ಮಳೆಗಾಲದಲ್ಲಿ ಇಲ್ಲಿನ ಜನರ ಬದುಕು ಮೂರಾ ಬಟ್ಟೆ: ಇದು ಕೊಡಗಿನ ಕುಗ್ರಾಮವೊಂದರ ಕಣ್ಣಿರಿನ ಕಥೆ
ಈ ಎರಡೂ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗೆ ದುರು ನಿಡಲಾಗಿದೆ. ಅದರಂತೆ ತಹಶೀಲ್ದಾರ್ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ಕೊಟ್ಟು ಬಮದರೂ ಕೂಡ ಏನೂ ಪ್ರಯೋಜನವಾಗಿಲ್ಲ. ಇಂದಿಗೂ ಬಹಿಷ್ಕಾರ ಮುಂದುವರಿದಿದೆ. ಬಹಿಷ್ಕಾರಕ್ಕೆ ಒಳಗಾದವರೂ ದಾರಿಕಾಣದೆ ಕೈಚೆಲ್ಲಿದ್ದಾರೆ. ಕೊಡಗು ಜಿಲ್ಲೆಯನ್ನು ಅತ್ಯಂತ ಮುಂದುವರಿದ ಜಿಲ್ಲೆ ಎನ್ನಲಾಗುತ್ತದೆ. ಆದರೆ ಸೋಮವಾರಪೇಟೆ ಭಾಗದಲ್ಲಿ ಈ ಅನಿಷ್ಟ ಮುಂದುವರಿದಿರುವುದು ಜಿಲ್ಲೆಗೇ ಅವಮಾನವಾದಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:42 am, Thu, 4 July 24