ಆ ಹೋರಿ ಅಂದ್ರೆ ಆ ಮನೆಯವರಿಗೆ ಅಚ್ಚುಮೆಚ್ಚು.. ಅದ್ರಲ್ಲೂ ಆ ಮನೆಯ ಯಜಮಾನಿಗೆ ಇನ್ನಿಲ್ಲದ ಪ್ರೀತಿ. ಮನೆ ಮಗನಂತೆ ಸಾಕಿದ್ದ ಆ ಹೋರಿಯನ್ನ ಹುಲಿಯೊಂದು ಕೊಂದು ಬೇಟೆಯಾಡಿದೆ. ಇದೀಗ ಆ ಮನೆ ಯಜಮಾನಿ ಮಗನಂತಿದ್ದ ಹೋರಿಯನ್ನ ಕಳೆದುಕೊಂಡು ನಿತ್ಯ ಕಣ್ಣೀರು ಹಾಕುತ್ತಿದ್ದಾಳೆ. ಆ ಹೋರಿ ಜೊತೆ ಉಳಿದ ಎರಡು ಹಸುಗಳೂ ಹೆಬ್ಬುಲಿಯ ಪಾಲಾಗಿದ್ದು ಮನೆಯವರ ದುಖಃ ಇಮ್ಮಡಿಗೊಳಿಸಿದೆ.
ಕೊಡಗು ಜಿಲ್ಲೆಯಲ್ಲಿ ಹುಲಿಗಳು ತಂದೊಡ್ಡಿರುವ ಹಾವಳಿ ಅಷ್ಟಿಷ್ಟಲ್ಲ.. ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ಹುಲಿಗಳು ನಾಡಿನತ್ತ ಆಗಮಿಸಿ ದಾಂಧಲೆ ನಡೆಸುತ್ತಿವೆ. ಕಾಡಿನಲ್ಲಿ ಆಹಾರದ ಕೊರತೆಯೋ ಏನೋ ನಾಡಿನತ್ತ ಆಗಮಿಸುವ ಅವು ಗದ್ದೆಬಯಲಲ್ಲಿ ಬಹಳ ಸುಲಭವಾಗಿ ಸಿಗುವ ದನಕರುಗಳನ್ನ ಬೇಟೆಯಾಡುತ್ತಿವೆ. ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಸಮೀಪದ ದೇವರಪುರದಲ್ಲಿ ಕಳೆದ ವಾರ ದಾಳಿ ನಡೆಸಿದ ಹೆಬ್ಬುಲಿಯೊಂದು ಒಂದೇ ದಿನ ಎರಡು ಹಸು ಹಾಗೂ ಒಂದು ಹೋರಿಯನ್ನ ಕೊಂದಿದೆ. ಗ್ರಾಮದ ಶಿವಕುಮಾರ್ ಹಾಗೂ ಅವರ ತಾಯಿ ಗಂಗಮ್ಮ ಎಂಬ ರೈತರಿಗೆ ಸೇರಿದ ಈ ಮೂರು ಗೋವುಗಳು ದಾರುಣ ಸಾವನ್ನಪ್ಪಿವೆ.
ಗಂಗಮ್ಮ ಈ ಮೂರು ಗೋವುಗಳನ್ನ ಬಹಳ ಅಕ್ಕರೆಯಿಂದ ಸಾಕಿ ಸಲಹಿದ್ದರು. ಅದ್ರಲ್ಲೂ ಹೋರಿಯಂತೂ ಮನೆ ಮಗನಂತಿತ್ತು. ಮನೆ ಒಳಗೇ ಬಂದು ಆಹಾರ ಸೇವಿಸುತ್ತಿತ್ತು. ಅಂತಹ ಮುಗ್ಧ ಹೋರಿಯನ್ನ ಚಂಡ ವ್ಯಾಘ್ರ ಬೇಟೆ ಯಾಡಿದೆ ಎಂದು ಗಂಗಮ್ಮ ಕಣ್ಣೀರಿಡುತ್ತಿದ್ದಾರೆ
ಸುಮಾರು ಎರಡು ಲಕ್ಷ ರೂ ವೆಚ್ಚದ ಈ ಮೂರೂ ಗೋವುಗಳನ್ನ ಇದೇ ಗದ್ದೆ ಬಯಲಿನಲ್ಲೇ ಕಟ್ಟಿ ಮೇಯಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಇಲ್ಲಿ ಹುಲಿದಾಳಿಯಾಗಿದ್ದು ಬಿಟ್ಟರೆ ಇತ್ತೀಚೆಗೆ ಇಲ್ಲಿ ಹುಲಿ ದಾಳಿಯಾಗಿರಲಿಲ್ಲ. ಆದ್ರೆ ಕಳೆದ ವಾರ ಅದೆಲ್ಲಿಂದ ಬಂತೋ ಗೊತ್ತಿಲ್ಲ ಈ ವ್ಯಾಘ್ರ ಒಂದೇ ಬಾರಿ ಎರಡು ಗೋವುಗಳನ್ನ ಕೊಂದು, ಮತ್ತೊಂದನ್ನು ಕೊಂದು ಹೊತ್ತೊಯ್ದು ತಿಂದು ಹಾಕಿದೆ.
ಇದ್ರಿಂದ ರೈತರಿಗೆ ಎರಡು ಲಕ್ಷ ರೂ ನಷ್ಟವಾಗಿದೆ. ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಏನೋ ಸಬೂಬು ಹೇಳಿ ಪರಿಹಾರ ನೀಡುವುದಾಗಿ ಹೇಳಿ ಹೋಗಿದೆ. ಒಂದು ವೇಳೆ ಪರಿಹಾರ ಕೊಟ್ಟರೂ ಅದು ಬಹಳ ಕಡಿಮೆ ಮೊತ್ತದ್ದಾಗಿರುತ್ತದೆ. ಹಾಗಾಗಿ ಇದೀಗ ಆದಾಯದ ಮೂಲವಾಗಿದ್ದ ತಮ್ಮ ಮೂರು ಗೋವುಗಳನ್ನ ಕಳೆದುಕೊಂಡು ಶಿವಕುಮಾರ್ ಕುಟುಂಬ ಕಣ್ಣಿರಿಡುತ್ತಿದೆ.
Also Read: ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶವಿತ್ತು, ಆದರೆ ಹಾಲಿ ಸರ್ಕಾರದ ಆ ನೀತಿ ಹೊಡೆತ ಕೊಟ್ಟಿದೆ!
ದಕ್ಷಿಣ ಕೊಡಗಿನಲ್ಲಿ ನಾಗರಹೊಳೆ ಅಭಯಾರಣ್ಯದಿಂದ 10-15 ಕಿಲೋ ಮೀಟರ್ ದೂರದಲ್ಲಿರುವ ಗ್ರಾಮಗಳೆಲ್ಲವೂ ಹುಲಿಬಾಧಿತ ಪ್ರದೇಶವಾಗಿವೆ. ಕಳೆದೊಂದು ವರ್ಷದಲ್ಲೇ 70ಕ್ಕೂ ಅಧಿಕ ಗೋವುಗಳು ಹುಲಿ ದಾಳಿಗೆ ಬಲಿಯಾಗಿವೆ. ಈ ಒಂದು ವರ್ಷದಲ್ಲೇ 10ಕ್ಕೂ ಅಧಿಕ ಹಸುಗಳು ಸಾವನ್ನಪ್ಪಿವೆ. ಈ ಹುಲಿಗಳು ಇನ್ನು ಯಾವಾಗ ಮನುಷ್ಯರ ಮೇಲೆ ದಾಳಿ ನಡೆಸ್ತವೋ ಅಂತ ಚಿಂತೆಗೀಡಾಗಿದ್ದಾರೆ. ಹುಲಿ ಹಾವಳಿ ನಿಯಂತ್ರಣಕ್ಕೆ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ