ಕೊಡಗು, ಮಾ.05: ವೇತನ ಪಾವತಿಗಾಗಿ ಆಗ್ರಹಿಸಿ ಕಳೆದ ವಾರದಿಂದ ಪ್ರಾರಂಭವಾಗಿ ಐದನೆಯ ದಿನಕ್ಕೆ ಕಾಲಿಟ್ಟ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರ ಧರಣಿಯ ಸ್ಥಳಕ್ಕೆ ಇಂದು(ಮಾ.05) ಕೊಡಗು ಮೈಸೂರು ಸಂಸದರಾದ ಪ್ರತಾಪ್ ಸಿಂಹ(Pratap Simha) ಭೇಟಿ ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ಕುಲಸಚಿವರ ಬಳಿ ಸಮಾಲೋಚನೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.
ಇಷ್ಟು ಮಾತ್ರವಲ್ಲದೆ ಸಮಸ್ಯೆ ಇಲ್ಲಿಯೇ ಪರಿಹಾರವಾಗದಿದ್ದರೆ ರಾಜ್ಯಪಾಲರ ಬಳಿ ಮಾತನಾಡುವೆ. ಯಾವುದಕ್ಕೂ ಪರಿಹಾರ ದೊರೆಯದೇ ಹೋದರೆ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಭವನದ ಮುಂದೆ ಅತಿಥಿ ಉಪನ್ಯಾಕರ ಜೊತೆಯಲ್ಲಿ ನಾನು ಸಹ ಧರಣಿಯಲ್ಲಿ ಭಾಗವಹಿಸುವುದಾಗಿ ಹೇಳಿದರು. ಈವರೆಗೆ ತಾನು ಮೈಸೂರು ವಿವಿ ಹಾಗೂ ಕರ್ನಾಟಕ ಮುಕ್ತ ವಿವಿ ಹಲವು ಹಗರಣಗಳ ವಿರುದ್ಧ ಹೋರಾಟವನ್ನು ಕೈಗೊಂಡಿದ್ದೇನೆ. ಸದರಿ ಕೊಡಗಿನ ಅತಿಥಿ ಉಪನ್ಯಾಸಕರ ಯೋಗಕ್ಷೇಮ ಕಾಪಾಡುವುದು ತನ್ನ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೋಳಾಟ
ಅತ್ತ ವಿವಿ ವಿರುದ್ಧ ಕ್ರಮಕ್ಕೂ ಸಂಸದ ಮುಂದಾಗಿದ್ದಾರೆ. ಸಧ್ಯ ಅತಂತ್ರರಾಗಿರುವ ಅತಿಥಿ ಉಪನ್ಯಾಸಕರಿಗೆ ನ್ಯಾಯ ಸಿಗುತ್ತಾ ಕಾದು ನೋಡಬೇಕಿದೆ. ಇನ್ನು ಅತಿಥಿ ಉಪನ್ಯಾಸಕರ ಧರಣಿ ಬೆಂಬಲಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಹರೀಶ್ ಆಚಾರ್ಯ ಅವರು ಕಾಲೇಜಿಗೆ ಭೇಟಿ ನೀಡಿ ಅತಿಥಿ ಉಪನ್ಯಾಸಕರಿಗೆ ಬೆಂಬಲ ಸೂಚಿಸಿದರು. ವೇತನ ದೊರಕುವವರೆಗೂ ಈ ಹೋರಾಟವು ಮುಂದುವರೆಯುತ್ತದೆ ಎಂಬ ಒಮ್ಮತದ ತೀರ್ಮಾನವನ್ನು ಅತಿಥಿ ಉಪನ್ಯಾಸಕರು ಮುಂದಿಟ್ಟರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:13 pm, Tue, 5 March 24