ಗುಜರಾತಿನಲ್ಲಿ ತೂಗು ಸೇತುವೆ ದುರಂತ ಎದುರಿಗೇ ಇದೆ. ಈ ಘಟನೆ ಬಳಿಕ ದೇಶದಲ್ಲಿ ಎಲ್ಲೆಲ್ಲಿ ತೂಗು ಸೇತುವೆಗಳಿವೆಯೋ ಎಲ್ಲಾ ಕಡೆ ಇನ್ನಿಲ್ಲದ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಕೊಡಗಿನ (Kodagu) ಪ್ರಸಿದ್ಧ ನಿಸರ್ಗಧಾಮದ ತೂಗು ಸೇತುವೆಯನ್ನ ಇದೀಗ ಮುಚ್ಚಲಾಗಿದೆ. ಆದ್ರೆ ನಿಸರ್ಗಧಾಮದ ಪ್ರವಾಸಿಗರನ್ನ ನೆಚ್ಚಿಕೊಂಡಿದ್ದ ವ್ಯಾಪಾರಸ್ಥರು (traders) ಪರದಾಡುವಂತಾಗಿದೆ.
ಇದೊಂದು ಆಹ್ಲಾದಕರ ನಿಸರ್ಗಧಾಮ… (Kaveri Nisargadhama Forest Park) ಇದು ಕೊಡಗಿನ ದಿ ಬೆಸ್ಟ್ ಪ್ರವಾಸೀತಾಣಗಳಲ್ಲಿ ಒಂದು. ನದಿ ದಾಟಿ ಅರಣ್ಯ ಪ್ರವೇಶಿಸುವಾಗ ಕಾಣ ಸಿಗುವ ಜಿಂಕೆಗಳು, ಬಿದಿರಿನ ತರಹೇವಾರಿ ಕಾಟೇಜ್ಗಳು ಕೊಡಗಿನ ಸಾಂಪ್ರದಾಯಿಕ ಕಲಾಕೃತಿಗಳು, ಪಕ್ಷಿ ಪಾರ್ಕ್ ಹೀಗೆ ಪ್ರವಾಸಿಗರಿಗೆ ಏನೆಲ್ಲಾ ಬೇಕೋ ಎಲ್ಲವೂ ಇದೆ ಅಲ್ಲಿ. ಆದರೆ… ಇಲ್ಲಿಗೆ ಹೋಗಬೇಕೆಂದರೆ ತೂಗು ಸೇತುವೆ (hanging bridge) ದಾಟಿ ಹೋಗಬೇಕು.
ಪ್ರತನಿತ್ಯ ಸಾವಿರಕ್ಕೂ ಅಧಿಕ ಮಂದಿ ಈ ತೂಗು ಸೇತುವೆ ದಾಟಿ ಹೋಗುತ್ತಾರೆ. ಆದ್ರೆ ಗುಜರಾತ್ ತೂಗು ಸೇತುವೆ ದುರಂತ ಬಳಿಕ ಇದೀಗ ದೇಶಾದ್ಯಂತ ಎಲ್ಲೆಲ್ಲಿ ತೂಗು ಸೇತುವೆಗಳಿವೆಯೋ ಎಲ್ಲಾ ಕಡೆ ಇನ್ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅದೇ ರೀತಿ ಇದೀಗ ನಿಸರ್ಗಧಾಮದ ತೂಗು ಸೇತುವೆಯನ್ನ ಪರಿಶೀಲಿಸಿರೋ ತಜ್ಞರ ತಂಡ ದುರಸ್ಥಿಗೆ ಸಲಹೆ ಮಾಡಿದೆ. ಹಾಗಾಗಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಈ ತೂಗು ಸೇತುವೆಯನ್ನ ಒಂದು ತಿಂಗಳ ಕಾಲ ಮುಚ್ಚಲಾಗಿದೆ. ಇದನ್ನು ಸಂಪೂರ್ಣ ದುರಸ್ಥಿಗೊಳಿಸಿದ ಬಳಿಕವೇ ತೆರೆಯಲು ಕೊಡಗು ಅರಣ್ಯ ಇಲಾಖೆ ತೀರ್ಮಾನಿಸಿದೆ ಎನ್ನುತ್ತಾರೆ ನಿಸರ್ಗಧಾಮ ವಿಭಾಗದ ಡಿಆರ್ಎಫ್ಒ ವಿಲಾಸ್.
ನಿಸರ್ಗಧಾಮಕ್ಕೆ ದಿನಕ್ಕೆ ಕನಿಷ್ಟ 1000 ಮಂದಿ ಪ್ರವಾಸಿಗರು ಭೇಟಿ ನೀಡ್ತಾರೆ. ಆದ್ರೆ ಇದೀಗ ತೂಗು ಸೇತುವೆ ಮುಚ್ಚಲಾಗಿರುವುದರಿಂದ ನಿಸರ್ಗಧಾಮಕ್ಕೆ ತೆರಳಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: T20 World Cup 2022: ಐಸಿಸಿ ಟಿ20 ವಿಶ್ವಕಪ್ ಸೆಮಿ ಫೈನಲ್ಗೆ ಅಂಪೈರ್ಗಳನ್ನು ಪ್ರಕಟಿಸಿದ ಐಸಿಸಿ: ಇಲ್ಲಿದೆ ಪಟ್ಟಿ
ಹಾಗಾಗಿ ಇಲ್ಲಿಗೆ ಪ್ರವಾಸಿಗರು ಆಗಮಿಸುವುದಿಲ್ಲ. ಒಂದು ಕಡೆ ಪ್ರವಾಸಿಗರಿಗೆ ನಿರಾಶೆಯಾದ್ರೆ ಮತ್ತೊಂದು ಕಡೆ ಇಲ್ಲಿನ ವ್ಯಾಪಾರಸ್ಥರಿಗೂ ನಿರಾಶೆ. ಇನ್ನು ಒಂದು ತಿಂಗಳು ಬಹಳ ನಷ್ಟ ಅನುಭವಿಸಬೇಕಾದ ಅನಿವಾರ್ಯತೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ತೂಗು ಸೇತುವೆ ಮುಚ್ಚಿದ್ದು ಒಳ್ಳೆಯದ್ದೇ, ಆದ್ರೆ ತೂಗು ಸೇತುವೆ ಆದಷ್ಟು ಬೇಗ ದುರಸ್ಥಿಗೊಳಿಸಿ ಅನುಕೂಲ ಮಾಡಿಕೊಂಡುವಂತೆ ವ್ಯಾಪಾರಸ್ಥರು ಕೋರಿದ್ದಾರೆ.
ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಅರಣ್ಯ ಇಲಾಖೆ ಒಳ್ಳೆಯ ಕ್ರಮವನ್ನೇ ಕೈಗೊಂಡಿದೆ. 1995ರಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆಗೆ ತುರ್ತು ಕಾಯಕಲ್ಪ ಬೇಕಾಗಿದೆ. ಯಾಕಂದ್ರೆ ನಿಸರ್ಗಧಾಮಕ್ಕೆ ತೆರಳಲು ಬೇರೆ ಮಾರ್ಗಗಳಿಲ್ಲ. ಕೊಡಗಿನಲ್ಲಿ ಇದೀಗ ಟೂರಿಸಂ ಸೀಸನ್ ಬೇರೆ ಶುರುವಾಗಿದೆ. ಈ ಟೈಮಲ್ಲೇ ತೂಗು ಸೇತುವೆ ಬಂದ್ ಆಗಿರುವುದು ಪ್ರವಾಸಿಗರಿಗೆ ಮತ್ತು ಅವರನ್ನ ನಂಬಿಕೊಂಡಿರುವ ವ್ಯಾಪಾರಸ್ಥರಿಗೆ ಅನಾನುಕೂಲವಾಗಿದೆ. ಹಾಗಾಗಿ ಆದಷ್ಟು ಬೇಗ ತೂಗು ಸೇತುವೆ ದುರಸ್ಥಿಗೊಳಿಸುವ ಅಗತ್ಯವಿದೆ. (ವರದಿ: ಗೋಪಾಲ್ ಸೋಮಯ್ಯ, ಟಿವಿ 9, ಕೊಡಗು)
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ