ಕೊಡಗು: ಜಿಲ್ಲೆಯಲ್ಲಿ ಇಂದು ಆಟಿ ಪಾಯಸ ಸವಿಯುವ ವಿಶೇಷ ದಿನ. ಅದರಲ್ಲೂ ಆಟಿ (ಮದ್ದು) ಸೊಪ್ಪು ಎಂದು ಕರೆಯಲ್ಪಡುವ ಔಷಧೀಯ ಗಿಡದ ರಸದಿಂದ ತಯಾರಿಸಿದ ಪಾಯಸವನ್ನು ಇಂದು (ಆಗಸ್ಟ್, 3) ಎಲ್ಲರ ಮನೆಯಲ್ಲಿಯೂ ಮಾಡಿ ಸವಿಯುವುದು ವಾಡಿಕೆ. ಕೊಡಗಿನಲ್ಲಿ ಸಾಕಷ್ಟು ಔಷಧೀಯ ಗುಣಗಳುಳ್ಳ ಸಸ್ಯ ಪ್ರಭೇದಗಳಿವೆ. ಅವುಗಳಲ್ಲಿ ಆಟಿ ಸೊಪ್ಪು ಪ್ರಮುಖವಾದದ್ದು, ಇನ್ನು ವೈಜ್ಞಾನಿಕವಾಗಿ ಜಸ್ಟೀಸಿಯ ವೈನಾಡೆನ್ನಿಸ್ ಎಂದು ಕರೆಯುವ ಈ ಸಸ್ಯ ಜಿಲ್ಲೆಯ ಕಾಡುಗಳು ಮಾತ್ರವಲ್ಲದೇ, ಕಾಫಿ ತೋಟದಲ್ಲೂ ಹೇರಳವಾಗಿ ಸಿಗುತ್ತದೆ.
ಆಟಿ ಸೊಪ್ಪಿನಿಂದ ತಯಾರಿಸಿದ ಪಾಯಸಕ್ಕೆ ಕಕ್ಕಡ ಪದಿನೆಟ್ಟ್ ಪಾಯಸ ಎಂದು ಕರೆಯುತ್ತಾರೆ. ಕಕ್ಕಡ ಎಂದರೇ ಆಟಿ ತಿಂಗಳು ಅಥವಾ ಕರ್ಕಾಟಕ ಮಾಸ ಎಂದು ಅರ್ಥ. ಮೂರಡಿಯಷ್ಟು ಎತ್ತರ ಬೆಳೆಯುವ ಈ ಗಿಡಕ್ಕೆ ಆಟಿ ತಿಂಗಳ ಮೊದಲ ದಿನದಿಂದ ನಾನಾ ಔಷಧೀಯ ಗುಣಗಳು ಸೇರುತ್ತವೆ. 18 ದಿನಗಳ ಕಾಲ ದಿನಕ್ಕೊಂದು ಔಷಧ ಗುಣ ಸೇರಿ 18ನೇ ದಿನ ಪರಿಮಳ ಬೀರುತ್ತದೆ. ಹೀಗಾಗಿ ಅಂದು ಆ ಗಿಡವನ್ನು ಬೇಯಿಸಿ ರಸ ತೆಗೆದರೆ ದೇಹದಲ್ಲಿನ ನಾನಾ ಕಾಯಿಲೆಗಳು ದೂರವಾಗುತ್ತದೆ ಎಂಬ ನಂಬಿಕೆ ಹಿರಿಯರಲ್ಲಿ ಇದೆ. ಅದು ಇಂದಿಗೂ ಹಾಗೆಯೇ ಮುಂದುವರಿದುಕೊಂಡು ಬಂದಿದೆ. ಕೆಂಬಣ್ಣದ ಈ ರಸದಲ್ಲಿ ಪಾಯಸ ಸೇರಿದಂತೆ ನಾನಾ ರೀತಿಯ ಖಾದ್ಯಗಳನ್ನು ಕೂಡ ತಯಾರಿಸುತ್ತಾರೆ.
ರುಚಿಕರವಾದ ಸಿಹಿ ಪಾಯಸ
ಆಟಿ ಗಿಡದ ರಸದಿಂದ ಪಾಯಸ ತಯಾರಿಸುತ್ತಾರೆ. ಅಕ್ಕಿಯಿಂದ ತಯಾರಿಸುವ ಪಾಯಸಕ್ಕೆ ಆಟಿ ರಸ, ನಂತರ ಅದಕ್ಕೆ ತೆಂಗಿನ ತುರಿ, ತುಪ್ಪ, ಜೇನು ಬೆರೆಸಿ ತಿನ್ನುತ್ತಾರೆ. ಈ ಪಾಯಸ ಸೇವಿಸಿದ ಬಳಿಕ ಮೂತ್ರ ಕೂಡ ಕೆಂಬಣ್ಣಕ್ಕೆ ತಿರುಗುತ್ತದೆ. ಮೂತ್ರ ಎಷ್ಟು ಕೆಂಪಾಗಿರುತ್ತದೆಯೋ ಅಷ್ಟು ಔಷಧೀಯ ಗುಣ ಗಿಡಕ್ಕೆ ಸೇರಿದೆ ಎಂದು ಅರ್ಥ.
ವಿವಿಧ ಅಡುಗೆ
ಸಾಮಾನ್ಯವಾಗಿ ಆಟಿ ಸೊಪ್ಪಿನ ರಸದಿಂದ ಕೊಡಗಿನಲ್ಲಿ ಪಾಯಸ ಮಾಡುತ್ತಾರೆ. ಆದರೆ ಇತ್ತಿಚೇಗೆ ಅದರಿಂದ ಹಲ್ವ, ಇಡ್ಲಿ, ತಟ್ಟೆ ಇಡ್ಲಿ ಮುಂತಾದ ಅಡುಗೆಯನ್ನು ತಯಾರಿಸುತ್ತಾರೆ. ಕೆಲವರು ಈ ರಸದಿಂದ ಅನ್ನವನ್ನು ಕೂಡ ಮಾಡುತ್ತಾರೆ. ಇನ್ನೂ ಹಲವರು ಆಟಿ ರಸವನ್ನು ಜ್ಯೂಸ್ ರೀತಿಯಲ್ಲೂ ಸೇವಿಸುತ್ತಾರೆ. ಅಷ್ಟಕ್ಕೂ ಈ ರಸ ಸಿಹಿಯಾಗಿ ಇರುವುದಿಲ್ಲ. ಹಾಗಾಗಿ ಬಿಳಿ ಬೆಲ್ಲ, ಸಕ್ಕರೆ ಸೇರಿಸಿ ಇದನ್ನು ಸವಿಯಲಾಗುತ್ತದೆ.
ಪಾಯಸದ ನಂತರ ಕೋಳಿ ಊಟ
ಆಟಿ ಪಾಯಸ ಸೇವಿಸಿದ ಮರು ದಿನ ಆಟಿ ಕೋಳಿ ಭಕ್ಷ್ಯ ಮಾಡುತ್ತಾರೆ. ಸಾಮಾನ್ಯವಾಗಿ ನಾಟಿ ಕೋಳಿಯನ್ನೇ ಬಳಸಲಾಗುತ್ತಿದ್ದರೂ ಪಟ್ಟಣ ಪ್ರದೇಶದಲ್ಲಿ ಅವು ಸಿಗುವುದು ಕಡಿಮೆಯಾದ ಹಿನ್ನಲೆಯಲ್ಲಿ ಫಾರಂ ಕೋಳಿಯನ್ನೇ ಈಗ ಬಳಸುತ್ತಾರೆ. ನಾಟಿ ಕೋಳಿ ಕೂಡ ಔಷಧ ಗುಣಗಳುಳ್ಳ ಆಹಾರ ತಿಂದಿರುವುದರಿಂದ ಕೋಳಿ ಮಾಂಸದಲ್ಲೂ ಔಷಧ ಗುಣ ಸೇರಿರುತ್ತದೆ ಎಂಬ ನಂಬಿಕೆಯಿದೆ. ಜತೆಗೆ ಏಡಿ ಕೂಡ ಆಟಿ ಹಬ್ಬದ ಪ್ರಮುಖ ಅಡುಗೆಯಾಗಿದೆ. ಇದರೊಂದಿಗೆ ಗದ್ದೆಯಲ್ಲಿ ಬೆಳೆದ ಅಣಬೆಯನ್ನು ಕೂಡ ಇದೇ ಸಮಯದಲ್ಲಿ ಸೇವಿಸಲಾಗುತ್ತದೆ.
ಮಳೆಯಲ್ಲಿ ಶೀತ ಕಡಿಮೆ ಮಾಡುತ್ತದೆ
ಆಟಿ ಸೊಪ್ಪು ರಸ ಸೇವಿಸಲು ಒಂದು ಕಾರಣವಿದೆ. ಕೊಡಗಿನಲ್ಲಿ ಆಟಿ ತಿಂಗಳಲ್ಲಿ ಮಳೆ ಸುರಿಯುವುದರಿಂದ ಜನರು ಹೆಚ್ಚು ಶೀತಕ್ಕೊಳಗಾಗಿರುತ್ತಾರೆ. ಜತೆಗೆ ಎರಡು ತಿಂಗಳು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಹೀಗಾಗಿ ಈ ಸೊಪ್ಪಿನ ರಸ ಸೇವಿಸುವುದರಿಂದ ದೇಹದ ಉಷ್ಣಾಂಶ ಹೆಚ್ಚಿ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಅಲ್ಲದೆ ಗದ್ದೆಯಲ್ಲಿ ನಾಟಿ ಮಾಡಿದ ನಂತರ, ಶರೀರದ ಉಷ್ಣತೆ ಹೆಚ್ಚಿಸಿಕೊಳ್ಳಲು ಈ ಪಾಯಸವನ್ನು ಮಾಡಿ ಕುಡಿಯಲಾಗುತ್ತದೆ.
ಇದನ್ನೂ ಓದಿ:
ಕೊರೊನಾ ನಡುವೆಯೂ ಕರಾವಳಿಯ ವಿಶೇಷ ಆಚರಣೆ ಹೋಳಿ ಸುಗ್ಗಿ ಕುಣಿತಕ್ಕೆ ಚಾಲನೆ
ದಾವಣಗೆರೆ: ಅಜ್ಜಿ ಹಬ್ಬದ ವಿಶೇಷತೆ ಏನು? ಮಳೆಗಾಲದಲ್ಲಿಯೇ ಈ ಹಬ್ಬ ಆಚರಿಸಲು ಅನೇಕ ಕಾರಣಗಳಿವೆ
Published On - 11:51 am, Tue, 3 August 21