ಕೊಡಗು: ತಲೆ ಎತ್ತಿರುವ ಗ್ಲಾಸ್​ ಬ್ರಿಡ್ಜ್​ಗಳನ್ನು ಮುಚ್ಚುವಂತೆ ಆಗ್ರಹ, ಮಾಲೀಕರಿಗೆ ಸಂಕಷ್ಟ

| Updated By: ವಿವೇಕ ಬಿರಾದಾರ

Updated on: Sep 25, 2024 | 11:38 AM

ಕೊಡಗು ಜಿಲ್ಲೆಯಾದ್ಯಂತ ತಲೆ ಎತ್ತಿರುವ ಗ್ಲಾಸ್ ಬ್ರಿಡ್ಜ್​ಗಳನ್ನು ಬಂದ್​ ಮಾಡಿಸುವಂತೆ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಮುಂದಾಗಿದ್ದಾರೆ. ಅಷ್ಟಕ್ಕೂ ಬಂದ್​ ಮಾಡಿಸಲು ಮುಂದಾಗಿರುವುದು ಏಕೆ? ಈ ಸುದ್ದಿ ಓದಿ.

ಕೊಡಗು: ತಲೆ ಎತ್ತಿರುವ ಗ್ಲಾಸ್​ ಬ್ರಿಡ್ಜ್​ಗಳನ್ನು ಮುಚ್ಚುವಂತೆ ಆಗ್ರಹ, ಮಾಲೀಕರಿಗೆ ಸಂಕಷ್ಟ
ಗ್ಲಾಸ್​ ಬ್ರಿಡ್ಜ್​
Follow us on

ಕೊಡಗು, ಸೆಪ್ಟೆಂಬರ್​ 25: ಜಿಲ್ಲೆಯಲ್ಲಿ ತಲೆ ಎತ್ತಿರುವ ಹಾಗೂ ತಲೆ ಎತ್ತಲಿರುವ ಗ್ಲಾಸ್ ಬ್ರಿಡ್ಜ್​ಗಳ (Glass Bridge) ವಿರುದ್ಧ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ನಡೆಸುತ್ತಿರುವ ಹೋರಾಟ ಮುಂದುವರೆದಿದೆ. ಇದೀಗ, ಹೋರಾಟಗಾರರು ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ. ತಲೆ ಎತ್ತಿರುವ ಗ್ಲಾಸ್ ಬ್ರಿಡ್ಜ್​ಗಳನ್ನು ಬಂದ್​ ಮಾಡಿಸುವಂತೆ ಆಗ್ರಹಿಸಲಿದ್ದಾರೆ. ಇದರಿಂದಾಗಿ ಕೊಟ್ಯಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ಗ್ಲಾಸ್ ಬ್ರಿಡ್ಜ್ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ.

ಕೊಡಗು ಜಿಲ್ಲೆಯ ಪ್ರವಾಸೋಧ್ಯಮ ಕಳೆದ ಕೆಲವು ತಿಂಗಳಿನಿಂದ ಹೊಸತನಕ್ಕೆ ತೆರದುಕೊಳ್ಳುತ್ತ್ತಿದೆ. ಹಾರಂಗಿ ಅಡ್ವೆಂಚರ್ ವಾಟರ್ ಗೇಮ್ಸ್​, ಗ್ರೇಟರ್ ರಾಜಾಸೀಟ್ ಅಡ್ವೆಂಚರ್ಸ್​ ಗೇಮ್ಸ್​ ಹೀಗೆ ಹತ್ತು ಹಲವು ಚಟುವಟಿಕೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಇದೀಗ ಅವುಗಳ ಸಾಲಿಗೆ ಸೇರಿರುವುದು ಗ್ಲಾಸ್ ಬ್ರಿಡ್ಜ್​ಗಳು. ಈಗಾಗಲೇ ಜಿಲ್ಲೆಯ ಎರಡು ಕಡೆ ಗ್ಲಾಸ್ ಬ್ರಿಡ್ಜ್​ಗಳು ತಲೆ ಎತ್ತಿವೆ. ಈ ಗ್ಲಾಸ್​​ ಬ್ರಿಡ್ಜ್​ಗಳು ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆದಿವೆ.

ಆದರೆ, ಜೂನ್ ಮತ್ತು ಜುಲೈ ತಿಂಗಳಲ್ಲಿ ಭಾರೀ ಮಳೆ ಬಂದ ಸಂದರ್ಭದಲ್ಲಿ ಹಲವು ಕಡೆ ಲಘು ಭೂ ಕುಸಿತಗಳು ಸಂಬವಿಸಿದ್ದವು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ ರಾಜಾ ಗ್ಲಾಸ್ ಬ್ರಿಡ್ಜ್​​​ಗಳನ್ನು ಮುಚ್ಚುವಂತೆ ಆದೇಶಿಸಿದ್ದರು. ಅದರಂತೆ ಜಿಲ್ಲೆಯ ಎರಡು ಗ್ಲಾಸ್​​ ಬ್ರಿಡ್ಜ್​ಗಳು ಬಂದ್ ಆಗಿದ್ದವು. ಮುಂದಿನ ಆದೇಶದವರೆಗೆ ಗ್ಲಾಸ್ ಬ್ರಿಡ್ಜ್​ಗಳನ್ನು ತೆರೆಯದಂತೆ ಸೂಚಿಸಿದ್ದರು.

ಇದನ್ನೂ ಓದಿ: ಅಕ್ಟೋಬರ್ 17ರಂದು ಕಾವೇರಿ ತೀರ್ಥೋದ್ಭವ

ಇದೀಗ, ಈ ಎರಡು ಗ್ಲಾಸ್ ಬ್ರಿಡ್ಜ್​ಗಳು ಹಾಗೂ ತಲಕಾವೇರಿ ಮತ್ತು ಭಾಗಮಂಡಲ ಬಳಿಯ ಗ್ಲಾಸ್​ ಬ್ರಿಡ್ಜ್​ಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಧೋಳ್ಪಾಡಿ ಯಶ್ವಂತ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದಕ್ಕೆ ಪರಿಸರವಾದಿಗಳಿಂದಲೂ ಬೆಂಬಲ ವ್ಯಕ್ತವಾಗಿದೆ.

ಉಡತ್​ ಮೊಟ್ಟೆಯ ಪಪ್ಪಿಸ್ ಗ್ಲಾಸ್ ಬ್ರಿಡ್ಜ್​ನಿಂದಾಗಿ ಮಡಿಕೇರಿ-ಭಾಗಮಂಡಲ ರಸ್ತೆಯಲ್ಲಿ ವಿಪರೀತ ಟ್ರಾಫಿಕ ಜಾಮ್ ಆಗಿದೆ. ಅಪಘಾತಗಳಾಗುತ್ತಿವೆ. ಈ ಪ್ರದೇಶ 2018ರಲ್ಲಿ ಭೂ ಕುಸಿತಕ್ಕೆ ತುತ್ತಾಗಿದ್ದು, ಇಲ್ಲಿ ಗ್ಲಾಸ್ ಬ್ರಿಡ್ಜ್​ ಬೇಡವೇ ಬೇಡ ಎಂದು ದುರುದಾರರು ಒತ್ತಾಯಿಸಿದ್ದಾರೆ. ಇಲ್ಲಿನ ವಾತಾವರಣ ಗ್ಲಾಸ್ ಬ್ರಿಡ್ಜ್​ನ್ನು ತಡೆಯುವಷ್ಟು ಸಶಕ್ತವಾಗಿಲ್ಲ. ಹಾಗಾಗಿ ಇಲ್ಲಿ ಭೂ ಕುಸಿತವಾದರೆ ಬೆಟ್ಟದ ತಪ್ಪಲಿನ ಮನೆಗಳು ಕಾಫಿ ತೋಟಗಳಿಗೆ ಅಪಾರ ಹಾನಿಯಾಗುತ್ತದೆ ಎಂದು ಪರಿಸರವಾದಿಗಳು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಮುಂದಿನ ಆದೇಶದವರೆಗೆ ಗ್ಲಾಸ್ ಬ್ರಿಡ್ಜ್​​ಗಳ ಪ್ರವೇಶ ನಿರ್ಬಂಧಿಸಿರುವುದಾಗಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ