ಕೂರ್ಗ್ ವಿಲೇಜ್​ನತ್ತ ಮುಖಮಾಡುತ್ತಿಲ್ಲ ಪ್ರವಾಸಿಗರು! ಕೋಟ್ಯಂತರ ರೂ. ಯೋಜನೆ ವ್ಯರ್ಥ

ಕೊಡಗು ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸಲೆಂದೇ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಕೊಡಗಿನ ಪದ್ಧತಿ, ಆಚಾರ-ವಿಚಾರ, ಅಡುಗೆ, ಸಂಸ್ಕೃತಿ ಸಾರಲು ‘ಕೂರ್ಗ್ ವಿಲೇಜ್’ ಎಂಬ ಪರಿಕಲ್ಪನೆಯನ್ನು ಹಟ್ಟುಹಾಕಿ ಅದಕ್ಕೆ ಕೋಟ್ಯಂತರ ರೂ ಹೂಡಿಕೆ ಕೂಡ ಮಾಡಲಾಗಿತ್ತು. ಆದರೆ ಈ ಕೇಂದ್ರದತ್ತ ಪ್ರವಾಸಿಗರು ಮುಖ ಮಾಡುತ್ತಿಲ್ಲ.

ಕೂರ್ಗ್ ವಿಲೇಜ್​ನತ್ತ ಮುಖಮಾಡುತ್ತಿಲ್ಲ ಪ್ರವಾಸಿಗರು! ಕೋಟ್ಯಂತರ ರೂ. ಯೋಜನೆ ವ್ಯರ್ಥ
ಪ್ರವಾಸಿಗರು ಕೂರಬೇಕಾಗಿದ್ದ ಬೆಂಚುಗಳಲ್ಲಿ ಗಿಡಗಂಟಿಗಳು ಬೆಳೆದಿರುವುದು
Updated By: Ganapathi Sharma

Updated on: Oct 08, 2025 | 3:04 PM

ಮಡಿಕೇರಿ, ಅಕ್ಟೋಬರ್ 8: ಮಡಿಕೇರಿ ಪ್ರವಾಸ ಎಂದರೆ ಸಾಕು, ಎಲ್ಲರೂ ಖುಷಿ ಪಡುತ್ತಾರೆ. ಮಡಿಕೇರಿಯ (Madikeri) ಸುಂದರ್ಗ ನಿಸರ್ಗ, ಅದರಲ್ಲೂ ಅಬ್ಬಿ ಫಾಲ್ಸ್, ರಾಜಾಸೀಟ್ ಗದ್ದುಗೆ ಇತ್ಯಾದಿ ಸ್ಥಳಗಳು ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳು. ಆದರೆ, ಇತ್ತೀಚೆಗೆ ಈಸ್ಥಳಗಳ ಸಾಲಿಗೆ ಕೂರ್ಗ್ ವಿಲೇಜ್ (Coorg Village) ಎಂಬ ಹೊಸ ಪಾರ್ಕ್ ಅನ್ನು ಸೇರಿಸಲಾಗಿತ್ತು. ಮೊದಲು ಈ ಹೆಸರು ಕೇಳಿದವರಿಗೆ ಇದೇನು ವಿಲೇಜು ಅಂತ ಗೊಂದಲವಾಗಬಹುದು. ಆದರೆ, ಇದು ಕೊಡಗು ಜಿಲ್ಲೆಯ ಪಾಲಿಗೆ ಬಹುದೊಡ್ಡ ಆಸ್ತಿಯಾಗಬೇಕಾಗಿದ್ದ ಯೋಜನೆಯಾಗಿತ್ತು. ಮಡಿಕೇರಿ ನಗರದ ರಾಜಸೀಟ್ ಕೆಳಭಾಗದಲ್ಲಿ ಆಕರ್ಷಕ ಕೆರೆಯ ಪ್ರದೇಶವನ್ನು ಅಭಿವೃದ್ಧಿ ಮಾಡಲಾಗಿತ್ತು. ಅಲ್ಲಿ ಕೊಡಗಿನ ಸಾಂಬಾರ ಪದಾರ್ಥಗಳು, ಮಸಾಲೆ, ಕಾಫಿ ಪುಡಿ, ಜೇನುತುಪ್ಪ ಮತ್ತಿತರ ಪದಾರ್ಥಗಳ‌ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಕೊಡಗಿನ ಅಚಾರಾ ವಿಚಾರ, ಪದ್ಧತಿ ಪರಂಪರೆಗಳ ಅನಾವರಣಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಇದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಬೇಕಾಗಿತ್ತು. ಆದರೆ, ಕೊಡಗಿನ ಬಹು ನಿರೀಕ್ಷಿತ ಈ ಕೂರ್ಗ್ ವಿಲೇಜ್ ಯೊಜನೆ ನೆನೆಗುದಿಗೆ ಬಿದ್ದಿದೆ. ಕೂರ್ಗ್ ವಿಲೇಜ್ ಕೇಂದ್ರ ಪ್ರವಾಸಿಗರನ್ನ ಆಕರ್ಷಿಸಲು ವಿಫಲವಾಗಿದೆ. ಆಕರ್ಷಕವಾಗಿದ್ದರೂ ಪ್ರವಾಸಿಗರು ಮಾತ್ರ ಇತ್ತ ಮುಖವನ್ನೇ ಹಾಕುತ್ತಿಲ್ಲ.

ಕೂರ್ಗ್ ವಿಲೇಜ್ ಕೇಂದ್ರವನ್ನು ಪ್ರವಾಸೋದ್ಯಮ ಇಲಾಖೆ ನಿರ್ವಹಿಸುತ್ತಿದೆ. ಸರ್ಕಾರದಿಂದ‌ ಮಾನ್ಯತೆ ಪಡೆದ ಕೆಲವರಿಗಷ್ಟೇ ಇಲ್ಲಿ ವ್ಯಾಪಾರ ಮಳಿಗೆ ಇಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಕೂರ್ಗ್ ವಿಲೇಜ್ ಪಾಳು ಬಿದ್ದಿದೆ. ಕೇಂದ್ರ ಸಂಪೂರ್ಣ ಗಿಡಗಂಟಿಗಳಿಂದ ಆವೃತವಾಗಿದೆ.‌ ಪ್ರವಾಸಿಗರು ಕೂರಬೇಕಾಗಿದ್ದ ಬೆಂಚುಗಳು ಗಿಡಗಂಟಿಗಳು ಬೆಳೆದಿವೆ. ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಜನರ ಕೋಟ್ಯಂತರ ರೂಪಾಯಿ ಹಣ ಪೋಲಾಗಿದೆ. ಇದಕ್ಕೆ ಕೊಡಗಿನ ಜನರಿಂದ‌ತೀವ್ರ ಟೀಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಟಿವಿ9 ವರದಿ ಇಂಪ್ಯಾಕ್ಟ್: ಮಡಿಕೇರಿ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ಹಿಂಪಡೆದ ಸರ್ಕಾರ

ಒಟ್ಟಾರೆ, ಕೊಡಗು ಪ್ರವಾಸೋದ್ಯಮದ ಆಕರ್ಷಣೆಯಾಗಬೇಕಾಗಿದ್ದ ಕೂರ್ಗ್ ವಿಲೇಜ್ ಅತ್ತ ಪ್ರವಾಸಿಗರಿಗೂ ದೊರಕಿಲ್ಲ, ಇತ್ತ ಕೊಡಗಿಗೆ ಆದಾಯವನ್ನೂ ತರುತ್ತಿಲ್ಲ. ಮಾತ್ರವಲ್ಲದೆ, ಯೋಜನೆಯಿಂದಾಗಿ ಮಡಿಕೇರಿ ಹೃದಯಭಾಗದ ಸ್ಥಳ ಯಾವುದೇ ಪ್ರಯೋಜನಕ್ಕೆ ಬಾರದೆ ಪಾಳುಬಿದ್ದಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ