ಕೊಡಗು: ಪ್ರಕೃತಿಯನ್ನು ಆರಾಧನೆ ಮಾಡುವ ಜಿಲ್ಲೆಯಾದ್ಯಂತ ಈಗ ಹುತ್ತರಿ ಹಬ್ಬದ ಸಂಭ್ರಮ. ಧಾನ್ಯ ಲಕ್ಷ್ಮಿಯನ್ನು ಭಕ್ತಿ ಭಾವದೊಂದಿಗೆ ಭತ್ತದ ಗದ್ದೆಯಿಂದ ಮನೆಗಳಿಗೆ ತಂದು ತುಂಬಿಸಿಕೊಳ್ಳುವ ವಿಶೇಷ ಹಬ್ಬ ಹುತ್ತರಿ. ಕೊಡವರ ಜನಪದ ಕಲೆಗಳು ಅನಾವರಣವಾಗುವುದು ಕೂಡ ಇದೇ ಹಬ್ಬದಲ್ಲಿ. ಕೊಡಗು ಜಿಲ್ಲೆಯಾದ್ಯಂತ ಈಗ ಹುತ್ತರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೊಡಗಿನಲ್ಲಿ ಆಚರಿಸುವ ಕೆಲವು ಹಬ್ಬಗಳಲ್ಲಿ ಹುತ್ತರಿ ಹಬ್ಬ ಬಹಳ ಪ್ರಮುಖ. ಕೊಡಗಿನ ಸುಗ್ಗಿ ಹಬ್ಬ (Harvest festival) ಎಂದೇ ಹೆಸರಾಗಿರುವ ಹುತ್ತರಿ ಹಬ್ಬವನ್ನು ಈ ಭಾಗದಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಹುತ್ತರಿ ಎಂದರೆ ಹೊಸ ಅಕ್ಕಿ ಎಂದರ್ಥ. ಕೊಡಗಿನಲ್ಲಿ ಇದು ಪುತ್ತರಿ ಹಬ್ಬ ಎಂದೇ ಫೇಮಸ್. ಕೇರಳದ ಓಣಂ ಹಬ್ಬ ಕಳೆದು ಸರಿಯಾಗಿ ಮೂರು ತಿಂಗಳಲ್ಲಿ ಈ ಹಬ್ಬ ನಡೆಯುತ್ತದೆ. ಈ ಹಬ್ಬವನ್ನು ಜಿಲ್ಲೆಯ ಹಲವೆಡೆ ಹಗಲು ಆಚರಣೆ ಮಾಡಿದರೆ ಮತ್ತೆ ಕೆಲವೆಡೆ ರಾತ್ರಿ ಆಚರಣೆ ಮಾಡುತ್ತಾರೆ. ಇನ್ನೂ ಮನೆಗಳನ್ನು ಸುಣ್ಣ ಬಣ್ಣದಿಂದ ತಳಿರು ತೋರಣಗಳಿಂದ ಶೃಂಗಾರಗೊಳಿಸಲಾಗಿರುತ್ತದೆ.
ಹಬ್ಬದ ದಿನ ಮೊದಲು ಮನೆಯಲ್ಲಿ ನೆರೆಕಟ್ಟಿ, ದೇವರಿಗೆ ನೈವೇದ್ಯ ಅರ್ಪಿಸಿ ಹಿರಿಯರ ಮೂಲಕ ಮೆರವಣಿಗೆಯಲ್ಲಿ ಭತ್ತದ ಗದ್ದೆಗೆ ತೆರಳಲಾಗುತ್ತದೆ. ಇಲ್ಲಿ ಭತ್ತದ ಗದ್ದೆಗೆ ಪೂಜೆ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿ ಎಲ್ಲರೂ ಒಟ್ಟಾಗಿ ಭತ್ತದ ಕದಿರನ್ನು ಮನೆಗಳಿಗೆ ತರುತ್ತಾರೆ. ಮಹಿಳೆಯರು ಹಾಗೂ ಪುರುಷರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಕದಿರು ಹಿಡಿದು ಪೊಲಿ ಪೊಲಿಯೇ ದೇವಾ ಎಂದು ದೇವರನ್ನು ಸ್ಮರಿಸುತ್ತಾ ಮನೆಗಳಿಗೆ ಬರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.
ವಿಶೇಷವಾಗಿ ಹಬ್ಬದಲ್ಲಿ ತಂಬಿಟ್ಟು ಹಾಗೂ ಹುತ್ತರಿ ಗೆಣಸಿನ ಖಾದ್ಯಗಳನ್ನು ತಯಾರಿಸಿ ಭೋಜನ ಮಾಡಲಾಗುತ್ತದೆ. ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಮತ್ತು ವಿವಿಧ ಸಂಘ-ಸಂಸ್ಥೆಗಳು ಕೂಡ ಈ ಹಬ್ಬವನ್ನು ಆಚರಣೆ ಮಾಡುತ್ತವೆ. ಅಲ್ಲದೆ ಹುತ್ತರಿ ಕೋಲಾಟ ಹಾಗೂ ಕೊಡಗಿನ ವಿವಿಧ ಜನಪದ ಕಲೆಗಳ ಪ್ರದರ್ಶನವಾಗುವುದು ಇದೇ ಹುತ್ತರಿ ಹಬ್ಬದಲ್ಲಿ. ಈ ಹಬ್ಬವನ್ನು ಗ್ರಾಮ ಗ್ರಾಮಗಳಲ್ಲಿ ಜನತೆ ಒಟ್ಟಾಗಿ ಸೇರಿ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಾರೆ ಎಂದು ಕೊಡವ ನ್ಯಾಷನಲ್ ಸಂಘಟನೆ ಸದಸ್ಯೆ ಮೀನಾ ಹೇಳಿದ್ದಾರೆ.
ಒಟ್ಟಿನಲ್ಲಿ ಕೃಷಿ ಪ್ರಧಾನ ಕೊಡಗಿನ ಹುತ್ತರಿ ಹಬ್ಬ ನಿಜಕ್ಕೂ ವಿಶೇಷ. ಮುಂಗಾರು ಆರಂಭದಲ್ಲಿ ಗದ್ದೆಯನ್ನು ಉತ್ತು-ಬಿತ್ತಿ ಕಟಾವಿನ ಹಂತಕ್ಕೆ ತಂದ ಕೊಡಗಿನವರು ಪೊಲಿ ಪೊಲಿಯೇ ದೇವಾ ಎಂದು ಸ್ಮರಿಸುತ್ತಾ ಭೂ ದೇವಿಗೆ ಕೃತಜ್ಞತೆ ಸಲ್ಲಿಸುತ್ತಾ ಹಬ್ಬವನ್ನು ಆಚರಿಸಿ ಸಂಭ್ರಮಪಡುತ್ತಾರೆ.
ವರದಿ: ಗೋಪಾಲ್ ಸೋಮಯ್ಯ ಐಮಂಡ
ಇದನ್ನೂ ಓದಿ:
ಹುಬ್ಬಳ್ಳಿ: ಆಕಾಶ ಬುಟ್ಟಿ ಹಬ್ಬ; ಆಗಸದೆತ್ತರಕ್ಕೆ ಹಾರಿದ ಬೆಳಕನ್ನು ಕಂಡು ಸಂಭ್ರಮಿಸಿದ ಜನತೆ
ಕರಾವಳಿಯಲ್ಲಿ ದೀಪಾವಳಿ ಸಂಭ್ರಮ: ಜಾತಿ, ಧರ್ಮ ಬೇಧ ಮರೆತು ಖಾಸಗಿ ಕಾಲೇಜು ವಿದ್ಯಾರ್ಥಿನಿಯರಿಂದ ಹಬ್ಬ ಆಚರಣೆ