ಕೊಡಗು: ಕೊಡಗು ಜಿಲ್ಲಾಡಳಿತದ ಒಂದೊಂದು ನಿರ್ಧಾರಗಳು ಕೊಡಗಿನ ಪ್ರವಾಸೋದ್ಯಮಿಗಳು ಮತ್ತು ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿರುವವರನ್ನು ತತ್ತರಿಸುವಂತೆ ಮಾಡ್ತಿವೆ. ಪ್ರವಾಸಿಗರು ಅಧಿಕವಾಗಿ ಬರುವ ದಸರಾ ಸಂದರ್ಭದಲ್ಲೇ ಮಡಿಕೇರಿಯ ಪ್ರವಾಸಿ ತಾಣಗಳನ್ನ ಜಿಲ್ಲಾಡಳಿತ ಬಂದ್ ಮಾಡಿಸಿದ್ದು, ಈ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಪ್ರತಿ ವರ್ಷ ದಸರಾ ರಜೆ ಬಂದ್ರೆ ಸಾಕು ಮಡಿಕೇರಿಯಲ್ಲಿ ಪ್ರವಾಸಿಗರ ಪ್ರವಾಹ ಇರುತ್ತೆ. ಈ ಬಾರಿಯೂ ಕೊರೊನಾ ಕಡಿಮೆ ಇರೋದ್ರಿಂದ ಮಡಿಕೇರಿಯತ್ತ ಬಹಳಷ್ಟು ಪ್ರವಾಸಿಗರು ಆಗಮಿಸ್ತಿದ್ದಾರೆ. ಹೀಗಾಗಿ ಸಹಜವಾಗಿ ಪ್ರವಾಸೋದ್ಯಮಿಗಳು ಮತ್ತು ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿರು ಹಾಗೂ ವ್ಯಾಪಾರಿಗಳು ಒಂದಷ್ಟು ಖುಷಿಯಾಗಿದ್ರು. ಲಾಕ್ಡೌನ್ನ ವೇಳೆ ಆದ ನಷ್ಟವನ್ನ ಈ 10 ದಿನಗಳಲ್ಲಿ ಸ್ವಲ್ಪವಾದ್ರು ಸರಿದೂಗಿಸಿಕೊಳ್ಳುವ ವಿಶ್ವಾಸದಲ್ಲಿದ್ದರು. ಆದ್ರೆ ಜಿಲ್ಲಾಡಳಿತ ಆ ಒಂದು ನಿರ್ಧಾರ ಇವರ ಆಸೆಗೆ ತಣ್ಣೀರು ಎರಚಿದೆ. ಅಕ್ಟೋಬರ್ 17 ರವರೆಗೆ ಮಡಿಕೇರಿ ನಗರ ವ್ಯಾಪ್ತಿಯ ಪ್ರವಾಸೀತಾಣಗಳನ್ನು ಬಂದ್ ಮಾಡಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದು ಸ್ಥಳೀಯರಿಗೆ ಆಘಾತ ತಂದಿದೆ.
ಮಡಿಕೇರಿ ನಗರದಲ್ಲಿ ಪವ್ರಾಸಿ ತಾಣ ಬಂದ್ ಆಗಿದ್ದೇ ತಡ, ಮಡಿಕೇರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಪ್ರಮುಖ ಪ್ರವಾಸಿ ತಾಣಗಳಾದ ರಾಜಾಸೀಟ್, ಗದ್ದುಗೆ, ಕೋಟೆ, ನೆಹರೂ ಮಂಟಪಗಳು ಪ್ರವಾಸಿಗರಿಲ್ದೆ ಬಣಗುಡುತ್ತಿವೆ. ಪ್ರವಾಸಿಗರೆನ್ನೇ ನಂಬಿ ಸಣ್ಣಪುಟ್ಟ ಅಂಗಡಿ ಇಟ್ಟಿದ್ದ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ಅಬ್ಬಿಫಾಲ್ಸ್ಗೆ, ಮಾಂದಲಪಟ್ಟಿಗೆ ಪ್ರವಾಸಿಗರು ಹೋದ್ರೆ ಕೊರೊನಾ ಬರೋದಿಲ್ವಾ? ಬರೀ ಮಡಿಕೇರಿ ನಗರಕ್ಕೆ ಪ್ರವಾಸಿಗರು ಬಂದ್ರೆ ಮಾತ್ರ ಕೊರೊನಾ ಬರೋದಾ ಅಂತ ಖಾರವಾಗಿ ಪ್ರಶ್ನಿಸ್ತಿದ್ದಾರೆ.
ನವರಾತ್ರಿಯ ಸಂದರ್ಭದಲ್ಲಿ 10ರಿಂದ 15 ದಿನ ಪ್ರವಾಸಿಗರಿಂದ ಕೋಟಿಕೋಟಿ ವ್ಯಾಪಾರ-ವಹಿವಾಟು ನಡೆಯುತ್ತೆ. ಆದರೆ ಲಾಕ್ಡೌನ್ ಹಾಗೂ ಕೊರೊನಾ ಕಂಟಕದ ಬಳಿಕ ಮಡಿಕೇರಿಯ ಹೋಟೆಲ್ ಉದ್ಯಮ ರೆಸ್ಟೋರೆಂಟ್ಗಳು ನಷ್ಟದ ಹಾದಿಯಲ್ಲಿವೆ. ಇಂಥ ಹೊತ್ತಲ್ಲೇ ವ್ಯತಿರಿಕ್ತ ನಿರ್ಧಾರ ಕೈಗೊಂಡಿರುವುದೇಕೆ ಎಂಬುದು ಸ್ಥಳೀಯ ವ್ಯಾಪಾರಿಗಳ ಪ್ರಶ್ನೆ. ಆದ್ರೆ ಈ ಪ್ರಶ್ನೆಗೆ ಸರ್ಕಾರವೇ ಸೂಕ್ತ ಉತ್ತರ ನೀಡಬೇಕಿದೆ.
ಇದನ್ನೂ ಓದಿ: ನವರಾತ್ರಿ ಉತ್ಸವ ಹಿನ್ನೆಲೆ: ಮಡಿಕೇರಿ ಕಡೆ ಯಾರೂ ಪ್ರವಾಸಕ್ಕೆ ಬರಬೇಡಿ- ಕೊಡಗು ಜಿಲ್ಲಾಡಳಿತದಿಂದ ಮಹತ್ವದ ಆದೇಶ