ಮಡಿಕೇರಿ‌: ನಿರ್ಗತಿಕರ ಪಾಲಿಗೆ ದೇವರಾಗಿದ್ದ ದಂಪತಿ ಬೆಂಕಿಗೆ ಆಹುತಿ, ಸ್ವಂತ 3 ಮಕ್ಕಳು-ಆಶ್ರಮದ 33 ಮಕ್ಕಳು, 15 ವರ್ಷಗಳ ಅನಾಥಾಶ್ರಮದ ಮುಂದಿನ ಗತಿಯೇನು?

| Updated By: ಸಾಧು ಶ್ರೀನಾಥ್​

Updated on: Oct 11, 2023 | 10:02 AM

ರೂಪಾ ಅಡುಗೆ ಮನೆಗೆ ತೆರಳಿ ಗ್ಯಾಸ್ ಹೊತ್ತಿಸಿದ್ದಾರೆ ಅಷ್ಟೆ. ಅದಾಗಲೇ ಸೋರಿಕೆಯಾಗಿದ್ದ ಗ್ಯಾಸ್ ಬಗ್ಗೆ ಅರಿವೇ ಅವರಿಗಿರಲಿಲ್ಲ. ಭಗ್ಗನೆ ಹೊತ್ತಿಕೊಂಡ ಬೆಂಕಿ ಇವರನ್ನೂ ಆವರಿಸಿಕೊಂಡಿದೆ. ರಮೇಶ್ ಅವರ ತಂದೆ ಕರಿಯಪ್ಪ ಕೂಡ ಸುಟ್ಟ ಗಾಯಗಳೊಂದಿಗೆ ಹೊರಗೋಡಿ ಬಂದಿದ್ದಾರೆ. ರಮೇಶ್ ಮತ್ತು ರೂಪ ತೀವ್ರ ಗಾಯಗೊಂಡು ಮೈಸೂರು ಆಸ್ಪತ್ರೆ ದಾಖಲಾಗಿದ್ದರು.

ಮಡಿಕೇರಿ‌: ನಿರ್ಗತಿಕರ ಪಾಲಿಗೆ  ದೇವರಾಗಿದ್ದ ದಂಪತಿ ಬೆಂಕಿಗೆ ಆಹುತಿ, ಸ್ವಂತ 3 ಮಕ್ಕಳು-ಆಶ್ರಮದ 33 ಮಕ್ಕಳು, 15 ವರ್ಷಗಳ ಅನಾಥಾಶ್ರಮದ ಮುಂದಿನ ಗತಿಯೇನು?
ನಿರ್ಗತಿಕರ ಪಾಲಿಗೆ ಅಕ್ಷರಶಃ ದೇವರಾಗಿದ್ದ ದಂಪತಿ ಬೆಂಕಿಗೆ ಆಹುತಿ
Follow us on

ಅನಾಥರು ನಿರ್ಗತಿಕರ ಪಾಲಿಗೆ ಆ ದಂಪತಿ (Couple) ಅಕ್ಷರಶಃ ದೇವರಾಗಿದ್ದವರು. ದೀನರ ಸೇವೆಯೇ ಭಗವಂತನ ಸೇವೆ ಅಂತ ನಂಬಿ ಅನಾಥಾಶ್ರಮ‌ ಕಟ್ಟಿ ನಿಸ್ವಾರ್ಥ ಸೇವೆ ಮಾಡ್ತಾ ಇದ್ರು. ಆದ್ರೆ ಆ ವಿಧಿಗೆ ಇವರ ಸೇವೆ ಇಷ್ಟವಾಗಲಿಲ್ಲವೇನೋ. ಇಬ್ಬರನ್ನೂ ಬೆಂಕಿ ರೂಪದಲ್ಲಿ ಬಲಿ ಪಡೆದಿದೆ. ಇದರೊಂದಿಗೆ ಇವರನ್ನೇ ನಂಬಿದ್ದ 32 ಮಂದಿ ನಿರ್ಗತಿಕರು ಅಕ್ಷರಶಃ ಅನಾಥರಾಗುವುದರ (Orphan) ಜೊತೆಗೆ ಈ ದಂಪತಿಯ ಮೂವರು ಮಕ್ಕಳು ಕೂಡ ತಬ್ಬಲಿಯಾಗಿವೆ. ಓ ವಿಧಿಯೇ ನೀನೆಷ್ಟು ಕ್ರೂರಿ ಅಂತ ಇವರ ಸಾವಿಗೆ ಇಡೀ ಊರೇ ಕಣ್ಣೀರು ಮಿಡಿಯುತ್ತಿದೆ. ಕೊಡಗು ಜಿಲ್ಲೆಯ ಯಾವುದೇ ಮೂಲೆಯಲ್ಲಿ ಯಾವುದೇ ಭಿಕ್ಷುಕ ಕಾಣಲಿ ಅಥವಾ ನಿರ್ಗತಿಕರಿರಲಿ… ಅಲ್ಲಿ ಮೊದಲು ಕಾಣಿಕೊಳ್ಳುತ್ತಿದ್ದುದೇ ಈ ರಮೇಶ್. ಮಡಿಕೇರಿ‌ ನಗರದ (Madikeri) ರಾಣಿಪೇಟೆ‌ ನಿವಾಸಿಗಳಾದ ರಮೇಶ್ ಮತ್ತು ರೂಪಾ ದಂಪತಿ ಕಳೆದ 15 ವರ್ಷಗಳಿಂದ ಅನಾಥಾಶ್ರಮ ನಡೆಸುತ್ತಿದ್ದಾರೆ.‌ ಸ್ವತಃ ತಾವೇ ಖುದ್ದು ಮುಂದೆ ನಿಂತು ಅನಾಥರು, ನಿರ್ಗತಿಕರನ್ನು ಸ್ನಾನ ಮಾಡಿಸುವುದು ಬಟ್ಟೆ ತೊಡಿಸುವುದು ಊಟ ಮಾಡಿಸುವುದು ಮಾಡಿಸುತ್ತಿದ್ದರು.

ಅದೆಷ್ಟೋ ಅನಾಥರು ಮೃತರಾದಾಗ ತಾವೇ ಸ್ವಂತ ಮಕ್ಕಳಂತೆ ನಿಂತು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಕುಶಾಲನಗರ ತಾಲ್ಲೂಕಿನ ಗದ್ದೆಹಳ್ಳ ಬಳಿ ಇವರ ವಿಕಾಸ್ ಜನಸೇವಾ ಅನಾಥಾಶ್ರಮವಿದೆ. ಅದೂ ಕೂಡ ಸಂಪೂರ್ಣ ಉಚಿತವಾಗಿ. ಅನಾಥಾಶ್ರಮಕ್ಕಾಗಿ ಯಾರ ಎದುರೂ ತಮ್ಮ ಕೈ ಚಾಚಿದವರಲ್ಲ. ದಾನಿಗಳು ನೀಡಿದ ಹಣ ಮತ್ತು ತಮ್ಮ‌ಸಂಪಾದನೆಯಿಂದಲೇ ಸಮಾಜಸೇವೆ ಮಾಡುತ್ತಿದ್ದರು.

ಇಂದೂ ಕೂಡ ಅವರ ಆಶ್ರಮದಲ್ಲಿ 33 ಮಂದಿ ಅನಾಥರಿಗೆ ಆಶ್ರಯ ನೀಡಲಾಗಿದೆ. ಹೀಗೆ ಜನಾನುರಾಗಿಯಾಗಿದ್ದ ರಮೇಶ್-ರೂಪ‌ ಅನುರೂಪ ದಂಪತಿಯ ಬಾಳಲ್ಲಿ ವಿಧಿ ಕ್ರೂರ ಆಟವಾಡಿದೆ. ಇದೇ ಅಕ್ಟೋಬರ್ ನಾಲ್ಕರಂದು ಅನಾಥಾಶ್ರಮ ದಲ್ಲಿ ಎಲ್ಲರೊಂದಿಗೆ ಬೆರೆತು ರಮೇಶ್ ಮತ್ತು ರೂಪ ಮನೆಗೆ ಬಂದಿದ್ದಾರೆ.

ರೂಪಾ ಅಡುಗೆ ಮನೆಗೆ ತೆರಳಿ ಗ್ಯಾಸ್ ಹೊತ್ತಿಸಿದ್ದಾರೆ ಅಷ್ಟೆ. ಅದಾಗಲೇ ಸೋರಿಕೆಯಾಗಿದ್ದ ಗ್ಯಾಸ್ ಬಗ್ಗೆ ಅರಿವೇ ಅವರಿಗಿರಲಿಲ್ಲ. ಭಗ್ಗನೆ ಹೊತ್ತಿಕೊಂಡ ಬೆಂಕಿ ಇವರನ್ನೂ ಆವರಿಸಿಕೊಂಡಿದೆ. ರಮೇಶ್ ಅವರ ತಂದೆ ಕರಿಯಪ್ಪ ಕೂಡ ಸುಟ್ಟ ಗಾಯಗಳೊಂದಿಗೆ ಹೊರಗೋಡಿ ಬಂದಿದ್ದಾರೆ. ರಮೇಶ್ ಮತ್ತು ರೂಪ ತೀವ್ರ ಗಾಯಗೊಂಡು ಮೈಸೂರು ಆಸ್ಪತ್ರೆ ದಾಖಲಾಗಿದ್ದರು.

ಚಿಕಿತ್ಸೆಗೆ ಚೆನ್ನಾಗಿಯೇ ಸ್ಪಂದಿಸುತ್ತಿದ್ದ ರಮೇಶ್ ಅ. 8 ನೇ ತಾರೀಕು ಬೆಳಗಿನ ಜಾವ ಆಸ್ಪತ್ರೆಯಲ್ಲಿ ಹೃದಯಾಘಾತವಾಗಿ ಅಸುನೀಗಿದ್ದಾರೆ. ಇದು ಅನಾಥಾಶ್ರಮಕ್ಕೆ ಬರ ಸಿಡಿಲಿನಂತೆ ಬಂದೆರಗಿದೆ. ಗಾಯದ ಮೇಲೆ ಉಪ್ಪು ಸುರಿದಂತೆ ಇದೀಗ ರೂಪ ಕೂಡ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ. ಇದರೊಂದಿಗೆ ಇವರನ್ನೇ ನಂಬಿರುವ 33 ಆಶ್ರಮವಾಸಿಗಳು ಇದೀಗ ಅಕ್ಷರಶಃ ನಿರ್ಗತಿಕರಾಗಿದ್ದಾರೆ. ಜೀವನ ಪೂರ್ತಿ ಅನಾಥರ ಸೇವೆ ಮಾಡಿದ ಅಪ್ಪ ಅಮ್ಮ ಇದೀಗ ತಮ್ಮನ್ನು ಅನಾಥರನ್ನಾಗಿ ಮಾಡಿ ಹೋದರಲ್ಲಾ ಅಂತ ಮಕ್ಕಳೂ ಕಣ್ಣೀರಿಡುತ್ತಿದ್ದಾರೆ.

ಇದನ್ನೂ ಓದಿ: ಸ್ಪುರದ್ರೂಪಿ ಜೋಡಿ ಮದುವೆಯಾಗಿ ವರ್ಷ ಪೂರೈಸಿಲ್ಲ, ಆದ್ರೆ ದೊಡ್ಡಮ್ಮನ ಮಗನ ಜೊತೆ ಪತ್ನಿಯ ಅಕ್ರಮ ಸಂಬಂಧ, ಸುಪಾರಿ ಕೊಟ್ಟು ಅನಾಥ ಗಂಡನ ಹತ್ಯೆ

ಸಧ್ಯ ರಮೇಶ್-ರೂಪಾ ದಂಪತಿ ನಡೆಸುತ್ತಿದ್ದ ಅನಾಥಾಶ್ರಮ ಅನಾಥವಾಗಿದೆ.‌ ಈ ನಿರ್ಗತಿಕರನ್ನು ಮುಂದೆ ಯಾರು ನೋಡ್ಕೋತ್ತಾರೆ ಅನ್ನೋ ಪ್ರಶ್ನೆ ಮೂಡಿದೆ. ಸಧ್ಯ ರಮೇಶ ಅವರ ಕುಟುಂಬ ಸದಸ್ಯರು ತಾವೇ ರಮೇಶ್ ಅವರ ಕನಸನ್ನು ಮುಂದುವರಿಸುವ ಬಗ್ಗೆ ಚಿಂತಿಸುತಿದ್ದಾರೆ. ಏನೇ ಆದರೂ ಬೇರೆಯವರ ಬಾಳಿಗೆ ಬೆಳಕಾಗಿದ್ದ ರಮೇಶ್ ಕುಟುಂಬವೇ ವಿಧಿಯಾಟಕ್ಕೆ ಬಲಿಯಾಗಿದ್ದು ಮಾತ್ರ ವಿಪರ್ಯಾಸ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.