ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾಕ್ಕೆ (Madikeri Dasara 2021) ವಿದ್ಯುಕ್ತ ಚಾಲನೆ ದೊರೆತಿದೆ. ಮಡಿಕೇರಿ ನಗರದ ಪಂಪಿನ ಕೆರೆ ಬಳಿ ನಾಲ್ಕು ಶಕ್ತಿ ದೇವತೆಗಳಿಗೆ ಪೂಜೆ ಸಲ್ಲಿಸುವ ಮೂಲಕ ದಸರಾಕ್ಕೆ ಸಾಂಪ್ರದಾಯಿಕ ಚಾಲನೆ ನೀಡಲಾಗಿದೆ. ದಸರಾ ಪ್ರಯುಕ್ತ ಕಂಚಿ ಕಾಮಾಕ್ಷಿ, ಕುಂದುರುಮೊಟ್ಟೆ ಚೌಟಿಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ದೇವತೆಗಳ ಕರಗಗಳನ್ನು ಹೂವಿನಿಂದ ಅಲಂಕರಿಸಲಾಯಿತು. ಈ ಸಂದರ್ಭ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಹಾಜರಿದ್ದು ಪೂಜೆಯಲ್ಲಿ ಭಾಗಿಯಾಗಿದ್ದರು.
ಶಕ್ತಿದೇವತೆಗಳ ಆರಾಧನೆಯ ಇತಿಹಾಸ
ಸುಮಾರು 300 ವರ್ಷಗಳ ಹಿಂದೆ ಮಡಿಕೇರಿಗೆ ಭಾರೀ ಸಾಂಕ್ರಮಿಕ ರೋಗ ತಲೆದೋರಿ ನೂರಾರು ಮಂದಿ ಸಾವನ್ಬಪ್ಪಿದ್ದರಂತೆ. ಆಗ ಜನರೆಲ್ಲಾ ಶಕ್ತಿದೇವತೆಗಳ ಮೊರೆಹೋದರಂತೆ. ಭಕ್ತರ ಮೊರೆ ಆಲಿಸಿದ ಶಕ್ತಿದೇವತೆಗಳು ರೋಗ ದೂರ ಮಾಡಿದವು ಎಂದು ಪ್ರತೀತಿಯಿದೆ. ಹಾಗಾಗಿಯೇ ಇಂದಿಗೂ ಪ್ರತಿವರ್ಷ ವಿಜಯದಶಮಿಯ ಮುನ್ನಾ ದಿನ ಶಕ್ತಿದೇವತೆಗಳ ಆರಾಧನೆ ಮಾಡಲಾಗುತ್ತದೆ. ಈ ಕರಗಗಳು ಇನ್ನೂ ಒಂಭತ್ತು ದಿನಗಳ ಕಾಲ ನಗರ ಪ್ರದಕ್ಷಿಣೆ ಮಾಡಿ ಭಕ್ತರಿಗೆ ಆಶೀರ್ವಾದ ನೀಡುತ್ತವೆ. ನಾಡಿಗೆ ತಲೆದೋರಿರುವ ಕೊರೊನಾ ಮಹಾಮಾರಿಯನ್ನು ತೊಲಗಿಸುವಂತೆ ಈಸಂದರ್ಭ ಭಕ್ತರು ಬೇಡಿಕೊಂಡರು.
ಕೊರೊನಾ ನಿಯಮ ಉಲ್ಲಂಘಿಸಿ ಸೇರಿದ ನೂರಾರು ಜನ
ಕೊರೊನಾ ಕಾರಣದಿಂದಾಗಿ ಕರಗೋತ್ಸವಕ್ಕೆ ಹಲವು ನಿರ್ಬಂಧಗಳನ್ನು ಹೇರಲಾಗಿತ್ತು. ಒಂದು ಕರಗಕ್ಕೆ 25 ಮಂದಿ ಭಾಗವಹಿಸಲು ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೆ ಕರಗ ಪೂಜೆಯ ಸಂದರ್ಭ 500 ಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ಹಾಗಾಗಿ ಸಾಮಾಜಿಕ ಅಂತರ ಮಾಯವಾಗಿತ್ತು.
ವರದಿ: ಗೋಪಾಲ್ ಐಮಂಡ, ಮಡಿಕೇರಿ
ಇದನ್ನೂ ಓದಿ:
17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು
ಮಹಾಲಯ ಅಮವಾಸ್ಯೆಯಂದು ಸಮಾಧಿಗಳಿಗಾಗಿ ನೀರಲ್ಲಿಳಿದು ಹುಡುಕಾಡಿದ ಕೋಲಾರದ ಜನರು!