ಕೊಡಗು, ಏಪ್ರಿಲ್ 19: ಕೊಡಗು ಜಿಲ್ಲೆಯಲ್ಲಿ ಕುಶಾಲನಗರ ತಾಲೂಕಿನ ವಾಲ್ನೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಚುನಾವಣಾ ಪ್ರಚಾರದ ವೇಳೆ ಹಿಟ್ ಅಂಡ್ ರನ್ಗೆ (Hit And Run) ಬಿಜೆಪಿ ಕಾರ್ಯಕರ್ತರೊಬ್ಬರು (BJP Worker) ಮೃತಪಟ್ಟಿದ್ದಾರೆ. ಘಟನೆಯ ನಂತರ ಸ್ಥಳದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದೊಂದು ಉದ್ದೇಶಪೂರ್ವಕ ಕೃತ್ಯ ಎಂದು ಆರೋಪಿಸಿರುವ ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಘೋಷಣೆ ಕೂಗಿದರು. ಗೊಂದಲದ ನಡುವೆಯೇ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಐಪಿಸಿಯ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ. ಒಬ್ಬನನ್ನು ಬಂಧಿಸಲಾಗಿದೆ.
ಹಿಟ್ ಆ್ಯಂಡ್ ರನ್ಗೆ ಬಿಜೆಪಿ ಕಾರ್ಯಕರ್ತ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ ಕನ್ನಡಿಗರ ಸರ್ಕಾರ ರಚನೆಯಾಗಲ್ಲ. ತಾಲಿಬಾನ್ ಸರ್ಕಾರ ರಚನೆ ಆಗುತ್ತೆ ಎಂದು ಹೇಳಿದ್ದೆ. ಅದರಂತೆ, ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರವೇ ಅಧಿಕಾರದಲ್ಲಿದೆ ಎಂದು ಟೀಕಿಸಿದರು. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನಬಾಳು ಗ್ರಾಮದಲ್ಲಿ ಮಾತನಾಡಿದ ಅವರು, ಈ ಸರ್ಕಾರ ಬಂದ ಮೇಲೆ ಸಮಾಜಘಾತಕ ಶಕ್ತಿಗೆ ಆತ್ಮಸ್ಥೈರ್ಯ ಸಿಕ್ಕಿದೆ. ಮತದಾರರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಪಾ‘ಕೈ’ಸ್ತಾನ್ ಸರ್ಕಾರದಿಂದ ತಾಲಿಬಾನ್ ಮಾಡೆಲ್ ಜಾರಿ: ಅಪರಾಧ ಪ್ರಕರಣಗಳ ಪಟ್ಟಿ ಮಾಡಿ ಬಿಜೆಪಿ ಕಿಡಿ
ಈ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು. ರಾಜ್ಯದ ಜನತೆ ಬಿಜೆಪಿ ಗೆಲ್ಲಿಸುವ ಮೂಲಕ ಸರ್ಕಾರವನ್ನು ಎಚ್ಚರಿಸಬೇಕು ಎಂದು ಅವರು ಕರೆ ನೀಡಿದರು.
ರಾಜ್ಯದಲ್ಲಿ ಸರ್ಕಾರ, ಕಾನೂನು ಸುವ್ಯವಸ್ಥೆ ಅನ್ನೋದು ಸತ್ತುಹೋಗಿದೆ. ಕಳೆದ 24 ಗಂಟೆಗಳಲ್ಲಿ 8ಕ್ಕೂ ಹೆಚ್ಚು ಕೊಲೆಗಳಾಗಿವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕೊಡಗು ಜಿಲ್ಲೆಯ ಸಿದ್ದಾಪುರದ ತ್ಯಾಗತ್ತೂರಿನಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದ ನಮ್ಮ ಕಾರ್ಯಕರ್ತರ ಮೇಲೆ ಕಾರು ಹರಿಸಿ ಒಬ್ಬರ ಬಲಿ ಪಡೆದು ಇನ್ನಿಬ್ಬರ ಸ್ಥಿತಿ ಗಂಭೀರವಾಗುವಂತೆ ಅಪಘಾತ ನಡೆಸಿದ್ದಾರೆ. ಕಾರು ಹರಿಸಿದವರಲ್ಲಿ ಒಬ್ಬ ‘ಅರ್ಷದ್ ಶೌಕತ್’, ಇನ್ನೂ ನಾಲ್ವರು ಪಾರಿಯಾಗಿದ್ದಾರೆ. ನಿಮ್ಮ ಅತಿಯಾದ ಓಲೈಕೆಯಿಂದ ರಾಜ್ಯದಲ್ಲಿ ಮತಾಂಧ ಯುವಕರ ಪುಂಡಾಟಕ್ಕೆ ಕಡಿವಾಣವೇ ಇಲ್ಲ. ಮೊನ್ನೆ ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ, ನಿನ್ನೆ ಕೇಸರಿ ಶಾಲು ಧರಿಸಿ ಪ್ರಚಾರ ಮಾಡಿದವರ ಮೇಲೆ ಕೊಲೆ ಪ್ರಯತ್ನ. ಸಿಎಂ ಸಿದ್ದರಾಮಯ್ಯ, ಗೃಹ ಸಚಿವರಾದ ಜಿ ಪರಮೇಶ್ವ ಅವರೇ ವೆಂಟಿಲೇಟರ್ನಲ್ಲಿರುವ ಗೃಹ ಇಲಾಖೆಗೆ ಸೂಕ್ತ ಚಿಕಿತ್ಸೆ ನೀಡಿ ರಾಜ್ಯವನ್ನು ಉಳಿಸಿ, ಇಲ್ಲದಿದ್ದಲ್ಲಿ ಜನತೆಯೇ ನಿಮ್ಮ ಸರ್ಕಾರಕ್ಕೆ ಚಿಕಿತ್ಸೆ ನೀಡಲಿದ್ದಾರೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರೀತಂ ಗೌಡ ಉಲ್ಲೇಖಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ