ಕೊಡಗು: ಜಿಲ್ಲೆಯ ಕೊಡವ ಸಮುದಾಯದ ವಿವಾಹ ಪದ್ಧತಿಗೆ ಪೊನ್ನಂಪೇಟೆ ಕೊಡವ ಸಮಾಜ ಹಲವು ನಿರ್ಬಂಧಗಳನ್ನು ಹೇರಿ ಆದೇಶ ಹೊರಡಿಸಿದೆ. ಪೊನ್ನಂಪೇಟೆ ಕೊಡವ ಸಮಾಜದಲ್ಲಿ ವಿವಾಹವಾಗುವ ಸಂದರ್ಭದಲ್ಲಿ ಕೇಕ್ ಕಟ್ ಮಾಡುವಂತಿಲ್ಲ. ಶಾಂಪೇನ್ ಹಾರಿಸುವಂತಿಲ್ಲ, ಮಧುಮಗ ಗಡ್ಡ ಬಿಟ್ಟುಕೊಂಡು ವಿವಾಹವಾಗುವಂತಿಲ್ಲ, ಮಹಿಳೆಯರು ಕೂದಲು ಬಿಟ್ಟುಕೊಂಡು ವೇದಿಕೆಗೆ ಹತ್ತುವಂತಿಲ್ಲ ಎಂದು ನಿಯಮ ಜಾರಿಗೊಳಿಸಿದೆ.
ಇದಕ್ಕೆ ಕಾರಣ ಕೊಡವ ವಿವಾಹ ಪದ್ಧತಿಯಲ್ಲಿ ಕೇಕ್ ಕಟ್ ಮಾಡುವುದು ಮತ್ತು ಶಾಂಪೇನ್ ಹಾರಿಸುವಂತಿಲ್ಲ. ಆದರೆ ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿ ಜಾರಿಗೆ ಬಂದಿದೆ. ಕೇಕ್ ಕಟ್ ಮಾಡಿ ಶಾಂಪೇನ್ ಹಾರಿಸುವುದನ್ನು ಕೊಡವ ವಿವಾಹಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಇದು ಇತ್ತೀಚಿನ ಮಕ್ಕಳಲ್ಲಿ ಕೊಡವ ವಿವಾಹ ಪದ್ಧತಿಯೇನೋ ಎಂಬಂತೆ ನಂಬುವಂತಾಗಿದೆ. ಹಾಗಾಗಿ ಪೊನ್ನಂಪೇಟೆ ಕೊಡವ ಸಮಾಜ ಈ ಬಗೆಯ ಪಾಶ್ಚಾತ್ಯ ಅನುಕರಣೆಯನ್ನು ತಮ್ಮ ಕಲ್ಯಾಣ ಮಂಟಪದಲ್ಲಿ ನಿಷೇಧಿಸಿದೆ.
ಮಹಿಳೆಯರು ಕೂದಲು ಬಿಟ್ಟುಕೊಂಡು ವೇದಿಕೆ ಹತ್ತುವಂತಿಲ್ಲ
ಕೊಡಗಿನ ಪದ್ಧತಿಯಲ್ಲಿ ಮಹಿಳೆಯರು ಕೂದಲು ಬಿಟ್ಟುಕೊಳ್ಳುವುದು ಸಾವು ಸಂಭವಿಸಿದಾಗ ಮಾತ್ರ. ಮನೆಯೊಂದರಲ್ಲಿ ಸಾವು ಸಂಭವಿಸಿದಾಗ ಸಾವಿಗೆ ಬರುವ ಮಹಿಳೆಯರು, ಕೂದಲನ್ನು ಸಂಪೂರ್ಣ ಬಿಟ್ಟುಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ವಿವಾಹಗಳಲ್ಲಿ ಕೂಡ ಕೆಲವು ಮಹಿಳೆಯರು ಕೂದಲು ಬಿಟ್ಟುಕೊಂಡು ವೇದಿಕೆ ಹತ್ತುವುದು ಸಂಪ್ರದಾಯಸ್ಥರ ಕಂಗಣ್ಣಿಗೆ ಗುರಿಯಾಗಿದೆ. ಹಾಗಾಗಿ ಕೂದಲು ಬಿಟ್ಟುಕೊಂಡು ಬರುವ ಮಹಿಳೆಯರು ವೇದಿಕೆ ಹತ್ತಬೇಡಿ ಎಂದು ತಾಕೀತು ಮಾಡಿದೆ. ಲಕ್ಷಣವಾಗಿ ಜಡೆ ಹಾಕಿಕೊಂಡು ಬನ್ನಿ ಎಂದು ಪೊನ್ನಂಪೇಟೆ ಕೊಡವ ಸಮಾಜ ಒತ್ತಾಯಿಸಿದೆ.
ಅಲ್ಲದೆ ಕೊಡಗಿನ ವಿವಾಹಗಳಲ್ಲಿ ಮದುಮಗ ವಿವಾಹದ ದಿನ ಬೆಳಗ್ಗೆ ಕಡ್ಡಾಯವಾಗಿ ಶೇವ್ ಮಾಡಿ ಗಡ್ಡ ತೆಗೆಯಬೇಕಾಗುತ್ತದೆ. ಇದು ಪದ್ಧತಿಯೂ ಹೌದು. ಗಡ್ಡ ತೆಗೆಯದ ಮದುಮಗನಿಗೆ ಪದ್ಧತಿ ಪ್ರಕಾರ ದಂಡ ಹಾಕುವುದೂ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮದುಮಗ ಮದುವೆಗೆ ಗಡ್ಡಬಿಡುವುದು ಪ್ಯಾಷನ್ ಆಗುತ್ತಿದೆ. ಹಾಗಾಗಿ ತಮ್ಮ ಪದ್ಧತಿಗೆ ವಿರುದ್ಧವಾಗಿ ಗಡ್ಡ ತೆಗೆಯದೆ ಇರುವ ಮದುಮಗನಿಗೆ ವಿವಾಹವಾಗಲು ಅವಕಾಶವಿಲ್ಲ ಎಂದು ಪೊನ್ನಂಪೇಟೆ ಕೊಡವ ಸಮಾಜದ ಮುಖಂಡ ರಾಜೀವ್ ಬೋಪಯ್ಯ ಹೇಳಿದ್ದಾರೆ.
ವಿವಾದ ಸೃಷ್ಟಿಸಿದ ಪೊನ್ನಂಪೇಟೆ ಕೊಡವ ಸಮಾಜದ ನಿಯಮಗಳು
ಪೊನ್ನಂಪೇಟೆ ಕೊಡವ ಸಮಾಜ ತೆಗೆದುಕೊಂಡ ನಿರ್ಣಯಗಳು ಇದೀಗ ವಿವಾದಕ್ಕೆ ಕಾರಣವಾಗಿದೆ. ಕೊಡವ ಸಮಾಜಗಳು ಕೊಡಗಿನ ಸಂಸ್ಕೃತಿ ಆಚಾರ ವಿಚಾರ ಉಳಿಸಲು ಏನೂ ಕೊಡುಗೆ ಕೊಟ್ಟಿಲ್ಲ. ಅಂತಹದರಲ್ಲಿ ರೀತಿಯ ನಿಯಮಗಳನ್ನು ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹಲವು ಪ್ರಗತಿಪರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪದ್ಧತಿ ಪರಂಪರೆ ಕಾಲದಿಂದ ಕಾಲಕ್ಕೆ ಬದಲಾವಣೆಗೊಳಪಟ್ಟಿವೆ. ಅದು ಸಹಜ ಕೂಡ ಹೌದು, ಹಾಗೆ ನೋಡಿದರೆ ಕೊಡವ ವಿವಾಹಗಳು ಕಲ್ಯಾಣ ಮಂಟಪಗಳಲ್ಲಿ ಆಗುವಂತೆಯೇ ಇಲ್ಲ.
ಮದುಮಗ ದಿಬ್ಬಣ ತೆರಳಿ ವಧುವನ್ನು ಕರೆದುಕೊಂಡು ಬರಬೇಕು. ಅದೂ ಅಲ್ಲದೆ, ವರನ ಮನೆಯಲ್ಲೇ ಗಂಗಾ ಪೂಜೆ ಮಾಡಬೇಕು. ಆದರೆ ಈ ಎಲ್ಲಾ ನಿಯಮಗಳನ್ನು ಇದೀಗ ಬದಲಾವಣೆ ಮಾಡಿಕೊಳ್ಳಲಾಗಿದೆ. ಹಾಗಿದ್ದು ಇದೀಗ ಕೇಕ್ ಕಟ್ ಮಾಡುವುದಕ್ಕೆ, ಶಾಂಪೇನ್ ಹಾರಿಸುವುದಕ್ಕೆ ಏಕೆ ವಿರೋಧ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೊನ್ನಂಪೇಟೆ ಕೊಡವ ಸಮಾಜ, ಮೂಲ ಕೊಡವ ವಿವಾಹ ಪದ್ಧತಿಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಡುವ ನಿಟ್ಟಿನಲ್ಲಿ ಇಂತಹ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ವರದಿ: ಗೋಪಾಲ್ ಸೋಮಯ್ಯ
ಇದನ್ನೂ ಓದಿ:
ಕೊಪ್ಪಳ ಶಾಲೆಯಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಶಿಕ್ಷಕ; ವೈರಲ್ ಆದ ಪೋಟೋಗಳು ಇಲ್ಲಿವೆ