ಮಡಿಕೇರಿ: ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ (Ponnampet Taluk) ನಿಟ್ಟೂರು ಗ್ರಾಮದಲ್ಲಿ ತಾಂತ್ರಿಕ ವೈಫಲ್ಯದಿಂದ ಪ್ಯಾರಾಗ್ಲೈಡರ್ (Paragliders) ತುರ್ತು ಭೂಸ್ಪರ್ಶ ಮಾಡಿದ್ದು, ಎದುರಿಗಿದ್ದ ಕಾರಿನ ಚಾಲಕ ಜಾಗರೂಕತೆಯಿಂದ ಕಾರನ್ನ ಹಠಾತ್ ಎಡಕ್ಕೆ ತಿರುಗಿಸಿದ್ದರಿಂದ ಅನಾಹುತವೊಂದು ತಪ್ಪಿದೆ. ಪ್ಯಾರಾಗ್ಲೈಡರ್ನಲ್ಲಿದ್ದವರು ಹಾಗೂ ಕಾರಿನಲ್ಲಿದ್ದವರ ಜೀವಗಳು ಉಳಿದಿವೆ. ಆದರೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರ ವಿರೋಧದ ನಡುವೆಯೂ ಹವ್ಯಾಸಿ ಪೈಲಟ್ ನಡೆಸುತ್ತಿದ್ದ ಪ್ಯಾರಾಗ್ಲೈಡಿಂಗ್ ಸಾಹಸದ ಬಗ್ಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಇಂತ ದುಸ್ಸಾಹಸಗಳಿಗೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ನಿಟ್ಟೂರು ಗ್ರಾಮದ ಮುತ್ತಣ್ಣ ಎಂಬ ಹವ್ಯಾಸಿ ಪೈಲಟ್ ತಮ್ಮದೇ ಊರಿನ ಜಮೀನಿನಲ್ಲಿ ಖಾಸಗಿ ರನ್ ವೇ ನಿರ್ಮಿಸಿಕೊಂಡು ಕಳೆದ ಐದಾರು ತಿಂಗಳುಗಳಿಂದ ‘ಟು ಸೀಟರ್ ಗ್ಲೈಡರ್’ ಒಂದನ್ನು ಹಾರಿಸುತ್ತಿದ್ದಾರೆ. ನಾಗರಹೊಳೆ ಅಭಯಾರಣ್ಯ ಸಮೀಪವೇ ಇರುವುದರಿಂದ ಈ ಪ್ರಯತ್ನಕ್ಕೆ ಊರಿನಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ‘ಟಿವಿ9’ ಕೂಡ ಕಳೆದ ನವೆಂಬರ್ 30 ರಂದು ವರದಿ ಮಾಡಿತ್ತು.
ಕಳೆದ ಶನಿವಾರ (ಜ 14) ಸಂಜೆ ಇಬ್ಬರನ್ನು ಕೂರಿಸಿಕೊಂಡು ಗ್ಲೈಡರ್ ಟೇಕಾಫ್ ಆಗಿತ್ತು. ಆದರೆ ಎರಡು ಸುತ್ತು ಹೊಡೆಯುವಷ್ಟರಲ್ಲಿ ತಾಂತ್ರಿಕ ವೈಫಲ್ಯದಿಂದ ನೆಲದತ್ತ ತೇಲಲಾರಂಭಿಸಿತು. ಅದೃಷ್ಟವಶಾತ್ ಕಾರ್ಮಾಡು-ಬಾಳೆಲೆ ಮುಖ್ಯರಸ್ತೆಯತ್ತ ಧಾವಿಸಿ, ನೆಲ ಸ್ಪರ್ಶಿಸಿತು. ಈ ಸಂದರ್ಭ ಎದುರಿನಿಂದ ಬರುತ್ತಿದ್ದ ಕಾರಿನ ಚಾಲಕ ಅಪಾಯವರಿತು ತನ್ನ ಕಾರನ್ನು ರಭಸದಿಂದ ಎಡಕ್ಕೆ ತಿರುಗಿಸಿದ. ಇಲ್ಲದಿದ್ದರೆ ಗ್ಲೈಡರ್ ಕಾರಿಗೆ ಅಪ್ಪಳಿಸಿ ದೊಡ್ಡ ಅನಾಹುತವೇ ಆಗುತ್ತಿತ್ತು. ಕೂದಲೆಲೆಯ ಅಂತರದಲ್ಲಿ ಅನಾಹುತ ತಪ್ಪಿತು.
#Kodagu Two paragliders survived a crash after they were forced to land due to engine failure. The paragliders landed on the main road and had a collision. Both the pilot and passenger survived with minor injuries #Karnataka pic.twitter.com/yrmBZH0hUn
— Imran Khan (@KeypadGuerilla) January 14, 2023
ಹಿಂದೆಯೂ ಅನಾಹುತವಾಗಿತ್ತು
ಈ ಹಿಂದೆ 2013ರಲ್ಲಿ ಇದೇ ಊರಿನ ಸಮೀಪ ಇದೇ ಮಾದರಿಯ ಗ್ಲೈಡರ್ ವಿದ್ಯುತ್ ತಂತಿಗೆ ಅಪ್ಪಳಿಸಿ ಓರ್ವ ಸಾವನ್ನಪ್ಪಿದ್ದರೆ ಮತ್ತೋರ್ವ ತನ್ನೆರಡೂ ಕಾಲುಗಳನ್ನ ಕಳದುಕೊಂಡಿದ್ದ. ಈ ನೆನಪು ಗ್ರಾಮಸ್ಥರಲ್ಲಿ ಇಂದಿಗೂ ಇದೆ. ರಸ್ತೆಯ ಆಸುಪಾಸು ವಿದ್ಯುತ್ ತಂತಿಗಳಿವೆ. ಲಕ್ಷ್ಮಣತೀರ್ಥ ನದಿಯೂ ಹರಿಯುತ್ತಿದೆ. ಈ ಪ್ರದೇಶ ಪ್ಯಾರಾಗ್ಲೈಡರ್ ಹಾರಾಟಕ್ಕೆ ಸೂಕ್ತವಲ್ಲ ಎಂದು ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರೀನ್ ಮುತ್ತಣ್ಣ ತಿಳಿಸಿದ್ದಾರೆ.
ಇದನ್ನೂ ಓದಿ: ಶಾಸಕ ಅಪ್ಪಚ್ಚು ರಂಜನ್ ಕ್ರೀಡಾ ಸಚಿವರೂ ಆಗಿದ್ದವರು, ಆದರೆ ಕೊಡಗು ಕ್ರೀಡಾಂಗಣಗಳ ಸ್ಥಿತಿ ಆ ದೇವರಿಗೇ ಪ್ರೀತಿ!
ಕೊಡಗು ಜಿಲ್ಲೆಯ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:03 pm, Tue, 17 January 23