ವಿರಾಜಪೇಟೆ (ಕೊಡಗು): ಶ್ರೀನಗರದಲ್ಲಿ ಕೊಡಗಿನ ಯೋಧ ಹುತಾತ್ಮರಾದ ಹಿನ್ನೆಲೆ ಯೋಧನ ವಿರಾಜಪೇಟೆ ಮನೆಯಲ್ಲಿ ಶೋಕ ಮಡುಗಟ್ಟಿದೆ. ಯೋಧ ಅಲ್ತಾಫ್ ನಿನ್ನೆ ಹಿಮಪಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಅಪ್ರತಿಮ ದೇಶ ಭಕ್ತರಾಗಿದ್ದ ಅಲ್ತಾಫ್ ಅಹಮ್ಮದ್ 19 ವರ್ಷದಿಂದ ದೇಶ ಸೇವೆ ಮಾಡುತ್ತಿದ್ದರು. ಪತ್ನಿ ಮತ್ತು ತಾಯಿಯೊಂದಿಗೆ ಕಾನ್ಫರೆನ್ಸ್ ವಿಡಿಯೋಕಾಲ್ ನಲ್ಲಿದ್ದಾಗಲೇ ಕರೆ ಕಟ್ ಆಗಿ ಸಾವನ್ನಪ್ಪಿದ್ದಾರೆ (Virajpet Soldier Althaf Ahmed Martyred).
ನಿವೃತ್ತಿಯಾಗಿದ್ದರೂ ಮತ್ತೆ ದೇಶ ಸೇವೆಗೆ ಅರ್ಪಿಸಿಕೊಂಡರು…
ಕೆಲ ವರ್ಷಗಳ ಹಿಂದೆ ಸೇನೆಯಿಂದ ನಿವೃತ್ತಿಯಾಗಿದ್ದ ಅಲ್ತಾಫ್ ಮತ್ತೆ ದೇಶ ಸೇವೆಯ ಹಂಬಲದಲ್ಲಿ ಸೇನೆ ಸೇರಿದ್ದರು. ದೇಶ ಸೇವೆಯ ಹಂಬಲ ಅವರನ್ನು ಈ ಬಾರಿ ದೂರ ತೀರಕೆ ಕರೆದೊಯ್ದಿದೆ. ಯೋಧ ಅಲ್ತಾಫ್ ಬುಧವಾರ ಬೆಳಗ್ಗೆ 8.30ಕ್ಕೆ ವಿಡಿಯೋ ಕಾಲ್ ಮಾಡಿದ್ದರು. ಜಮ್ಮುವಿನಲ್ಲಿ ವಿಪರೀತ ಹಿಮಪಾತದ ಬಗ್ಗೆ ಹೇಳಿಕೊಂಡಿದ್ದರು. ಕುಟುಂಬದೊಂದಿಗೆ ಮಾತಾಡುತ್ತಲೇ ಹಿಮಪಾತವಾಗಿ ಅವರ ಸಾವು ಸಂಭವಿಸಿದೆ. ನಾಳೆ ವಿರಾಜಪೇಟೆಗೆ ವೀರ ಯೋಧ ಅಲ್ತಾಫ್ ಅಹಮ್ಮದ್ ಅವರ ಪಾರ್ಥಿವ ಶರೀರ ಬರುವ ನಿರೀಕ್ಷೆಯಿದೆ. ಸೇನೆಯ ಗೌರವಗಳೊಂದಿಗೆ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ.
ಸ್ವಂತಕ್ಕೆಂದು ಒಂದು ಮನೆಯನ್ನೂ ಹೊಂದಿರಲಿಲ್ಲ ಯೋಧ ಅಲ್ತಾಫ್:
ಇನ್ನು, ಯೋಧ ಅಲ್ತಾಫ್ ಅವರು ಸ್ವಂತಕ್ಕೆಂದು ಒಂದು ಮನೆಯನ್ನೂ ಹೊಂದಿರಲಿಲ್ಲ. ತನ್ನ ಇಬ್ಬರು ಸಹೋದರಿಯರನ್ನು ವಿವಾಹ ಮಾಡಿಕೊಟ್ಟಿದ್ದ ಹೆಗ್ಗಳಿಕೆ ಅಲ್ತಾಫ್ ಅವರದ್ದು. ಪೆರುಂಬಾಡಿ ಬಳಿ ಜಾಗ ಖರೀದಿಸಿದ್ದ ಯೋಧ ಅಲ್ತಾ ನಿವೃತಿಯ ಬಳಿಕ ಮನೆ ಕಟ್ಟುವ ಕನಸು ಕಂಡಿದ್ದರು.
ಯೋಧ ಅಲ್ತಾಫ್ ಪ್ರೇಮಿಗಳ ದಿನ, ಹಿಜಾಬ್ ಬಗ್ಗೆ ಏನು ಹೇಳಿದ್ದರು?:
ಯೋಧ ಅಲ್ತಾಫ್ ಫೆಬ್ರವರಿ 14 ರಂದು ಮಾಡಿದ್ದ ಆಡಿಯೋ ಇದೀಗ ವೈರಲ್ ಆಗಿದೆ. ಹಿಜಬ್-ಕೇಸರಿ ಶಾಲು ವಿವಾದಕ್ಜೆ ಬೇಸರ ವ್ಯಕ್ತಪಡಿಸಿದ್ದ ಯೋಧ ನಾವು ಸೈನಿಕರು ದೇಶದ ಜನತೆಗೋಸ್ಕರ ಗಡಿಯಲ್ಲಿ ಹೋರಾಡುತ್ತೇವೆ. ನೀವು ಮಾತ್ರ ಜಾತಿ-ಜಾತಿಗೋಸ್ಕರ ಬಡಿದಾಡುತ್ತೀರಾ? ನಾವೆಲ್ಲಾ ಭಾರತೀಯರೇ. ಇಲ್ಲಿ ನಮ್ಮ ಕಣ್ಣೆದುರೆ ಸೈನಿಕರು ಸಾಯುತ್ತಿದ್ದಾರೆ ಎಂದು ವಾಟ್ಸ್ ಆಪ್ ಆಡಿಯೋದಲ್ಲಿ ವೀರ ಯೋಧ ಅಲ್ತಾಫ್ ವಿಷಾದದ ದನಿಯಲ್ಲಿ ಹೇಳಿದ್ದರು.
ಭಾರೀ ಹಿಮಪಾತದ ವಿಡಿಯೋ ಮಾಡಿ ಕಳುಹಿಸಿದ್ದ ಯೋಧ ಅಲ್ತಾಫ್ ಫೆಬ್ರವರಿ 14 ಪ್ರೇಮಿಗಳ ದಿನವಲ್ಲ; ಅಂದು ರಾಜ್ ಗುರು, ಭಗತ್ ಸಿಂಗ್ ರನ್ನು ನೇಣಿಗೇರಿಸಿದ ದಿನ. ಹಾಗಾಗಿ, ಪ್ರೇಮಿಗಳ ದಿನ ಆಚರಿಸಬಾರದೆಂದು ಯೋಧ ಅಲ್ತಾಫ್ ಕರೆಕೊಟ್ಟಿದ್ದರು.
Soldier Audio Viral : ಯೋಧ ಅಲ್ತಾಫ್ ಪ್ರೇಮಿಗಳ ದಿನ, ಹಿಜಾಬ್ ಬಗ್ಗೆ ಏನು ಹೇಳಿದ್ದರು? ನಾವು ಸೈನಿಕರು.. ದೇಶದ ಜನತೆಗೆ ಗಡಿಯಲ್ಲಿ ಹೋರಾಡ್ತೇವೆ
Published On - 12:33 pm, Thu, 24 February 22